* ಈ ಹಣದಿಂದ ಮಕ್ಕಳ ಆಸ್ಪತ್ರೆಗೆ ಮೂಲಸೌಕರ್ಯ: ಡಾ. ಸುಧಾಕರ್* 3ನೇ ಅಲೆ ಮಕ್ಕಳನ್ನೇ ಬಾಧಿಸಲಿದೆ ಎಂಬುದು ದೃಢಪಟ್ಟಿಲ್ಲ* ಕೋವಿಡ್ ವಿಚಾರದಲ್ಲಿ ಯಾರೂ ಮೈಮರೆಯುವಂತಿಲ್ಲ
ದಾವಣಗೆರೆ(ಜು.11): ದೇಶದಲ್ಲಿ ಸಂಭಾವ್ಯ ಮೂರನೇ ಅಲೆ ಹಿನ್ನೆಲೆಯಲ್ಲಿ ವೈದ್ಯಕೀಯ ಮೂಲ ಸೌಕರ್ಯ ಕಲ್ಪಿಸಲು 23 ಸಾವಿರ ಕೋಟಿ ರು.ಗಳನ್ನು ನೀಡಲು ಪ್ರಧಾನಿ ಮೋದಿ ತೀರ್ಮಾನಿಸಿದ್ದಾರೆ. ಅದರಲ್ಲಿ 1500 ಕೋಟಿ ರು. ನಮ್ಮ ರಾಜ್ಯಕ್ಕೂ ಬರಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಇದೇ ವೇಳೆ, ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವ ಉದ್ದೇಶವಿದ್ದು, ದಾವಣಗೆರೆಯಲ್ಲೂ ಕಾಲೇಜು ಸ್ಥಾಪಿಸಲಾಗುವುದು ಎಂದು ಸಚಿವರು ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, 3ನೇ ಅಲೆ ಹಿನ್ನೆಲೆಯಲ್ಲಿ ಪ್ರತಿ ಜಿಲ್ಲೆ, ತಾಲೂಕುಗಳ ಮಕ್ಕಳ ವಿಭಾಗ ಮತ್ತು ಆಸ್ಪತ್ರೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಸಿದ್ಧತೆಗೆ ಕೇಂದ್ರ ಸರ್ಕಾರದಿಂದ 23 ಸಾವಿರ ಕೋಟಿ ನೀಡಲು ಪ್ರಧಾನಿ ನಿರ್ಧರಿಸಿದ್ದಾರೆ. ಜನಸಂಖ್ಯೆ ಆಧರಿಸಿ, ನಮ್ಮ ರಾಜ್ಯಕ್ಕೆ 1500 ಕೋಟಿ ರು. ಬರಲಿದೆ ಎಂದರು.
ಪಿಪಿಪಿ ಮಾದರಿ-ದಾವಣಗೆರೆ ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲ, ಅಲ್ಲೆಲ್ಲ ಪಿಪಿಪಿ ಮಾದರಿಯಲ್ಲೇ ಕಾಲೇಜು ನಿಮಿಸಲಾಗುವುದು. ದಾವಣಗೆರೆಯಲ್ಲಿ ಕಾಲೇಜು ಸ್ಥಾಪನೆ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪನವರ ಹಂತದಲ್ಲಿ ಚರ್ಚೆಯಾಗಿದೆ. ಕಾಲೇಜು ಸ್ಥಾಪಿಸುವ ಕಾರ‍್ಯ ಈ ವರ್ಷದೊಳಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಹೇಳಿದರು.
17 ದಿನದಲ್ಲಿ ಅರ್ಧ ಕೋಟಿ ಜನರಿಗೆ ಲಸಿಕೆ: ಸಚಿವ ಸುಧಾಕರ್
3ನೇ ಅಲೆ ಮಕ್ಕಳನ್ನೇ ಬಾಧಿಸಲಿದೆ ಎಂಬುದು ದೃಢಪಟ್ಟಿಲ್ಲ:
ಕೊರೋನಾ ಮೂರನೇ ಅಲೆ ಬಂದೇ ಬರುತ್ತದೆ. ಆದರೆ ಅದು ಮಕ್ಕಳನ್ನೇ ಬಾಧಿಸಲಿದೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಮಕ್ಕಳಿಗೆ ಸೋಂಕು ಬಂದರೂ ಅವರಿಗೆ ತೀವ್ರ ತೊಂದರೆ ಉಂಟಾಗುವುದಿಲ್ಲವೆಂದು ಅನೇಕ ವಿಜ್ಞಾನಿಗಳು ವರದಿ ನೀಡಿದ್ದಾರೆ. ಆದರೂ ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಡಾ.ಸುಧಾಕರ್ ಸ್ಪಷ್ಟಪಡಿಸಿದರು.
ಇದೇ ವೇಳೆ ಕೋವಿಡ್ ವಿಚಾರದಲ್ಲಿ ಯಾರೂ ಮೈಮರೆಯುವಂತಿಲ್ಲ. ಐಸಿಎಂಆರ್, ಎಐಎಂಎಸ್ ನಿರ್ದೇಶಕರು, ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆ ಸಹ ರಾಜ್ಯದಲ್ಲಿ ಸಾಕಷ್ಟುಮುನ್ನೆಚ್ಚರಿಕೆ, ಮುಂಜಾಗ್ರತೆ ವಹಿಸಬೇಕು ಎಂದು ಸೂಚಿಸಿವೆ. ನಾವು ಎಚ್ಚರಿಕೆ ತಪ್ಪಿದರೆ ಆಪತ್ತು ತಪ್ಪಿದ್ದಲ್ಲ ಎಂದರು.
