Asianet Suvarna News Asianet Suvarna News

ಕೇರಳಕ್ಕೆ 12 ಉಗ್ರರ ಪ್ರವೇಶ : ಕರಾವಳಿಯಲ್ಲಿ ಹೈ ಅಲರ್ಟ್‌

  •   ಶ್ರೀಲಂಕಾದಿಂದ ಭಾರತಕ್ಕೆ ಶಂಕಿತ ಉಗ್ರರು ಒಳನುಸುಳಿರುವ ಶಂಕೆ 
  • ಕೇರಳ ಹಾಗು ಕರ್ನಾಟಕ ಕರಾವಳಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ
12 terrorists enter into kerala high alert in coastal snr
Author
Bengaluru, First Published Sep 1, 2021, 7:43 AM IST
  • Facebook
  • Twitter
  • Whatsapp

ಮಂಗಳೂರು (ಸೆ.01):  ಶ್ರೀಲಂಕಾದಿಂದ ಭಾರತಕ್ಕೆ ಶಂಕಿತ ಉಗ್ರರು ಒಳನುಸುಳಿರುವ ಶಂಕೆ ಮೇರೆಗೆ ಕೇರಳ ಹಾಗು ಕರ್ನಾಟಕ ಕರಾವಳಿಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಈಗಾಗಲೇ ಎರಡು ಯಾಂತ್ರೀಕೃತ ಬೋಟ್‌ಗಳಲ್ಲಿ 12 ಶಂಕಿತ ಉಗ್ರರು ಪಾಕಿಸ್ತಾನಕ್ಕೆ ತೆರಳುವ ಉದ್ದೇಶದಿಂದ ಶ್ರೀಲಂಕಾದಿಂದ ಕೇರಳದ ಅಲಪ್ಪುಝ ಬಂದರಿಗೆ ತಲುಪಿರುವ ಬಗ್ಗೆ ಮಾಹಿತಿ ಗುಪ್ತಚರ ಇಲಾಖೆಗೆ ಲಭಿಸಿದ್ದು ಕರಾವಳಿ ಕಾವಲು ಪೊಲೀಸ್‌ ಹಾಗೂ ತಟರಕ್ಷಣಾ ಪಡೆಗಳನ್ನು ಅಲರ್ಟ್‌ ಆಗಿರುವಂತೆ ಸೂಚಿಸಲಾಗಿದೆ. ಈ ಪಡೆಗಳು ಸಮುದ್ರದಲ್ಲಿ ಗಸ್ತು ಬಿಗುಗೊಳಿಸಿವೆ.

ಅಲಪ್ಪುಳದಿಂದ ಕೇರಳ ಅಥವಾ ಕರ್ನಾಟಕ ಯಾವುದೇ ಭಾಗದಿಂದ ಶಂಕಿತ ಉಗ್ರರು ಪಾಕಿಸ್ತಾನಕ್ಕೆ ತೆರಳುವ ಸಾಧ್ಯತೆಯನ್ನು ಗುಪ್ತಚರ ಇಲಾಖೆ ಕೇಂದ್ರಕ್ಕೆ ರವಾನಿಸಿದೆ. ತಮಿಳ್ನಾಡು ಕರಾವಳಿಗೆ ಬಂದು ಅಲ್ಲಿಂದ ರಸ್ತೆ ಮೂಲಕ ಕೇರಳ ಅಥವಾ ಕರ್ನಾಟಕ್ಕೆ ಆಗಮಿಸುವುದು. ಬಳಿಕ ಸಮುದ್ರ ಮಾರ್ಗದಲ್ಲಿ ಅಂತಾರಾಷ್ಟ್ರೀಯ ಜಲರೇಖೆ ವರೆಗೆ ಮೀನುಗಾರಿಕಾ ಬೋಟ್‌ಗಳಲ್ಲಿ ಸಾಗಿ, ಅಲ್ಲಿಂದ ಪಾಕಿಸ್ತಾನಿ ಬೋಟ್‌ಗಳಲ್ಲಿ ತೆರಳುವ ಉದ್ದೇಶ ಹೊಂದಿದ್ದಾರೆ. ಅಲ್ಲಿ ಇವರಿಗಾಗಿ ಪಾಕಿಸ್ತಾನಿ ಬೋಟ್‌ ಕಾಯುತ್ತಿದೆ ಎಂದು ಹೇಳಲಾಗಿದೆ. ಹೀಗಾಗಿ ಸಮುದ್ರದಲ್ಲಿ ಗಸ್ತು ಬಿಗುಗೊಳಿಸುವುದರೊಂದಿಗೆ ಅನುಮಾನಾಸ್ಪದ ವ್ಯಕ್ಯಿಗಳು ಅಥವಾ ಬೋಟ್‌ ಕಂಡು ಬಂದರೆ ಪೊಲೀಸರಿಗೆ ತಿಳಿಸುವಂತೆ ಸ್ಥಳೀಯ ಮೀನುಗಾರರಿಗೆ ಸೂಚನೆ ನೀಡಲಾಗಿದೆ. ಕಡಲ ಕಿನಾರೆಯ ವಸತಿಗೃಹ ಹಾಗೂ ರೆಸಾರ್ಟ್‌ಗಳಲ್ಲಿ ಶೋಧ ನಡೆಸುವಂತೆ ಸೂಚಿಸಲಾಗಿದೆ.

ಆಫ್ಘನ್‌ ಸಿಖ್ಖರ ಭಾರತ ಭೇಟಿಗೆ ಹೈಕಮಾಂಡ್‌ ಸಮ್ಮತಿ ಕೋರಿದ ಉಗ್ರರು!

ಅಂತಾರಾಷ್ಟ್ರೀಯ ಜಲರೇಖೆಯಲ್ಲಿ ಪಾಕಿಸ್ತಾನಿ ಮೀನುಗಾರರು ಬರುತ್ತಿದ್ದು, ಮೀನುಗಾರಿಕೆ ನೆಪದಲ್ಲಿ ಭಾರತದಿಂದ ಸಾಗುವ ತಮಿಳು ಕಾರ್ಮಿಕರ ಸೋಗಿನಲ್ಲಿ ಶಂಕಿತರು ಪಾಕಿಸ್ತಾನಿ ಬೋಟ್‌ ಸೇರಿಕೊಳ್ಳುವುದು ಅವರ ಸಂಚು ಎನ್ನಲಾಗುತ್ತಿದೆ. ಹೀಗೆ ಬಂದಿರುವ ಶಂಕಿತ ಉಗ್ರರು ಪಾಕಿಸ್ತಾನಕ್ಕೆ ತೆರಳುತ್ತಾರೋ ಅಥವಾ ಕೇರಳ, ಕರ್ನಾಟಕ ಕರಾವಳಿಯಲ್ಲಿ ಉಗ್ರರ ಸ್ಲೀಪರ್‌ ಸೆಲ್‌ನಲ್ಲಿ ಉಳಿದುಕೊಳ್ಳುತ್ತಾರೋ ಎನ್ನುವ ಆತಂಕ ತಲೆದೋರಿದೆ.

2019ರಲ್ಲಿ ಕೊಲಂಬೋ ಸ್ಫೋಟ:

ಐಸಿಸ್‌ ಜೊತೆ ನಂಟು ಹೊಂದಿರುವ ತೀವ್ರವಾದಿ ಸಂಘಟನೆ ನ್ಯಾಶನಲ್‌ ತೌಹೀದ್‌ ಜಮಾತ್‌ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ 2019ರ ಏಪ್ರಿಲ್‌ 21ರ ಈಸ್ಟರ್‌ ಸಂಡೇ ದಿನದಂದು ಎಂಟು ಕಡೆ ಆತ್ಮಹತ್ಯೆ ಬಾಂಬ್‌ ದಾಳಿ ನಡೆಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು. ಈ ಘಟನೆಯಲ್ಲಿ ಭಾರತದ 11 ಮಂದಿ ಸೇರಿದಂತೆ 274 ಮಂದಿ ಸಾವಿಗೀಡಾಗಿದ್ದರು. ಆ ಬಳಿಕ ಶ್ರೀಲಂಕಾದ ತನಿಖಾ ತಂಡ ಭಾರತದ ಗುಪ್ತಚರ ಏಜೆನ್ಸಿ ಜೊತೆ ತನಿಖೆ ನಡೆಸಿ 100ಕ್ಕೂ ಅಧಿಕ ಮಂದಿಯನ್ನು ಬಂಧಿಸಿತ್ತು. ಅಲ್ಲದೆ ಮೂಲಭೂತವಾದಿ ಗುಂಪುಗಳ ಬಗ್ಗೆ ಕಟ್ಟೆಚ್ಚರ ವಹಿಸಿತ್ತು.

ಗುಪ್ತಚರ ಜಾಡು

ಶ್ರೀಲಂಕಾದಿಂದ 12 ಉಗ್ರರು ಕೇರಳಕ್ಕೆ ಪ್ರವೇಶ

ಕರ್ನಾಟಕ, ಕೇರಳದಿಂದ ಮೀನುಗಾರರ ಸೋಗಿನಲ್ಲಿ ಪಾಕ್‌ಗೆ ತೆರಳಲು ಸಂಚು

ಬೋಟ್‌ನಲ್ಲಿ ಅಂತಾರಾಷ್ಟ್ರೀಯ ಜಲಗಡಿಯವರೆಗೆ ತೆರಳಿ ಪಾಕ್‌ ಬೋಟ್‌ ಹತ್ತಲು ಯೋಜನೆ

ಪಾಕ್‌ಗೆ ಹೋಗದೆ ಭಾರತದಲ್ಲೇ ಸ್ಲೀಪರ್‌ಸೆಲ್‌ ಆಗುವ ಸಾಧ್ಯತೆ

Follow Us:
Download App:
  • android
  • ios