ಆಸ್ತಿ, ವಾಹನ ಕೊಳ್ಳಬೇಕಾ : ಸದ್ಯ ಇದಕ್ಕೆಲ್ಲಾ ಬ್ರೇಕ್‌

ರಾಜ್ಯದಲ್ಲಿ ಕೊರೋನಾ ಕರ್ಫ್ಯೂ ಹಿನ್ನೆಲೆಯಲ್ಲಿ 15 ದಿನಗಳ ಕಾಲ ವಿವಿಧ ಚಟುವಟಿಕೆಗಳು ಬಂದ್ ಇರಲಿದೆ. ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲಾ ಚಟುವಟಿಕೆಗಲಿಗೂ ನಿರ್ಬಂಧವಿದ್ದು, ಆಸ್ತಿ, ವಾಹನ ನೊಂದಣಿಗೂ ಅವಕಾಶವಿಲ್ಲ. 

15Days Corona  curfew No  Property And Vehicles Registration in Karnataka snr

 ಬೆಂಗಳೂರು (ಏ.27):  ರಾಜ್ಯದಲ್ಲಿ ಮತ್ತೆ ಕರ್ಫ್ಯೂ ಜಾರಿಯಾಗಿರುವುದರಿಂದ ವಾಹನಗಳ ನೋಂದಣಿ ಮತ್ತು ಕಂದಾಯ ಇಲಾಖೆಯಲ್ಲಿ ಆಸ್ತಿ ಪರಭಾರೆಗಳ ನೋಂದಣಿ ಪ್ರಕ್ರಿಯೆ ಕುರಿತು ಈವರೆಗೂ ಯಾವುದೇ ನಿರ್ಧಾರ ಕೈಗೊಳ್ಳದ ಪರಿಣಾಮ ಸಾರ್ವಜನಿಕರಲ್ಲಿ ಗೊಂದಲ ನಿರ್ಮಾಣವಾಗಿದೆ.

ಕೊರೋನಾ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯದಲ್ಲಿ ಮಂಗಳವಾರದಿಂದ 15 ದಿನಗಳ ಕಾಲ ಲಾಕ್‌ಡೌನ್‌ ರೀತಿಯ ನಿರ್ಬಂಧ ಜಾರಿ ಮಾಡಿ ಸರ್ಕಾರ ಘೋಷಣೆ ಮಾಡಿದೆ. ಆದರೆ, ಕಂದಾಯ ಇಲಾಖೆ ಮತ್ತು ಸಾರಿಗೆ ಇಲಾಖೆ ಲಾಕ್‌ಡೌನ್‌ ಸಂದರ್ಭದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿರ್ಧರಿಸಿಲ್ಲ.

14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ .

ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಎಲ್ಲ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಶೇ.50 ರಷ್ಟುಮಂದಿ ಸೇವೆಗೆ ಹಾಜರಾಗಲು ಸೂಚಿಸಲಾಗಿದ್ದು, ಹೊಸ ವಾಹನಗಳ ಖರೀದಿ ಮಾಡಿರುವವರು ಮುಂದಿನ 15 ದಿನಗಳ ಕಾಲ ನೋಂದಣಿ ಮಾಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಹೀಗಾಗಿ ಲಾಕ್‌ಡೌನ್‌ ಮುಕ್ತಾಯವಾಗುವವರೆಗೂ ಹೊಸ ವಾಹನಗಳ ನೋಂದಣಿ ಪ್ರಕ್ರಿಯೆ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಆನ್‌ಲೈನ್‌ ಸೇವೆ ಮುಂದುವರೆಕೆ:

ಸಾರಿಗೆ ಇಲಾಖೆಯಲ್ಲಿ ಚಾಲನಾ ಕಲಿಕಾ ಪರವಾನಿಗೆ, ಚಾಲನಾ ಪರವಾನಗಿ ಸೇರಿದಂತೆ ವಿವಿಧ ಸೌಲಭ್ಯಗಳಿಗೆ ಆನ್ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿದ್ದು, ಈ ಸೇವೆ ಮುಂದುವರೆಯಲಿದೆ. ಆನ್ಲೈನ್‌ನಲ್ಲಿ ಸ್ವೀಕರಿಸುವ ಅರ್ಜಿಗಳನ್ನು ಲಾಕ್‌ಡೌನ್‌ ಮುಕ್ತಾಯದ ಬಳಿಕ ಹಂತ ಹಂತವಾಗಿ ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಸಾರಿಗೆ ಇಲಾಖೆಯ ಎಲ್ಲ ಹಿರಿಯ ಅಧಿಕಾರಿಗಳು ಕರ್ತವ್ಯಕ್ಕೆ ಹಾಜರಾಗಲಿದ್ದರೆ. ಆದರೆ, ಸಿಬ್ಬಂದಿ ಮತ್ತು ನೌಕರರ ವರ್ಗದಲ್ಲಿ ಶೇ.50 ರಷ್ಟುಮಾತ್ರ ಸೇವೆಗೆ ಹಾಜರಾಗಲಿದ್ದು, ನೋಂದಣಿ ಪ್ರಕ್ರಿಯೆಗಳು ನಡೆಯಲು ಸಾಧ್ಯವಿಲ್ಲ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಾಹನ ಮಾರಾಟ ಸ್ಥಗಿತ:

ಲಾಕ್‌ಡೌನ್‌ ಸದರ್ಭದಲ್ಲಿ ಎಲ್ಲ ವಾಹನಗಳ ವ್ಯಾಪಾರ ಸ್ಥಗಿತವಾಗಿರಲಿದೆ. ಜೊತೆಗೆ, ಎಲ್ಲ ರೀತಿಯ ವ್ಯಾಪಾರ ವಹಿವಾಟಿ ಕಡಿವಾಣ ಇರಲಿದ್ದು, ಹೊಸ ವಾಹನಗಳ ಖರೀದಿಗೆ ಅವಕಾಶವಿರುವುದಿಲ್ಲ. ಹೀಗಾಗಿ ನೋಂದಣಿ ಪ್ರಕ್ರಿಯೆ ಸ್ಥಗಿತವಾಗಲಿದೆ. ಆದರೆ, ಈಗಾಗಲೇ ಖರೀದಿಯಾಗಿರುವ ವಾಹನಗಳ ನೋಂದಣಿ ಬಗ್ಗೆ ಈವರೆಗೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಸಾರಿಗೆ ಇಲಾಖೆ ಆಯುಕ್ತ ಕಚೇರಿ ಮೂಲಗಳು ಮಾಹಿತಿ ನೀಡಿವೆ.

ರಾಜ್ಯವನ್ನು ಸಂಪರ್ಕಿಸುವ ಎಲ್ಲ ಮಾರ್ಗಗಳಲ್ಲಿನ ಚೆಕ್‌ ಪೋಸ್ಟ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಹೇಳಿವೆ.

Latest Videos
Follow Us:
Download App:
  • android
  • ios