Asianet Suvarna News Asianet Suvarna News

16 ‘ಕಿರಿಯ ಸಂಪಾದಕ’ರ ಆಯ್ಕೆ : ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪ್ರಶಸ್ತಿ

ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಧ್ಯಮ ಸಂಸ್ಥೆಗಳು ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನೀಡುತ್ತಿರುವ ‘ಕಿರಿಯ ಸಂಪಾದಕ’ ಪ್ರಶಸ್ತಿಗೆ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ   ನಡೆಯಿತು. ರಾಜ್ಯ ಮಟ್ಟದಲ್ಲಿ 3 ಹಾಗೂ ಜಿಲ್ಲಾ ಮಟ್ಟದಲ್ಲಿ 16 ವಿದ್ಯಾರ್ಥಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು

16 members finalized for Kannadaprabha-Asianet Suvarna News Junior Editor awards snr
Author
Bengaluru, First Published Feb 27, 2021, 9:18 AM IST

 ಬೆಂಗಳೂರು (ಫೆ.27):  ಕನ್ನಡಪ್ರಭ- ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮಾಧ್ಯಮ ಸಂಸ್ಥೆಗಳು ರೇವಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನೀಡುತ್ತಿರುವ ‘ಕಿರಿಯ ಸಂಪಾದಕ’ ಪ್ರಶಸ್ತಿಗೆ ಪ್ರತಿಭಾವಂತ ವಿದ್ಯಾರ್ಥಿಗಳ ಆಯ್ಕೆ ಶುಕ್ರವಾರ ನಡೆಯಿತು. ರಾಜ್ಯ ಮಟ್ಟದಲ್ಲಿ 3 ಹಾಗೂ ಜಿಲ್ಲಾ ಮಟ್ಟದಲ್ಲಿ 16 ವಿದ್ಯಾರ್ಥಿಗಳನ್ನು ಪ್ರಶಸ್ತಿಗೆ ಅಂತಿಮಗೊಳಿಸಲಾಯಿತು. ತೀರ್ಪುಗಾರರಾಗಿ ಆಗಮಿಸಿದ್ದ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್‌) ವ್ಯವಸ್ಥಾಪಕ ನಿರ್ದೇಶಕ ಬಿ.ಸಿ.ಸತೀಶ್‌, ಖ್ಯಾತ ಪತ್ರಕರ್ತೆ-ನಿರೂಪಕಿ ವಾಸಂತಿ ಹರಿಪ್ರಕಾಶ್‌, ಹಿರಿಯ ಪತ್ರಕರ್ತ-ಪ್ರಸಿದ್ಧ ನಟ ಪ್ರಕಾಶ್‌ ಬೆಳವಾಡಿ, ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಶಾಮರಾಜು ಅವರು ಪ್ರಶಸ್ತಿ ಪುರಸ್ಕೃತರನ್ನು ಆರಿಸಿದರು.

ನಾಡಿನಾದ್ಯಂತ ವಿದ್ಯಾರ್ಥಿಗಳೇ ರಚಿಸಿರುವ ಸುದ್ದಿ ಪತ್ರಿಕೆಗಳಲ್ಲಿ ಉತ್ತಮವಾದುದನ್ನು ಆರಿಸುವ ಸ್ಪರ್ಧೆ ಇದಾಗಿದ್ದು, ಈ ಬಾರಿಯದು ‘ಕಿರಿಯ ಸಂಪಾದಕ’ ಪ್ರಶಸ್ತಿಯ 3ನೇ ಆವೃತ್ತಿ.

ರೈತ ರತ್ನ ಪ್ರಶಸ್ತಿ ತೀರ್ಪುಗಾರರ ಮನದಾಳದ ಮಾತುಗಳು ...

ಸುದೀರ್ಘ ಪ್ರಕ್ರಿಯೆ:  ಕಳೆದ ವರ್ಷವೇ ‘ಕಿರಿಯ ಸಂಪಾದಕ’ ಪ್ರಶಸ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳ ನಾನಾ ಶಾಲಾ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಲಕ್ಷಾಂತರ ವಿದ್ಯಾರ್ಥಿಗಳು ಅತ್ಯುತ್ಸಾಹದಿಂದ ಪತ್ರಿಕೆ ರಚಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಆದರೆ, ಅಷ್ಟರಲ್ಲಿ ಕೊರೋನಾ ಸಾಂಕ್ರಾಮಿಕ ನಮ್ಮ ದೇಶಕ್ಕೂ ದಾಳಿಯಿಟ್ಟಕಾರಣ ಶಾಲೆಗಳು ಬಂದ್‌ ಆಗಿ ವಿದ್ಯಾರ್ಥಿಗಳ ಉತ್ಸಾಹಕ್ಕೆ ತುಸು ಹಿನ್ನಡೆ ತಂದಿತ್ತು. ಆದಾಗ್ಯೂ, ಸಾವಿರಾರು ಅರ್ಜಿಗಳು ಬಂದಿದ್ದು, ಇದೀಗ ಅವುಗಳಲ್ಲಿ ಪ್ರಶಸ್ತಿಗೆ ಅರ್ಹವಾದವುಗಳ ಆಯ್ಕೆ ನಡೆದಿದೆ. ಮೊದಲ ಸುತ್ತಿನಲ್ಲಿ ಕನ್ನಡಪ್ರಭದ ಪುರವಣಿ, ಸುದ್ದಿ, ವರದಿಗಾರಿಕೆ, ವಿನ್ಯಾಸ ವಿಭಾಗದ ಪ್ರಮುಖರು ಪ್ರತಿಯೊಂದು ಅರ್ಜಿಗಳನ್ನು ಪರಿಶೀಲಿಸಿ ಉತ್ತಮ ಎನಿಸಿದ 48 ಅರ್ಜಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿದರು.

ಶುಕ್ರವಾರ ನಡೆದ ಅಂತಿಮ ಸುತ್ತಿನ ಆಯ್ಕೆ ವೇಳೆ, ತೀರ್ಪುಗಾರರು ಎಲ್ಲ 48 ಅರ್ಜಿಗಳನ್ನು ಪರಿಶೀಲಿಸಿ ಅಂತಿಮವಾಗಿ 16 ಪ್ರತಿಭಾನ್ವಿತ ಪತ್ರಿಕೆಗಳನ್ನು ಜಿಲ್ಲಾ ಮಟ್ಟದ ಪ್ರಶಸ್ತಿಗೆ ಆರಿಸಿದರು. ಈ ಪೈಕಿ ಅತ್ಯುತ್ತಮ ಎನಿಸಿದ 3 ಪತ್ರಿಕೆಗಳನ್ನು ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

ಕೆಎಂಎಫ್‌ ಮಾರುಕಟ್ಟೆವಿಭಾಗದ ನಿರ್ದೇಶಕ ಎಂ.ಟಿ.ಕುಲಕರ್ಣಿ, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ಪ್ರಧಾನ ಪುರವಣಿ ಸಂಪಾದಕ ಜೋಗಿ, ಕಾರ್ಯನಿರ್ವಾಹಕ ಸಂಪಾದಕ ರವಿಶಂಕರ್‌ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

Follow Us:
Download App:
  • android
  • ios