ಬೆಂಗಳೂರು(ಫೆ.10): ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮವೆಸಗಿದ 12 ಅಭ್ಯರ್ಥಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ) ಶಿಕ್ಷೆ ವಿಧಿಸಿ ಗೆಜೆಟ್‌ ನೋಟಿಫಿಕೇಷನ್‌ ಹೊರಡಿಸಿದೆ.

ರಾಜ್ಯ ನ್ಯಾಯಾಂಗ ಇಲಾಖೆಯಲ್ಲಿ ಖಾಲಿಯಿದ್ದ ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿಗೆ 2019ರ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಿದ್ದು, ಅದೇ ವರ್ಷ ಜೂನ್‌ ತಿಂಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆದಿತ್ತು. ಈ ಪರೀಕ್ಷೆಯಲ್ಲಿ ನಾನಾ ರೀತಿಯ ಪರೀಕ್ಷಾ ಅಕ್ರಮವೆಸಗಿದ್ದ 12 ಜನ ಅಭ್ಯರ್ಥಿಗಳಿಗೆ ಅವರು ಎಸಗಿದ ಅಕ್ರಮದ ಸ್ವರೂಪ ಆಧರಿಸಿ ಶಿಕ್ಷೆ ವಿಧಿಸಲಾಗಿದೆ.

ಪರೀಕ್ಷೆಯ ಒಎಂಆರ್‌ ಉತ್ತರ ಪ್ರತಿ ನೀಡದೆ ಹರಿದು ಹಾಕಿದ್ದ ಅಂಬ್ರೇಶ್‌ ಎಂಬ ಅಭ್ಯರ್ಥಿಯನ್ನು ಮುಂದಿನ ಮೂರು ಪರೀಕ್ಷೆಗಳಿಗೆ ಡಿಬಾರ್‌ ಮಾಡಲಾಗಿದೆ. ಪಾನಮತ್ತನಾಗಿ ಪರೀಕ್ಷೆಗೆ ಬಂದಿದ್ದ ಶಂಕರಗೌಡ ಆರ್‌.ಚೌಧರಿ ಎಂಬ ಅಭ್ಯರ್ಥಿಯ ಉತ್ತರ ಪತ್ರಿಕೆ ಪರಿಗಣಿಸಲಾಗಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಗೊಂದಲ ಉಂಟು ಮಾಡಿದ್ದ ಸಿದ್ದರಾಮ ಮತ್ತು ಪ್ರಿಯಾಂಕ ಎಂಬ ಅಭ್ಯರ್ಥಿಗಳಿಗೆ ಒಂದು ಸಾವಿರ ರು.ದಂಡ ವಿಧಿಸಲಾಗಿದೆ.

ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ತಡೆ KPSC ಪರೀಕ್ಷೆ ಇನ್ನು ಆನ್‌ಲೈನ್?

ಇನ್ನು ಪರೀಕ್ಷಾ ಕೊಠಡಿಯಲ್ಲಿ ವಿದ್ಯುನ್ಮಾನ ಉಪಕರಣ ಬಳಸಿ ಪರೀಕ್ಷಾ ಗೌಪ್ಯತೆಗೆ ಧಕ್ಕೆಯುಂಟು ಮಾಡಿರುವ ನಿಖಿತ್‌ ಕಲಾಲ್‌, ಅಶ್ವಿನಿ, ರೇಣುಕಾ ಕದಮ್‌, ರಾಮಚಂದ್ರ ಮಕ್ಕಳಗೇರಿ, ಸಂತೋಷ್‌ ಕೂಗೆ ಮತ್ತು ಪ್ರಕಾಶ್‌ ಮಾದಿಗಾರಾ ಎಂಬ ಅಭ್ಯರ್ಥಿಗಳನ್ನು ಮುಂದಿನ ಪರೀಕ್ಷೆಗಳಿಂದ ಶಾಶ್ವತವಾಗಿ ಡಿಬಾರ್‌ ಮಾಡಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ.

ನಕಲಿ ಪರೀಕ್ಷಾ ಪ್ರವೇಶ ಪತ್ರ ಸೃಷ್ಟಿಸಿ ಪರೀಕ್ಷೆಗೆ ಹಾಜರಾಗಿದ್ದ ಚಂದ್ರಕಲಾ ಹಳ್ಳಿ ಮತ್ತು ಯಲ್ಲಾಲಿಂಗ ಆರ್‌.ಕಂಕನವಾಡಿ ಎಂಬ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಕಾಲ ಪರೀಕ್ಷೆಗೆ ಹಾಜರಾಗದಂತೆ ಡಿಬಾರ್‌ ಮಾಡಲಾಗಿದ್ದು, ಅವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ನಿರ್ದೇಶಿಸಿರುವುದಾಗಿ ಕೆಪಿಎಸ್‌ಸಿ ಕಾರ್ಯದರ್ಶಿ ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.

ಕೆಪಿಎಸ್ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮವೆಸಗುವವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ವಿಧಿಸುವಂತೆ ಮಾಡಲಾಗುವುದು ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.