* ರಾಜ್ಯದಲ್ಲಿ ಈವರೆಗೆ 2.5 ಕೋಟಿ ಲಸಿಕೆ ವಿತರಣೆ* ಲಸಿಕೆ ನೀಡಿಕೆಯಲ್ಲಿ ರಾಜ್ಯ ದಕ್ಷಿಣ ಭಾರತಕ್ಕೆ ನಂ.1* ಬೆಂಗಳೂರು ಒಂದರಲ್ಲಿಯೇ 70 ಲಕ್ಷ ಡೋಸ್‌ ಲಸಿಕೆ ವಿತರಣೆ 

ಬೆಂಗಳೂರು(ಜು.11):  ರಾಜ್ಯದಲ್ಲಿ ಕೇವಲ 17 ದಿನಗಳಲ್ಲಿ ಅರ್ಧ ಕೋಟಿ ಮಂದಿಗೆ ಲಸಿಕೆ ನೀಡುವ ಮೂಲಕ ಆರೋಗ್ಯ ಇಲಾಖೆಯು ಒಟ್ಟಾರೆ ಎರಡೂವರೆ ಕೋಟಿ ಡೋಸ್‌ ಕೊರೋನಾ ಲಸಿಕೆ ನೀಡಿದ ಸಾಧನೆ ಮಾಡಿದೆ.

ಶುಕ್ರವಾರದ ಅಂತ್ಯಕ್ಕೆ ಮೊದಲ ಮತ್ತು ಎರಡನೇ ಡೋಸ್‌ ಸೇರಿ ಒಟ್ಟಾರೆ 2,52,59,868 ಡೋಸ್‌ ಕೊರೊನಾ ಲಸಿಕೆಯನ್ನು ವಿತರಿಸಲಾಗಿದ್ದು, ಕಳೆದ 17 ದಿನಗಳಲ್ಲಿ 51 ಲಕ್ಷ ಜನರಿಗೆ ಲಸಿಕೆ ನೀಡಲಾಗಿದೆ. ಇನ್ನು ಶನಿವಾರ ಮಧ್ಯಾಹ್ನ 3 ಗಂಟೆ ವೇಳೆಗೆ 1.94 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ.

ರಾಜ್ಯಕ್ಕೆ ಮಾಸಿಕ 1.5 ಕೋಟಿ ಲಸಿಕೆ ಕೊಡಿ: ಕೇಂದ್ರಕ್ಕೆ ಸುಧಾಕರ್‌ ಮೊರೆ

ಈ ಮೂಲಕ ಈವರೆಗೆ 2,54,76,197 ಮಂದಿಗೆ ಲಸಿಕೆ ನೀಡಿದಂತಾಗಿದೆ. ಒಟ್ಟಾರೆ 2,08,24,894 ಮಂದಿಗೆ ಮೊದಲ ಡೋಸ್‌ ಹಾಗೂ 46,51,303 ಮಂದಿಗೆ ಎರಡೂ ಡೋಸ್‌ ಲಸಿಕೆ ಪೂರ್ಣಗೊಂಡಿದೆ. ಬೆಂಗಳೂರು ಒಂದರಲ್ಲಿಯೇ 70 ಲಕ್ಷ ಡೋಸ್‌ ಲಸಿಕೆ ವಿತರಿಸಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಕರ್ನಾಟಕವು ಶುಕ್ರವಾರ 2.5 ಕೋಟಿ ಕೊರೋನಾ ಲಸಿಕೆ ದಾಟುವ ಮೂಲಕ ಮತ್ತೊಂದು ಮೈಲುಗಲ್ಲು ಸಾಧಿಸಿದೆ. ಕೊನೆಯ 50 ಲಕ್ಷ ಲಸಿಕೆಯನ್ನು ಕೇವಲ 17 ದಿನಗಳಲ್ಲಿ ನೀಡಲಾಗಿದೆ. ನಮ್ಮ ರಾಜ್ಯ ಭಾರತದಲ್ಲಿ 5ನೇ ಸ್ಥಾನ ಮತ್ತು ದಕ್ಷಿಣ ಭಾರತದಲ್ಲಿ ನಂ.1 ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.