ತುಮಕೂರು :  ‘ನಡೆದಾಡುವ ದೇವರು’ ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನಕ್ಕೆ ಹೊರ ರಾಜ್ಯ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಸುಮಾರು 15 ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಸೋಮವಾರ ಮಧ್ಯಾಹ್ನದಿಂದಲೇ ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿ ರಾಜ್ಯದ ಎಲ್ಲಾ ದಿಕ್ಕುಗಳಿಂದಲೂ ಭಕ್ತರು ಸಿದ್ಧಗಂಗೆ ಕಡೆ ಮುಖ ಮಾಡಿದರು. ಸೋಮವಾರ ಸಂಜೆಯಿಂದ ಮಂಗಳವಾರ ಮಧ್ಯಾಹ್ನದವರೆಗೆ 15 ಲಕ್ಷಕ್ಕೂ ಹೆಚ್ಚು ಮಂದಿ ಶ್ರೀಗಳ ಶಿವೈಕ್ಯ ಶರೀರದ ದರ್ಶನ ಮಾಡಿದರು. ಸಾಗರೋಪಾದಿಯಲ್ಲಿ ಬರುತ್ತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದರು.

ಪೂರ್ತಿ 24 ಗಂಟೆಗಳಿಗೂ ಹೆಚ್ಚು ಕಾಲ ಭಕ್ತರ ದರ್ಶನಕ್ಕೆ ಶ್ರೀಗಳ ಪಾರ್ಥಿವ ಶರೀರವನ್ನು ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಇರಿಸಲಾಗಿತ್ತು. ಸೋಮವಾರ ಸಂಜೆಯಿಂದ ಆರಂಭವಾದ ದರ್ಶನ ಮಂಗಳವಾರ ಸಂಜೆಯವರೆಗೂ ನಡೆಯಿತು. ಉತ್ತರ ಕರ್ನಾಟಕ, ಹಳೇ ಮೈಸೂರು, ಮಧ್ಯ ಕರ್ನಾಟಕ, ಹೈದರಾಬಾದ್‌ ಕರ್ನಾಟಕ ಹೀಗೆ ರಾಜ್ಯದ ಎಲ್ಲ ಭಾಗಗಳಿಂದಲೂ ಭಕ್ತರು ಸಿದ್ಧಗಂಗೆಗೆ ಬಂದರು. ಕೆಲವರು ಸ್ವಂತ ವಾಹನಗಳನ್ನು ಮಾಡಿಕೊಂಡು ಬಂದರೆ ಮತ್ತೆ ಕೆಲವರು ಬಸ್‌, ಲಾರಿ, ರೈಲುಗಳಲ್ಲಿ ಸಿದ್ಧಗಂಗೆಯತ್ತ ಧಾವಿಸಿದರು.

ಬಸ್‌, ರೈಲು ನಿಲ್ದಾಣಗಳಲ್ಲಿ ಜನಜಾತ್ರೆ

ಸೋಮವಾರ ಸಂಜೆಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಲಕ್ಷ ಲಕ್ಷ ಸಂಖ್ಯೆಯಲ್ಲಿ ಭಕ್ತರು ಬರುತ್ತಲೇ ಇದ್ದರು. ಶ್ರೀಗಳ ದರ್ಶನ ಪಡೆದು ಕಣ್ಣೀರಿಡುತ್ತಲೇ ವಾಪಸಾದರು. ಮಂಗಳವಾರ ಬೆಳಗಿನ ಜಾವ ನಿರೀಕ್ಷೆಗಿಂತ ತುಸು ಹೆಚ್ಚೇ ಎನಿಸುವಷ್ಟುಭಕ್ತರು ಆಗಮಿಸಿದರು. ಬಸ್‌ ನಿಲ್ದಾಣ, ರೈಲು ನಿಲ್ದಾಣದಲ್ಲಿ ಅಕ್ಷರಶಃ ಜನಸಂದಣಿ ಹೆಚ್ಚಾಗಿತ್ತು. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸುವ ಭಕ್ತರಿಗಾಗಿ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಲಾಗಿತ್ತು. ಆಗಮಿಸಿದ ಭಕ್ತರನ್ನು ಸಿದ್ಧಗಂಗಾ ಮಠಕ್ಕೆ ಕರೆದುಕೊಂಡು ಹೋಗಲಾಗುತ್ತಿತ್ತು. ಮಠದ ಹಿಂಬದಿಯಲ್ಲಿ ಸಾವಿರಾರು ವಾಹನಗಳ ನಿಲುಗಡೆ ಮಾಡಿದ್ದನ್ನು ನೋಡಿದರೆ ಶ್ರೀಗಳ ದರ್ಶನಕ್ಕೆ ಬಂದ ಜನಗಳ ಅಂದಾಜು ತಿಳಿಯುತ್ತಿತ್ತು.

15 ಕಿ.ಮೀ. ಉದ್ದ ಭಕ್ತರ ಸಾಲು
7 ತಾಸು ಕ್ಯೂ ನಿಂತು ದರ್ಶನ ಪಡೆದ ಜನರು

ತುಮಕೂರಿನ ಸಿದ್ಧಗಂಗೆಗೆ ಎರಡು ಮಾರ್ಗದಿಂದ ಜನರನ್ನು ಬಿಡಲು ಯೋಜಿಸಲಾಗುತ್ತಿತ್ತು. ಬಂಡೇಪಾಳ್ಯದಿಂದ ಒಂದು ಮಾರ್ಗ ಇನ್ನೊಂದು ಮಾರ್ಗ ಸಿದ್ಧಗಂಗೆಯ ಪ್ರವೇಶ ದ್ವಾರದಿಂದ. ಆದರೆ ನಿರೀಕ್ಷೆಗೂ ಮೀರಿ ಜನ ಹರಿದು ಬಂದ ಹಿನ್ನೆಲೆಯಲ್ಲಿ ಪೊಲೀಸರು ಹಳೇ ಎಚ್‌ಎಂಟಿ ಜಾಗದಿಂದ ಭಕ್ತರು ಸಿದ್ಧಗಂಗೆ ಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು. ಮಂಗಳವಾರ ಬೆಳಗ್ಗೆ 5 ಕಿ.ಮೀ. ಉದ್ದದ ಸಾಲು ಇದ್ದರೆ 12 ಗಂಟೆಯಾಗುವಷ್ಟರಲ್ಲಿ ಈ ಸಾಲು 15 ಕಿ.ಮೀ. ಉದ್ದ ಬೆಳೆಯಿತು. ದೇವರಾಯನದುರ್ಗ ಅರಣ್ಯ ರಸ್ತೆ ಮಾರ್ಗದಿಂದ ಆರಂಭವಾದ ಸರದಿ ಸಾಲು ಗೋಸಲ ಸಿದ್ದೇಶ್ವರ ವೇದಿಕೆಗೆ ಬರಲು 3 ಸಾಲಿನ 6 ಲೈನ್‌ಗಳನ್ನು ಮಾಡಲಾಯಿತು. ಆಮೆ ವೇಗದಲ್ಲಿ ಮಾತ್ರ ಜನ ಸಂಚರಿಸಲು ಸಾಧ್ಯವಾಗುವಷ್ಟುಜನ ಸಾಗರವೇ ಸೇರಿತ್ತು. ಬೆಳಗಿನ ಜಾವ 3 ಗಂಟೆಗೆ ಬಂದವರಿಗೆ ದರ್ಶನ ಆಗಿದ್ದು ಮಧ್ಯಾಹ್ನ 10 ಗಂಟೆಗೆ. ಸುಮಾರು 7 ಗಂಟೆಗಳ ಕಾಲ ಕ್ಯೂ ನಿಂತು ಶ್ರೀಗಳ ದರ್ಶನ ಮಾಡಿ ಹೋದರು.

ಮೊಳಗಿತು ಓಂ ನಮಃ ಶಿವಾಯಃ

ಗಂಟೆಗಟ್ಟಲೆಗಳ ಕಾಲ ಸರತಿ ಸಾಲಿನಲ್ಲಿ ನಿಂತಿದ್ದ ಲಕ್ಷಾಂತರ ಭಕ್ತರು ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಜೈಕಾರ ಹಾಕುತ್ತಾ ಓಂ ನಮಃ ಶಿವಾಯಃ ಎಂಬ ಮಂತ್ರ ಪಠಿಸುತ್ತಿದ್ದರು. ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರೆಲ್ಲಾ ಶ್ರೀಗಳ ಗುಣಗಾನ ಮಾಡುವುದು, ಸಿದ್ಧಗಂಗಾ ಯತಿಗಳ ಸರಳತೆ, ಅವರ ಮಾತೃ ಹೃದಯವನ್ನು ಕೊಂಡಾಡುತ್ತಿದ್ದರು. ಕೆಲ ಭಕ್ತರಂತೂ ತಮ್ಮೊಟ್ಟಿಗೆ ಶ್ರೀಗಳ ಭಾವಚಿತ್ರವನ್ನು ತಂದು ಜನರಿಗೆ ಆ ಫೋಟೋವನ್ನು ತೋರಿಸಿ ಧನ್ಯತೆ ಮೆರೆಯುತ್ತಿದ್ದರು.

ಲಕ್ಷಾಂತರ ಭಕ್ತರಿಗೆ ದರ್ಶನವಿಲ್ಲ

24 ಗಂಟೆಗಳಲ್ಲಿ 15 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರೆ ಇನ್ನುಳಿದ ಲಕ್ಷಾಂತರ ಭಕ್ತರಿಗೆ ಶ್ರೀಗಳ ದರ್ಶನ ಸಾಧ್ಯವಾಗದೇ ಹೋಯಿತು. ದೂರದೂರದ ಊರುಗಳಿಂದ ಆಗಮಿಸಿದ್ದ ಭಕ್ತರು ಶ್ರೀಗಳ ಪಾರ್ಥಿವ ಶರೀರವನ್ನು ಕೊನೆಯ ಬಾರಿ ನೋಡಬೇಕೆಂಬ ಅದಮ್ಯ ಆಸೆ ಹೊಂದಿದ್ದರು. ಆದರೆ ಕ್ರಿಯಾವಿಧಿಗೆ ತೆರಳಬೇಕಾಗಿದ್ದರಿಂದ ಮಂಗಳವಾರ ಸಂಜೆ ಬಳಿಕ ದರ್ಶನ ನಿರಾಕರಿಸಲಾಯಿತು. ಹೀಗಾಗಿ ಕೆಲ ಭಕ್ತರು ದೂರದೂರಿಂದ ಬಂದಿದ್ದೇವೆ, ಸ್ವಾಮೀಜಿಗಳ ಮುಖವನ್ನು ಒಮ್ಮೆ ನೋಡಿಕೊಂಡು ಹೋಗುತ್ತೇವೆ ಎಂದು ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪ್ರಸಾದ, ಮಜ್ಜಿಗೆ ವಿತರಣೆ: ಭಕ್ತರಿಗೆ ಅಚ್ಚುಕಟ್ಟು ವ್ಯವಸ್ಥೆ

ಶ್ರೀಗಳ ಅಂತಿಮ ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆ ಆಗಬಾರದೆಂದು ಪೊಲೀಸರು, ಜಿಲ್ಲಾಡಳಿತ ಸಾಕಷ್ಟುಮಂಜಾಗ್ರತಾ ಕ್ರಮ ಕೈಗೊಂಡಿತ್ತು. ಅಲ್ಲಲ್ಲಿ ಅರವಟ್ಟಿಗೆಗಳನ್ನು ಸ್ಥಾಪಿಸಲಾಗಿತ್ತು. ದೂರದೂರಿಂದ ಬಂದ ಭಕ್ತರು ಸ್ವಯಂ ಪ್ರೇರಿತರಾಗಿ ಪ್ರಸಾದ ವ್ಯವಸ್ಥೆ ಮಾಡಿದ್ದರು. ಮಧ್ಯಾಹ್ನ ಸುಡು ಬಿಸಿಲಿನಲ್ಲಿ ಭಕ್ತರಿಗೆ ಮಜ್ಜಿಗೆ ವ್ಯವಸ್ಥೆ ಕೂಡ ಮಾಡಲಾಗಿತ್ತು. ಲಕ್ಷಾಂತರ ಜನ ಬರುವ ನಿರೀಕ್ಷೆ ಇದ್ದುದ್ದರಿಂದ ಧೂಳು ಏಳಬಾರದೆಂಬ ಕಾರಣಕ್ಕೆ ಮೈದಾನಕ್ಕೆ ನೀರು ಹಾಯಿಸಲಾಗಿತ್ತು. ಎಲ್ಲೆಡೆ ಪೊಲೀಸರ ಸರ್ಪ ಗಾವಲು ಹಾಕಲಾಗಿತ್ತು.

20 ಸಾವಿರ ಪೊಲೀಸರಿಂದ ಭದ್ರತೆ

ಅಂತಿಮ ದರ್ಶನಕ್ಕೆ 15 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರ ಆಗಮನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಂದ 20 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್‌್ತಗಾಗಿ ನಿಯೋಜಿಸಲಾಗಿತ್ತು. ಸಾಗರೋಪಾದಿಯಲ್ಲಿ ಬರುವ ಜನರನ್ನು ನಿಯಂತ್ರಿಸಲು ಇಷ್ಟುದೊಡ್ಡ ಸಂಖ್ಯೆಯ ಪೊಲೀಸರಿದ್ದರೂ ಹರಸಾಹಸ ಪಡಬೇಕಾಯಿತು. ಸಿದ್ಧಗಂಗೆ ಪ್ರವೇಶಕ್ಕೆ ಎರಡು ಕಡೆ ವ್ಯವಸ್ಥೆ ಮಾಡಿದ್ದರೂ ಭಕ್ತರನ್ನು ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ. ಅದರಲ್ಲೂ ಕ್ಯಾತ್ಸಂದ್ರ ರೈಲ್ವೆ ಗೇಟ್‌ ಹಾಕಿದಾಗ ಎಲ್ಲೆಡೆಯಿಂದ ಬಂದ ಜನರು ರೈಲು ಹೋಗುವ ತನಕ ನಿಲ್ಲಬೇಕಾಗುತ್ತಿತ್ತು. ರೈಲು ಹೋದ ನಂತರ ರೈಲ್ವೆ ಗೇಟ್‌ ತೆಗೆದ ಕೂಡಲೇ ಸಹಸ್ರಾರು ಮಂದಿ ಭಕ್ತರು ಮಠದತ್ತ ಹೆಜ್ಜೆ ಹಾಕುತ್ತಿದ್ದರು.

ಎಲ್ಲಿ ನೋಡಿದರೂ ಜನವೋ ಜನ

ಸಿದ್ಧಗಂಗೆ ಸುತ್ತಮುತ್ತವಷ್ಟೆಅಲ್ಲ ಕ್ಯಾತ್ಸಂದ್ರ, ಹೆದ್ದಾರಿಗಳಲ್ಲೂ ಜನ ಸಾಗರವೇ ಸೇರಿತ್ತು. ಹಳೆ ಎಚ್‌ಎಂಟಿಯಿಂದ ಸಿದ್ಧಗಂಗೆಯ ಗೋಸಲ ಸಿದ್ದೇಶ್ವರ ವೇದಿಕೆವರೆಗಿನ ಜನ ಸಾಗರ ಊಹಿಸಲು ಆಗದಷ್ಟುದೊಡ್ಡದಿತ್ತು. ಕೆಲವು ಸಲವಂತೂ ನೂಕು ನುಗ್ಗಲು ಕೂಡ ಉಂಟಾಯಿತು.

ರಾಷ್ಟ್ರೀಯ ಹೆದ್ದಾರಿ ಬಂದ್‌

ತುಮಕೂರಿನಿಂದ ಟೋಲ್‌ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಲಾಗಿತ್ತು. ನಿರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ಬಟವಾಡಿ ಬಳಿಯೇ ಹೆದ್ದಾರಿ ಮೂಲಕ ಯಾವುದೇ ವಾಹನ ಬಿಡುತ್ತಿರಲಿಲ್ಲ. ಮಠಕ್ಕೆ ಸಂಬಂಧಿಸಿದ ವಾಹನಗಳನ್ನು ಬಿಟ್ಟರೆ ಬೇರೆ ಯಾವುದೇ ವಾಹನಗಳಿಗೆ ಹೆದ್ದಾರಿಯಲ್ಲಿ ಪ್ರವೇಶ ನಿರಾಕರಿಸಲಾಗಿತ್ತು. ಸಿದ್ಧಗಂಗೆ ಪ್ರವೇಶಿಸುವ ಕ್ಯಾತ್ಸಂದ್ರ ಸರ್ಕಲ್‌ನಲ್ಲಂತೂ ಜನಜಂಗುಳಿ ಹೇಳತೀರದಷ್ಟಿತ್ತು. ಬೆಂಗಳೂರಿನಿಂದ ಬರುವ ಗಣ್ಯಾತಿಗಣ್ಯರು ಸಿದ್ಧಗಂಗೆಗೆ ಪ್ರವೇಶ ಮಾಡಬೇಕೆಂದರೆ ಕ್ಯಾತ್ಸಂದ್ರ ಸರ್ಕಲ್‌ ಮೂಲಕವೇ ಹೋಗಬೇಕು. ಹೀಗಾಗಿ ಜನಜಂಗುಳಿ ನಿಯಂತ್ರಿಸಲು ದೊಡ್ಡ ಸಂಖ್ಯೆಯ ಪೊಲೀಸರು ಜಮಾಯಿಸಿದ್ದರು.

ನಿರೀಕ್ಷೆಗೂ ಮೀರಿದ ಜನರು ಬಂದಿದ್ದರಿಂದ ಟ್ರಾಫಿಕ್‌ ಜಾಂ

ನಿರೀಕ್ಷೆಗೂ ಮೀರಿ ಜನ ಹಾಗೂ ವಾಹನಗಳು ಬಂದ ಹಿನ್ನೆಲೆಯಲ್ಲಿ ಪಾರ್ಕಿಂಗ್‌ ಜಾಗದಲ್ಲಿ ಅಕ್ಷರಶಃ ಕೆಲ ಕಾಲ ಟ್ರಾಫಿಕ್‌ ಸಮಸ್ಯೆ ಉಂಟಾಯಿತು. ಬಸ್‌ ನಿಲ್ದಾಣದಿಂದ ಸಿದ್ಧಗಂಗೆಗೆ ಬಂದ ಬಸ್‌ಗಳು ಮತ್ತೆ ಜನರನ್ನು ಕರೆದುಕೊಂಡು ಬರಲು ಬಸ್‌ ನಿಲ್ದಾಣಕ್ಕೆ ಹೋಗಲು ಹರಸಾಹಸ ಪಡಬೇಕಾಗಿತ್ತು. ಇನ್ನು ಬೈಕ್‌ಗಳು, ಕಾರುಗಳು ಲೆಕ್ಕವಿಲ್ಲದಷ್ಟುಜಮಾಯಿಸಿದ್ದು ಬಹುಶಃ ರಾತ್ರಿಯಾದರೂ ಟ್ರಾಫಿಕ್‌ ಸಮಸ್ಯೆ ನೀಗಿಸುವ ದೊಡ್ಡ ಸವಾಲು ಪೊಲೀಸಿನರವದ್ದಾಗಿತ್ತು. ಒಟ್ಟಾರೆ ಈ ಮೊದಲು ಶ್ರೀಗಳ ದರ್ಶನಕ್ಕೆ 10 ಲಕ್ಷ ಮಂದಿ ಬರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಎಲ್ಲರ ಅಂದಾಜನ್ನು ಮೀರಿ 15 ಲಕ್ಷ ಕ್ಕೂ ಹೆಚ್ಚು ಮಂದಿ ದರ್ಶನ ಪಡೆದರು. ಅಲ್ಲದೇ ಲಕ್ಷಾಂತರ ಮಂದಿ ಭಕ್ತರಿಗೆ ದರ್ಶನ ಕೂಡ ಸಿಗದಂತಾಯಿತು.

3 ಗಂಟೆಯೊಳಗೆ ಇದ್ದವರಿಗಷ್ಟೇ ದರ್ಶನ

ಸಂಜೆ 4 ಗಂಟೆ ಬಳಿಕ ಭಕ್ತರಿಗೆ ದರ್ಶನ ನಿರಾಕರಿಸಿದ್ದರಿಂದ ಲಕ್ಷಾಂತರ ಭಕ್ತರು ಬೇಸರಗೊಂಡರು. ರಾತ್ರಿ 8 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಿ ಎಂದು ಭಕ್ತರು ಬೇಡಿಕೊಳ್ಳುತ್ತಿದ್ದರು. 3 ಗಂಟೆಯೊಳಗೆ ಮಠ ಪ್ರವೇಶಿಸಿದ ಭಕ್ತರಿಗೆ ಮಾತ್ರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಆವರಣದಿಂದ ಹೊರಗೆ ಇದ್ದವರು ಪ್ರವೇಶ ಸಿಗದೆ ನಿರಾಸೆಯಿಂದ ವಾಪಸಾದರು.

ಎಲ್ಲಿಂದ ಎಲ್ಲಿಗೆ?: ಹಳೇ ಎಚ್‌ಎಂಟಿ ಜಾಗದಿಂದ ಗೋಸಲ ಸಿದ್ದೇಶ್ವರ ವೇದಿಕೆಗೆ ಬರುವುದು ನಿಜಕ್ಕೂ ದೊಡ್ಡ ಸಾಹಸವೇ. ದೇವರಾಯನದುರ್ಗ ಅರಣ್ಯ ಪ್ರದೇಶ ರಸ್ತೆಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮೊದಲುಗೊಂಡು ಸಿದ್ಧಗಂಗೆ ಪ್ರವೇಶ ಮಾಡಿ ಅಲ್ಲಿಂದ ವಿದ್ಯಾರ್ಥಿನಿಲಯಗಳ ಹಾಸ್ಟೆಲ್‌ಗಳನ್ನು ದಾಟಿ ಮತ್ತೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಹೋಗಿ, ಅಲ್ಲಿಂದ ಗೋಸಲ ಸಿದ್ದೇಶ್ವರ ವೇದಿಕೆ ಬಳಿ ಬರುವಷ್ಟರಲ್ಲಿ ಭಕ್ತರು ಅಕ್ಷರಶಃ ಹೈರಾಣಾಗಿ ಹೋದರು. ಸುಮಾರು 8 ರಿಂದ 10 ಗಂಟೆಗಳ ಕಾಲ ಸರದಿಯಲ್ಲಿ ನಿಂತು ಜನ ಶ್ರೀಗಳ ಪಾರ್ಥಿವ ಶರೀರ ದರ್ಶನ ಮಾಡಿದರು.

ವರದಿ :  ಉಗಮ ಶ್ರೀನಿವಾಸ್‌