ಕರ್ನಾಟಕದಲ್ಲಿ 1478 ಕೋವಿಡ್ ಕೇಸ್: 152 ದಿನಗಳಲ್ಲೇ ಗರಿಷ್ಠ..!
ರಾಜ್ಯದಲ್ಲಿ ಬುಧವಾರ 3.01 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಮೂರನೇ ಡೋಸ್ ಅನ್ನು ಉಚಿತ ಮಾಡಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಉತ್ಸಾಹ ಕಂಡು ಬಂದಿದ್ದು 2.47 ಲಕ್ಷ ಮೂರನೇ ಡೋಸ್ ಪ್ರದಾನ ಮಾಡಲಾಗಿದೆ
ಬೆಂಗಳೂರು(ಜು.21): ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ಪ್ರಮಾಣ ಹೆಚ್ಚುತ್ತಿರುವಂತೆ ಹೊಸ ಸೋಂಕಿತರ ಪತ್ತೆಯೂ ಹೆಚ್ಚುತ್ತಿದೆ. ಬುಧವಾರ 32,263 ಕೋವಿಡ್ ಪರೀಕ್ಷೆ ನಡೆದಿದ್ದು, ಕಳೆದ 152 ದಿನದ ಗರಿಷ್ಠ 1,478 ಮಂದಿ ಸೋಂಕಿತರಾಗಿದ್ದಾರೆ. ಮೂರನೇ ಅಲೆ ಕ್ಷೀಣವಾಗುತ್ತಿದ್ದ ಫೆಬ್ರವರಿ 17ರಂದು 1,529 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಇದಾದ ಬಳಿಕದ ಗರಿಷ್ಠ ಪ್ರಕರಣ ಬುಧವಾರ ವರದಿಯಾಗಿದೆ. ಕಳೆದ ಮೂರು ದಿನಗಳಿಂದ ನಿರಂತರವಾಗಿ ಸೋಂಕಿತರ ಸಂಖ್ಯೆ ಒಂದು ಸಾವಿರ ಮೀರಿದೆ.
ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಪ್ರತಿದಿನ 30 ಸಾವಿರ ಮೀರಿ ಕೋವಿಡ್ ಪರೀಕ್ಷೆ ನಡೆಸುವಂತೆ ಹೇಳಿದ್ದರೂ ಕೂಡ ಮಾರ್ಚ್ ಬಳಿಕ ಎರಡನೇ ಬಾರಿಗೆ 30 ಸಾವಿರಕ್ಕಿಂತ ಹೆಚ್ಚು ಪರೀಕ್ಷೆ ನಡೆದಿದೆ. ಪಾಸಿಟಿವಿಟಿ ದರ ಶೇ.4.56 ದಾಖಲಾಗಿದೆ. 1,229 ಮಂದಿ ಗುಣಮುಖರಾಗಿದ್ದಾರೆ. ಕೋವಿಡ್‌ನಿಂದ ಮೃತಪಟ್ಟಿರುವುದು ವರದಿಯಾಗಿಲ್ಲ.
CORONA CRISIS: ಕರ್ನಾಟಕದಲ್ಲಿ ಸತತ 2ನೇ ದಿನವೂ 1000+ ಕೋವಿಡ್ ಕೇಸ್
8 ಜಿಲ್ಲೆಯಲ್ಲಿ ಎರಡಂಕಿ:
ಹೊಸ ಸೋಂಕಿತರು ಬೆಂಗಳೂರು ನಗರದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಪತ್ತೆ ಆಗುತ್ತಿದ್ದರೂ ಅನ್ಯ ಜಿಲ್ಲೆಗಳಲ್ಲಿಯೂ ಹೊಸ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಿದೆ. ಕೆಲ ದಿನಗಳ ಹಿಂದೆ ಬೆಂಗಳೂರು ನಗರ ಹೊರತು ಪಡಿಸಿ ಎರಡ್ಮೂರು ಜಿಲ್ಲೆಯಲ್ಲಿ ಮಾತ್ರ ಎರಡಂಕಿಯಲ್ಲಿ ಪ್ರಕರಣ ವರದಿ ಆಗುತ್ತಿತ್ತು. ಆದರೆ ಬುಧವಾರ ರಾಜ್ಯದ ಉತ್ತರ, ದಕ್ಷಿಣ ಮತ್ತು ಕರಾವಳಿ ಹೀಗೆ ಎಲ್ಲ ವಲಯದ 8 ಜಿಲ್ಲೆಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಎರಡಂಕಿ ದಾಟಿದೆ.
ಬೆಂಗಳೂರು ನಗರದಲ್ಲಿ 1,251 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದೆ. ಉಳಿದಂತೆ ಬೆಂಗಳೂರು ಗ್ರಾಮಾಂತರ 32, ಮೈಸೂರು 24, ಧಾರವಾಡ 18, ಬೆಳಗಾವಿ ಮತ್ತು ಬಾಗಲಕೋಟೆ ತಲಾ 15, ಕೋಲಾರ 13, ಬಳ್ಳಾರಿ 12, ಉತ್ತರ ಕನ್ನಡ ಜಿಲ್ಲೆಯಲ್ಲಿ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
Booster Dose: 3ನೇ ಡೋಸ್ ಪಡೆದಿದ್ದು ಬರೀ 15% ಜನ!
ರಾಜ್ಯದಲ್ಲಿ ಈವರೆಗೆ ಒಟ್ಟು 39.90 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು 39.42 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,089 ಮಂದಿ ಮರಣವನ್ನಪ್ಪಿದ್ದಾರೆ.
ಲಸಿಕೆ ಅಭಿಯಾನ:
ರಾಜ್ಯದಲ್ಲಿ ಬುಧವಾರ 3.01 ಲಕ್ಷ ಮಂದಿ ಕೋವಿಡ್ ಲಸಿಕೆ ಪಡೆದಿದ್ದಾರೆ. ಮೂರನೇ ಡೋಸ್ ಅನ್ನು ಉಚಿತ ಮಾಡಿರುವ ಹಿನ್ನೆಲೆಯಲ್ಲಿ ಲಸಿಕೆ ಪಡೆಯಲು ಹೆಚ್ಚಿನ ಉತ್ಸಾಹ ಕಂಡು ಬಂದಿದ್ದು 2.47 ಲಕ್ಷ ಮೂರನೇ ಡೋಸ್ ಪ್ರದಾನ ಮಾಡಲಾಗಿದೆ. ಉಳಿದಂತೆ 11,680 ಮಂದಿ ಮೊದಲ ಡೋಸ್ ಮತ್ತು 41,689 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. ಈವರೆಗೆ ಒಟ್ಟು 11.44 ಕೋಟಿ ಡೋಸ್ ಲಸಿಕೆ ಪ್ರದಾನ ಮಾಡಲಾಗಿದೆ.