ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ರಾಷ್ಟ್ರಮಟ್ಟದ ಕಂಪನಿಗಳಿಂದ ಗುಣಮಟ್ಟದ ಶೂ, ಸಾಕ್ಸ್‌ ಖರೀದಿಸಿ ವಿತರಿಸಬೇಕೆಂಬ ಕಡ್ಡಾಯ ಷರತ್ತು ವಿಧಿಸಿರುವ ಸರ್ಕಾರ ಆರು ವರ್ಷಗಳಿಂದ ಶೂ, ಸಾಕ್ಸ್‌ ಖರೀದಿಗೆ ದರ ಪರಿಷ್ಕರಿಸದ ಬಗ್ಗೆ ರಾಜ್ಯಾದ್ಯಂತ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಂದ (ಎಸ್‌ಡಿಎಂಸಿ) ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜೂ.30): ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ರಾಷ್ಟ್ರಮಟ್ಟದ ಕಂಪನಿಗಳಿಂದ ಗುಣಮಟ್ಟದ ಶೂ, ಸಾಕ್ಸ್‌ ಖರೀದಿಸಿ ವಿತರಿಸಬೇಕೆಂಬ ಕಡ್ಡಾಯ ಷರತ್ತು ವಿಧಿಸಿರುವ ಸರ್ಕಾರ ಆರು ವರ್ಷಗಳಿಂದ ಶೂ, ಸಾಕ್ಸ್‌ ಖರೀದಿಗೆ ದರ ಪರಿಷ್ಕರಿಸದ ಬಗ್ಗೆ ರಾಜ್ಯಾದ್ಯಂತ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳಿಂದ (ಎಸ್‌ಡಿಎಂಸಿ) ಹಾಗೂ ಶಾಲಾ ಮುಖ್ಯೋಪಾಧ್ಯಾಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಪ್ರಸಕ್ತ ಸಾಲಿನಲ್ಲಿ 1ರಿಂದ 5ನೇ ತರಗತಿ ಮಕ್ಕಳ ಶೂ, ಸಾಕ್ಸ್‌ ಖರೀದಿಗೆ ತಲಾ 265 ರು., 6ರಿಂದ 8ನೇ ತರಗತಿ ಮಕ್ಕಳಿಗೆ ತಲಾ 295 ರು. ಮತ್ತು 9 ಮತ್ತು 10ನೇ ತರಗತಿ ಮಕ್ಕಳಿಗೆ ತಲಾ 325 ರು.ಗಳನ್ನು ಶೂ, ಸಾಕ್ಸ್‌ ಖರೀದಿಗೆ ನಿಗದಿಪಡಿಸಿ ಮಕ್ಕಳ ಸಂಖ್ಯೆಯ ಆಧಾರದ ಮೇಲೆ ಒಟ್ಟು 125 ಕೋಟಿ ರು.ಗಳನ್ನು ಬಿಡುಗಡೆ ಮಾಡಿದೆ. ಆದರೆ, ಈ ದರ ಆರು ವರ್ಷಗಳ ಹಿಂದಿನದ್ದು. ಮುಕ್ತ ಮಾರುಕಟ್ಟೆಯಲ್ಲಿಯೇ ತಲಾ ಒಂದು ಜತೆ ಶೂಗೆ ಕನಿಷ್ಠ 425 ರು.ಗಳಿವೆ. ಇದಕ್ಕಿಂತ ಸುಮಾರು 150 ರು. ಕಡಿಮೆ ಹಣದಲ್ಲಿ ಎಲ್ಲ ಷರತ್ತುಗಳನ್ನು ಅನುಸರಿಸಿ ಗುಣಮಟ್ಟದ ಶೂ, ಸಾಕ್ಸ್‌ ಖರೀದಿಸುವುದು ಕಷ್ಟಸಾಧ್ಯ ಎನ್ನಲಾಗುತ್ತಿದೆ.

ನೀರಿನ ಸಮಸ್ಯೆ ತಲೆದೂರದಂತೆ ನಿಗಾವಹಿಸಿ: ಶಾಸಕ ಲಕ್ಷ್ಮಣ ಸವದಿ ಸೂಚನೆ

ಮಕ್ಕಳಿಗೆ ಗುಣಮಟ್ಟದ ಶೂ, ಸಾಕ್ಸ್‌ ನೀಡಬೇಕೆಂಬ ಸರ್ಕಾರದ ನಿಲುವಿಗೆ ನಮ್ಮ ಯಾವುದೇ ಆಕ್ಷೇಪ ಇಲ್ಲ. ಆದರೆ, ಐದಾರು ವರ್ಷ ಕಳೆದರೂ ಶೂ, ಸಾಕ್ಸ್‌ ಖರೀದಿಗೆ ನಿಗದಿಪಡಿಸಿರುವ ದರವನ್ನು ಪರಿಷ್ಕರಣೆ ಮಾಡದೆ ಹೋದರೆ ವರ್ಷದಿಂದ ವರ್ಷಕ್ಕೆ ಪ್ರತಿಯೊಂದು ವಸ್ತುವಿನ ಬೆಲೆ ಏರಿಕೆಯಾಗುತ್ತಿರುವ ಸಮಯದಲ್ಲಿ ಗುಣಮಟ್ಟದ ಶೂ, ಸಾಕ್ಸ್‌ ಖರೀದಿಸಲು ಹೇಗೆ ಸಾಧ್ಯ. ಕನಿಷ್ಠ ಐದು ವರ್ಷಕ್ಕೊಮ್ಮೆಯಾದರೂ ದರ ಪರಿಷ್ಕರಿಸುವುದು ಅಗತ್ಯವಿದೆ. ಇದು ಸರ್ಕಾರದ ಗಮನಕ್ಕೆ ಬರುತ್ತಿಲ್ಲವೇ ಎಂಬುದು ಎಸ್‌ಡಿಎಂಸಿಗಳ ಅಧ್ಯಕ್ಷರು, ಸದಸ್ಯರು ಹಾಗೂ ಮುಖ್ಯೋಪಾಧ್ಯಾಯರಿಂದ ವ್ಯಕ್ತವಾಗುತ್ತಿರುವ ಬೇಸರದ ಮಾತುಗಳು.

ಬ್ರಾಂಡ್‌ ಹೆಸರೊಂದಿಲ್ಲ: ಸರ್ಕಾರ ವಿಧಿಸಿರುವ ಷರತ್ತುಗಳನ್ನು ನೋಡಿದರೆ 2019ರಲ್ಲಿ ವಿಧಿಸಿದ್ದಂತೆ ನಿರ್ದಿಷ್ಟಹೆಸರಾಂತ ಕಂಪನಿಗಳ ಬ್ರಾಂಡ್‌ ಹೆಸರಿಸಿಲ್ಲ ಎನ್ನುವುದಷ್ಟೇ ಸಮಾಧಾನ. ಶೂಗಳ ಮೇಲ್ಪದರ ಪಾಲಿವಿನೈಲ್‌(ಪಿವಿಸಿ) ಕೋಟೆಡ್‌, ವಿಸ್ಕೋಸ್‌, ಪಾಲಿಸ್ಟರ್‌, ಪಾಲಿಸ್ಟರ್‌ ಕಾಟನ್‌ ಫ್ಯಾಬ್ರಿಕ್‌ 1.5 ಎಂ.ಎಂ. ಹೊಂದಿರಬೇಕು. ಎಕ್ಸ್‌ಪೆಂಡೆಡ್‌ ಪಾಲಿವಿನೈಲ್‌ ಕ್ಲೋರೈಡ್‌ ಸೋಲ್‌ ಹೊಂದಿದ ಹಾಗೂ ಪಾದರಕ್ಷೆಯ ಒಳಪದರವು ಬಟ್ಟೆ, ಫ್ಯಾಬ್ರಿಕ್‌ನಿಂದ ಕೂಡಿರಬೇಕು. ಚಪ್ಪಲಿ ಖರೀದಿಸಲು ನಿರ್ಧರಿಸಿದಲ್ಲಿ ವೆಲ್‌ಕ್ರೋಸ್ಟ್ಯಾಂಡಲ್ಸ್‌ಗಳು ಮತ್ತು 3 ಲೈನಿಂಗ್‌ ಸಾಕ್ಸ್‌ ಖರೀದಿಸಬೇಕು ಎಂದು ಹೇಳಿದೆ. ಇಷ್ಟೆಲ್ಲಾ ಷರತ್ತುಗಳನ್ನು ಅನುಸರಿಸಿ ಶೂ, ಸಾಕ್ಸ್‌ ಖರೀದಿಸುವುದು ದೊಡ್ಡ ಸವಾಲಾಗಿದೆ ಎನ್ನುತ್ತಾರೆ ಮುಖ್ಯೋಪಧ್ಯಾಯರು.

ಆ ಪುಣ್ಯಾತ್ಮನ ಹೇಳಿಕೆಗಳಿಂದಲೇ ಬಿಜೆಪಿಗೆ ದೊಡ್ಡ ಡ್ಯಾಮೇಜ್‌: ಯತ್ನಾಳ್‌ ವಿರುದ್ಧ ಮುರುಗೇಶ್‌ ನಿರಾಣಿ ವಾಗ್ದಾಳಿ

ಪ್ರತಿ ಶಾಲೆಯಲ್ಲೂ ಆ ಶಾಲೆಯ ಎಲ್ಲ ಮಕ್ಕಳಿಗೂ ಒಂದೇ ಕಂಪನಿಯಲ್ಲಿ ಶೂ, ಸಾಕ್ಸ್‌ಗಳನ್ನು ಸಗಟು ದರದಲ್ಲಿ ಖರೀದಿಸುವುದರಿಂದ ದರ ಕಡಿಮೆಯಾಗುತ್ತದೆ. ಜೊತೆಗೆ ವಿವಿಧ ತರಗತಿ ಮಕ್ಕಳಿಗೆ ಅವರ ಪಾದದ ಅಳತೆಗೆ ತಕ್ಕಂತೆ ಬೇರೆ ಬೇರೆ ಶ್ರೇಣಿಯ (ರೇಂಜ್‌) ಶೂ, ಸಾಕ್ಸ್‌ ಖರೀದಿಸುವುದರಿಂದ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಗುಣಮಟ್ಟದ ಶೂ, ಸಾಕ್ಸ್‌ ಖರೀದಿ ಸಾಧ್ಯವಿದೆ. ಹಾಗಾಗಿ ದರ ಪರಿಷ್ಕರಣೆ ಮಾಡಿಲ್ಲ.
- ಡಾ.ಆರ್‌.ವಿಶಾಲ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು