ಬೀರೂರು[ಫೆ.25]: ಪಟ್ಟಣದ ಸಮಾಜ ಕಲ್ಯಾಣ ಹಾಸ್ಟೆಲ್‌ ಸಮೀಪದ ರಾಜಾಜಿನಗರ ಬಡಾವಣೆಗೆ ಹೊಂದಿಕೊಂಡಂತೆ ಇರುವ ವಸತಿ ಶಾಲೆಯೊಂದರ 12 ವಿದ್ಯಾರ್ಥಿಗಳು ಭಾನುವಾರ ರಾತ್ರಿ ಏಕಾಏಕಿ ಹಾಸ್ಟೆಲ್‌ನಿಂದ ತಪ್ಪಿಸಿಕೊಂಡಿದ್ದು, ಅದೃಷ್ಟವಶಾತ್‌ ಸೋಮವಾರ ಬೆಳಗ್ಗೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಪತ್ತೆಯಾಗಿದ್ದಾರೆ.

ಬೀರೂರಿನ ವಸತಿ ಶಾಲೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಾದ ಖಲಂದರ್‌, ಲಿಂಗರಾಜು, ಸಂತೋಷ್‌, ಯಶವಂತ್‌, ನಿಖಿಲ್‌, ಅಭಿಷೇಕ್‌, ದಯಾನಂದ್‌, ಹಿಮಮಂತ್‌, ಮುಸ್ತಕಿನ್‌, ಫತ್‌, ಶರತ್‌, ದರ್ಶನ್‌ ತಪ್ಪಿಸಿಕೊಂಡವರು. ಮಕ್ಕಳ ಸಹಾಯವಾಣಿ ತಂಡದ ಅಧಿಕಾರಿ ಕಿರಣ್‌ ಎಂಬವರ ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ಸಹಾಯವಾಣಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಅವರನ್ನು ಕರೆತರಲು ವಸತಿ ಶಾಲೆ ಪ್ರಾಂಶುಪಾಲೆ ಮಂಜುಳಾ ಮತ್ತು ಸಿಬ್ಬಂದಿ ಧಾವಿಸಿದ್ದಾರೆ.

ಈ ವಿದ್ಯಾರ್ಥಿಗಳ ಗುಂಪು ಶನಿವಾರ ಪೂರ್ವಸಿದ್ಧತಾ ಸಮಾಜ ವಿಜ್ಞಾನ ಪರೀಕ್ಷೆ ಬರೆದವರು, ಸೋಮವಾರ ವಿಜ್ಞಾನ ಪರೀಕ್ಷೆ ಬರೆಯಬೇಕಿತ್ತು. ಅದಕ್ಕೆ ಸಿದ್ಧತೆಯಾಗಿ ಭಾನುವಾರ ಸಂಜೆ ವಿಜ್ಞಾನ ಶಿಕ್ಷಕರು ತರಬೇತಿ ನೀಡಿ ಮನೆಗೆ ತೆರಳಿದ್ದರು. ರಾತ್ರಿ ಊಟ ಮುಗಿಸಿ ಅಭ್ಯಾಸ ಮಾಡುತ್ತಿದ್ದ ಈ ವಿದ್ಯಾರ್ಥಿಗಳಿಗೆ ಡಿ’ದರ್ಜೆ ನೌಕರರು ಚಹಾ ನೀಡಿ ಪರಿಶೀಲನೆ ನಡೆಸಿದ್ದರು. ಅನಂತರ ರಾತ್ರಿ ಒಟ್ಟಾಗಿ ತೆರಳಿದ ಬಾಲಕರು ಹಾಸ್ಟೆಲ್‌ ಸಮೀಪವೇ ಇರುವ ರೈಲ್ವೆ ನಿಲ್ದಾಣದಿಂದ ಬೆಂಗಳೂರಿಗೆ ರೈಲಿನ ಮೂಲಕ ಪ್ರಯಾಣ ಬೆಳೆಸಿದ್ದರು.

ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಇಳಿದ ಇವರು ಬಿಎಂಟಿಸಿ ಬಸ್‌ ನಿಲ್ದಾಣದ ಬಳಿ ಗುಂಪಾಗಿ ಅನುಮಾನಾಸ್ಪದವಾಗಿ ಅಡ್ಡಾಡುತ್ತಿದ್ದರು. ಆಗ ಮಕ್ಕಳ ಸಹಾಯವಾಣಿಯ ರಕ್ಷಣಾ ಅಧಿಕಾರಿ ಕಿರಣ್‌ ಎನ್ನುವವರು ಇವರನ್ನು ಗಮನಿಸಿ, ಪ್ರಶ್ನಿಸಿದ್ದಾರೆ. ಆಗ, ‘‘ನಾವು ಬೀರೂರಿನ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆ ವಿದ್ಯಾರ್ಥಿಗಳು. ಪ್ರಶ್ನೆಪತ್ರಿಕೆ ಬಹಿರಂಗವಾಗಿದ್ದು, ಹಾಸ್ಟೆಲ್‌ನಲ್ಲಿ ಪ್ರಾಂಶುಪಾಲರಿಂದ ಓದುವಂತೆ ಒತ್ತಡ ಇರುವುದನ್ನು ಸಹಿಸದೇ ಬೆಂಗಳೂರಿಗೆ ಓಡಿ ಬಂದಿರುವುದಾಗಿ ತಿಳಿಸಿದ್ದಾರೆ.

ವಿಷಯ ತಿಳಿದ ಅಧಿಕಾರಿ ಕಿರಣ್‌ ಮಕ್ಕಳನ್ನು ಸಹಾಯವಾಣಿ ಕೇಂದ್ರಕ್ಕೆ ಕರೆತಂದಿದ್ದಾರೆ. ಅಲ್ಲಿ ಕೌನ್ಸೆಲಿಂಗ್‌ ನಡೆಸಿ, ಮಾಹಿತಿ ಪಡೆದು ಹಾಸ್ಟೆಲ್‌ನ ಪ್ರಾಂಶುಪಾಲರಿಗೆ ಮಾಹಿತಿ ನೀಡಿದ್ದರೆ. ನಿಮ್ಮದೇ ವಿದ್ಯಾರ್ಥಿಗಳಾಗಿದ್ದಲ್ಲಿ ಅವರಿಗೆ ಸಂಬಂಧಿಸಿದ ಶಾಲಾ ದಾಖಲಾತಿ ಒದಗಿಸಿ, ಮಕ್ಕಳನ್ನು ಕರೆದೊಯ್ಯುವಂತೆ ಸೂಚಿಸಿದ್ದಾರೆ.