ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಈವರೆಗೆ ಎರಡು ಲಕ್ಷ ವ್ಯಾಪಾರಸ್ಥರಿಗೆ 52,251 ಕೋಟಿ ರು. ತೆರಿಗೆ ಹಣ ಮರುಪಾವತಿ| ಮಾಸಿಕ ತೆರಿಗೆ ದಾಖಲೆಗಳನ್ನು ಸರಳೀಕರಣ ಮಾಡಬೇಕು| ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ಸರ್ಕಾರದ ನಿರ್ಧಾರ|
ಬೆಂಗಳೂರು(ಆ.08): ಪ್ರಸಕ್ತ ವರ್ಷದ ಏಪ್ರಿಲ್ ತಿಂಗಳಿನಿಂದ ಜುಲೈ ತಿಂಗಳವರೆಗಿನ 13,763 ಕೋಟಿ ರು. ಜಿಎಸ್‌ಟಿ ಪರಿಹಾರ ರಾಜ್ಯಕ್ಕೆ ಬರಬೇಕಾದುದ್ದನ್ನು ಪಡೆದುಕೊಳ್ಳಲು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲು ನಿರ್ಧರಿಸಲಾಗಿದೆ.
ಜಿಎಸ್‌ಟಿ ಅನುಷ್ಠಾನದ ಕುರಿತಂತೆ ಶುಕ್ರವಾರ ನಡೆದ ಐಟಿ ಗ್ರೂಪ್ ಆಫ್ ಮಿನಿಸ್ಟರ್‌ಗಳ ಮಂಡಳಿಯ 14ನೇ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಆನ್‌ಲೈನ್‌ನಲ್ಲಿ ಬಾಕಿ ಇರುವ ಮರುಪಾವತಿಯ ತೆರಿಗೆ ಮೊತ್ತವನ್ನು ತಕ್ಷಣ ತೆರಿಗೆದಾರರಿಗೆ ಯಾವುದೇ ಕಾರಣ ಹೇಳದೆ ಮತ್ತು ವಿಳಂಬ ಮಾಡದೆ ಮರುಪಾವತಿ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು ಎಂದು ರಾಜ್ಯದ ಪ್ರತಿನಿಧಿಯೂ ಆಗಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರಿಗೆ ಈವರೆಗೆ ಎರಡು ಲಕ್ಷ ವ್ಯಾಪಾರಸ್ಥರಿಗೆ 52,251 ಕೋಟಿ ರು. ತೆರಿಗೆ ಹಣವನ್ನು ಮರುಪಾವತಿ ಮಾಡಲಾಗಿದೆ. ಸಣ್ಣ ಮತ್ತು ಅತಿಸಣ್ಣ ವ್ಯಾಪಾರಸ್ಥರು ಶೂನ್ಯ ತೆರಿಗೆ ಮೊತ್ತದ ದಾಖಲೆಗಳನ್ನು ಎಸ್‌ಎಂಎಸ್ ಸಂದೇಶದ ಮೂಲಕ ತೆರಿಗೆದಾರರಿಗೆ ಒದಗಿಸುವ ಬಗ್ಗೆ ಇನ್ನು ಹೆಚ್ಚಿನ ಪ್ರಚಾರಕೊಡಬೇಕು. ಮಾಸಿಕ ತೆರಿಗೆ ದಾಖಲೆಗಳನ್ನು ಸರಳೀಕರಣ ಮಾಡಬೇಕು ಮತ್ತು ಇದರ ಬಗ್ಗೆ ವಿವರವಾದ ಯೋಜನೆಯನ್ನು ಮಾಡುವ ಬಗ್ಗೆ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಮಂಡಿಸಲು ತೀರ್ಮಾನಿಸಲಾಯಿತು.
ಕೇಂದ್ರದಿಂದ ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಬಂದ್?
ಮಾಸಿಕ ತೆರಿಗೆಯನ್ನು ಪಾವತಿಸಲು ಸಣ್ಣ ಮತ್ತು ಮಧ್ಯಮ ಉದ್ದಿಮೆಗಳಿಗೆ ಅನುಕೂಲವಾಗುವಂತಹ ದಿನಾಂಕವನ್ನು ನಿಗದಿಪಡಿಸುವಂತೆ ತಿಳಿಸಲಾಯಿತು. ಸಹಾಯವಾಣಿ ಮತ್ತು ಚಾಟ್ ಬಾಕ್ಸ್‌ಗಳ ಮೂಲಕ ತೆರಿಗೆದಾರರ ಸಮಸ್ಯೆಗಳನ್ನು ನಿವಾರಿಸಲು ಹೆಚ್ಚಿನ ಆದ್ಯತೆ ನೀಡುವಂತೆ ಹೇಳಲಾಯಿತು. ತೆರಿಗೆ ವಂಚನೆ ಪ್ರಕರಣಗಳನ್ನು ಕೂಡಲೇ ಗುರುತಿಸಿ, ತೆರಿಗೆ ಸಂಗ್ರಹವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಾಫ್ಟ್‌ವೇರ್ ಮಾಡಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು ಎಂದು ಬೊಮ್ಮಾಯಿ ಮಾಹಿತಿ ನೀಡಿದ್ದಾರೆ.
