14 ದಿನ ಜನತಾ ಕರ್ಫ್ಯೂ ಆರಂಭ| ಜೀವನಾವಶ್ಯಕ ಸೇವೆ ಬಿಟ್ಟು ಇನ್ನೆಲ್ಲವೂ ಬಂದ್‌| ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ದಿನಸಿ ಖರೀದಿ| ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌, ಮೆಟ್ರೋ ಸ್ಥಗಿತ

ಬೆಂಗಳೂರು(ಏ.28): ರಾಜ್ಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಕೋವಿಡ್‌ 2ನೇ ಅಲೆಯ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕಠಿಣ ಜನತಾ ಕಫ್ರ್ಯೂ ಮಂಗಳವಾರ ರಾತ್ರಿ 9ರಿಂದ ಜಾರಿಗೊಂಡಿದ್ದು, ಮೇ 12ರ ಬೆಳಗ್ಗೆ 6 ಗಂಟೆವರೆಗೆ ಜಾರಿಯಲ್ಲಿರಲಿದೆ.

ಜೀವನಾವಶ್ಯಕ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲ ವಹಿವಾಟು, ಜನ ಜೀವನ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ಕಠಿಣ ಜನತಾ ಕಫä್ರ್ಯಗಾಗಿ ರಾಜ್ಯಾದ್ಯಾಂತ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ. ಕಳೆದ ವಾರದ ಇದ್ದ ವೀಕೆಂಡ್‌ ಕಫä್ರ್ಯ ಬಳಿಕ ಮೊದಲ ಬಾರಿಗೆ ವಿಧಿಸಿರುವ ಜನತಾ ಕಫä್ರ್ಯ ಇದಾಗಿದ್ದು, ಸಾರ್ವಜನಿಕರು ಅನಗತ್ಯವಾಗಿ ರಸ್ತೆಗಿಳಿಯದಂತೆ ನಿರ್ದೇಶಿಸಲಾಗಿದೆ. ಎಲ್ಲಾ ಜಿಲ್ಲಾ ಗಡಿಯಲ್ಲಿ ಪೊಲೀಸರು ಚೆಕ್‌ ಪೋಸ್ಟ್‌ ನಿರ್ಮಾಣ ಮಾಡಿದ್ದಾರೆ. ತುರ್ತು ಹಾಗೂ ಅಗತ್ಯ ಸೇವೆಗಳನ್ನು ಹೊರತುಪಡಿಸಿ ಪ್ರತಿಯೊಂದು ವಾಹನಗಳನ್ನು ಪೊಲೀಸರು ಪರಿಶೀಲನೆ ನಡೆಸಲಿದ್ದಾರೆ.

ರಾಜಧಾನಿ ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ಕೋವಿಡ್‌ ಮಾರ್ಗಸೂಚಿ ಉಸ್ತುವಾರಿ ಹೊಣೆ ಹೊರಿಸಲಾಗಿದೆ.

ಅಗತ್ಯ ವಸ್ತು ಅಂಗಡಿಗೆ 4 ಗಂಟೆ ಅವಕಾಶ:

ಜನತಾ ಕಫ್ರ್ಯೂ ಜಾರಿಯಲ್ಲಿರುವ ಈ 14 ದಿನಗಳ ಅವಧಿಯಲ್ಲಿ ದಿನಸಿ, ಹಾಲು, ಹಣ್ಣು, ತರಕಾರಿ, ಮಾಂಸದಂತಹ ಅಗತ್ಯ ವಸ್ತುಗಳ ಅಂಗಡಿಗಳನ್ನು ತೆರೆಯಲು ಬೆಳಗ್ಗೆ 6ರಿಂದ 10 ವರೆಗೆ ಮಾತ್ರ ಅವಕಾಶವಿರುತ್ತದೆ. ಸಾರ್ವಜನಿಕರಿಗೆ ಈ ನಾಲ್ಕು ತಾಸಿನ ಅವಧಿಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಎಲ್ಲಾ ಅಂಗಡಿಗಳು ಬಂದ್‌ ಆಗಲಿವೆ. ನಂತರ ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರುವಂತಿಲ್ಲ. ಆರೋಗ್ಯ ಸೇವೆ, ತುರ್ತು ಅನಿವಾರ್ಯವಿದ್ದರೆ ಮಾತ್ರ ಕನಿಷ್ಠ ದಾಖಲೆಗಳೊಂದಿಗೆ ಸ್ವಂತ ವಾಹನಗಳಲ್ಲಿ ಸಂಚರಿಸಬಹುದು.

ಹೋಟೆಲ್‌ ರೆಸ್ಟೋರೆಂಟ್‌ಗಳಲ್ಲಿ ಪಾರ್ಸೆಲ್‌ಗೆ ಮಾತ್ರ ಅವಕಾಶ ಇರಲಿದೆ. ಮದ್ಯದಂಗಡಿಗಳು ಬೆಳಗ್ಗೆ 6ರಿಂದ 10 ಗಂಟೆವರೆಗೆ ಮಾತ್ರ ಪಾರ್ಸೆಲ್‌ ನೀಡಬಹುದು. ಕೃಷಿ ಚಟುವಟಿಕೆಗಳು, ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಅವಕಾಶವಿದೆ.

ಗೂಡ್ಸ್‌ ವಾಹನಗಳು ಮಾತ್ರ ಸಂಚಾರ:

ಸಾರಿಗೆ ಸಂಚಾರ ಸಂಪೂರ್ಣ ಸ್ತಬ್ಧವಾಗಿರಲಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ಸರ್ಕಾರದ ನಾಲ್ಕು ಸಾರಿಗೆ ನಿಗಮಗಳ ಎಲ್ಲಾ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳ ಸಂಚಾರ ಪೂರ್ಣ ಸ್ಥಗಿತಗೊಳಿಸಲಾಗಿದೆ. ಬೆಂಗಳೂರಲ್ಲಿ ಮೆಟ್ರೋ ರೈಲು ಕೂಡ ಸಂಚರಿಸುವುದಿಲ್ಲ. ಆ್ಯಪ್‌ ಆಧಾರಿತ ಟ್ಯಾಕ್ಸಿ ಹಾಗೂ ಆಟೋ ಸೇವೆಯೂ ಇರುವುದಿಲ್ಲ. ಆದರೆ, ಗೂಡ್ಸ್‌ ವಾಹನಗಳ ಸಂಚಾರಕ್ಕೆ ಯಾವುದೇ ನಿರ್ಬಂಧವಿಲ್ಲ. ವಿಮಾನ, ರೈಲು ಎಂದಿನಂತೆ ಸಂಚರಿಸಲಿವೆ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಗಳಿಗೆ ಸಂಚರಿಸುವ ಪ್ರಯಾಣಿಕರಿಗಾಗಿ ಈ ಸ್ಥಳಗಳಿಗೆ ತೆರಳುವ ಬಸ್‌ಗಳು ಮತ್ತು ಟ್ಯಾಕ್ಸಿಗಳಿಗೆ ಅವಕಾಶ ನೀಡಲಾಗಿದೆ. ಕಡ್ಡಾಯವಾಗಿ ಇಂತಹ ಪ್ರಯಾಣಿಕರು ಟಿಕೆಟ್‌ ಹೊಂದಿರಬೇಕು.

ಸಭೆ-ಸಮಾರಂಭಗಳು ಬಂದ್‌:

ಯಾವುದೇ ರಾಜಕೀಯ, ಧಾರ್ಮಿಕ, ಸಾಮಾಜಿಕ ಸಭೆ ಸಮಾರಂಭಗಳನ್ನು ನಡೆಸುವಂತಿಲ್ಲ. ಚಿತ್ರಮಂದಿರ ಶಾಪಿಂಗ್‌ ಮಾಲ್‌, ಯೋಗ ಕೇಂದ್ರ, ಕ್ರೀಡಾಂಗಣ, ಈಜುಕೊಳ, ಪಾರ್ಕ್, ಆಟದ ಮೈದಾನಗಳನ್ನು ತೆರೆಯುವಂತಿಲ್ಲ. ಮದುವೆಗೆ 20 ಜನ, ಅಂತ್ಯಕ್ರಿಯೆಗೆ ಐದಕ್ಕಿಂತ ಹೆಚ್ಚು ಜನ ಭಾಗವಹಿಸುವಂತಿಲ್ಲ.

ಗಾರ್ಮೆಂಟ್ಸ್‌ ಬಿಟ್ಟು ಉಳಿದ ಕೈಗಾರಿಕೆ ಓಪನ್‌:

ಆರ್ಥಿಕ ಚಟುವಟಿಕೆಗೆ ಪೂರ್ಣ ಹೊಡೆತ ಬೀಳದಂತೆ ನೋಡಿಕೊಳ್ಳಲು ಹೆಚ್ಚಿನ ನೌಕರರನ್ನು ಒಳಗೊಂಡ ಗಾರ್ಮೆಂಟ್ಸ್‌ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಉತ್ಪಾದನಾ ವಲಯದ ಕೈಗಾರಿಕೆಗಳು ಕಾರ್ಯನಿರ್ವಹಿಸಲಿವೆ. ಬ್ಯಾಂಕ್‌, ಸರ್ಕಾರಿ ಕಚೇರಿ, ಪೆಟ್ರೋಲ್‌ ಬಂಕ್‌, ಇ-ಕಾಮರ್ಸ್‌ ಕಚೇರಿಗಳು ಕೂಡ ಕಾರ್ಯನಿರ್ವಹಿಸಲಿವೆ. ಇಲ್ಲಿ ಕೆಲಸ ನಿರ್ವಹಿಸುವ ಉದ್ಯೋಗಿಗಳು ಕಡ್ಡಾಯವಾಗಿ ಸಂಸ್ಥೆಯ ಗುರುತಿನ ಚೀಟಿ ತೋರಿಸಿ ಸಂಚರಿಸಬೇಕು.