ರಮೇಶ್‌ ಬನ್ನಿಕುಪ್ಪೆ

ಬೆಂಗಳೂರು(ಜ.31): ಪರೀಕ್ಷಾ ಅಕ್ರಮ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಪುನರಾವರ್ತನೆ ಆಗುತ್ತಿರುವುದರಿಂದ ಕಳಂಕಕ್ಕೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಹೊಸ ವ್ಯವಸ್ಥೆಯೊಂದರ ಮೊರೆ ಹೋಗಲು ಮುಂದಾಗಿದೆ. ಮುಂದಿನ ದಿನಗಳಲ್ಲಿ ಬಹುಆಯ್ಕೆ (ವಸ್ತುನಿಷ್ಠ) ಮಾದರಿ ಪ್ರಶ್ನೆಪತ್ರಿಕೆ ಆಧರಿಸಿ ನಡೆಯುವ ಎಲ್ಲ ಕೆಳ ಹಂತದ ಹುದ್ದೆಗಳ ಸ್ಪರ್ಧಾತ್ಮಕ (ಕೆಎಎಸ್‌ ಲಿಖಿತ ಪರೀಕ್ಷೆ ಹೊರತುಪಡಿಸಿ) ಪರೀಕ್ಷೆಗಳಿಗೆ ಬ್ಯಾಂಕಿಂಗ್‌ ಮತ್ತು ಕೇಂದ್ರ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗದ (ಎಸ್‌ಎಸ್‌ಸಿ) ಮಾದರಿಯಲ್ಲಿ ಆನ್‌ಲೈನ್‌ ಪರೀಕ್ಷಾ ವ್ಯವಸ್ಥೆ ಅಳವಡಿಸಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ.

ಇದರಿಂದ ಪ್ರಶ್ನೆ ಪತ್ರಿಕೆ ಮುದ್ರಣ ಮತ್ತು ಸಾಗಣೆಯಂತಹ ಸಮಸ್ಯೆ ಉಂಟಾಗುವುದಿಲ್ಲ. ಜತೆಗೆ ಅಕ್ರಮಗಳನ್ನು ಬಹುಮಟ್ಟಿಗೆ ನಿಯಂತ್ರಿಸಲು ಸಾಧ್ಯವಾಗುತ್ತದೆ. ಈ ಕಾರಣಕ್ಕೆ ಕೆಪಿಎಸ್‌ಸಿ ಹೊಸ ಚಿಂತನೆ ಆರಂಭಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕಿ ಜಿ.ಆರ್‌.ಜೆ. ದಿವ್ಯಾ ಪ್ರಭು, ಆನ್‌ಲೈನ್‌ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುವ ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲೇ ಈ ಪದ್ಧತಿ ಅಳವಡಿಸಿಕೊಳ್ಳುವ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಪ್ರಸ್ತುತ ನಡೆಸುತ್ತಿರುವ ಪರೀಕ್ಷಾ ಪ್ರಕ್ರಿಯೆಗಳಲ್ಲಿ ಮಾನವ ಸಂಪನ್ಮೂಲ ಬಳಕೆ ಹೆಚ್ಚಿದೆ. ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ಪುನರಾವರ್ತನೆಯಾಗುತ್ತಿವೆ. ಇದನ್ನು ತಪ್ಪಿಸಲು ಆನ್‌ಲೈನ್‌ ಪರೀಕ್ಷೆ ಉತ್ತಮ ಎಂಬ ಕಾರಣಕ್ಕೆ ಈ ದಿಸೆಯಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಸ್ತುತ ಅಧಿಸೂಚನೆ ಹೊರಡಿಸಿರುವ ಪರೀಕ್ಷೆಗಳು ಹಾಲಿ ಪರೀಕ್ಷಾ ವಿಧಾನದಲ್ಲೇ ನಡೆಯಲಿವೆ. ಆದರೆ, ಭವಿಷ್ಯದ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ನಡೆಸಲು ವ್ಯವಸ್ಥೆ ಮಾಡಲಾಗುವುದು. ಜೊತೆಗೆ, ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಪರೀಕ್ಷಾ ಅಕ್ರಮಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಅವರು ತಿಳಿಸಿದರು.

ಪಾಠ ಕಲಿತಿದ್ದೇವೆ:

ಕೆಪಿಎಸ್‌ಸಿ ವ್ಯವಹಾರಗಳನ್ನು ಅತ್ಯಂತ ಗೌಪ್ಯವಾಗಿರಿಸಿಕೊಳ್ಳಬೇಕು ಎಂದು ಸಿಬ್ಬಂದಿಗೆ ನೇಮಕಾತಿ ಸಂದರ್ಭದಲ್ಲಿ ಸೂಚನೆ ನೀಡಲಾಗಿರುತ್ತದೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಆಯೋಗದ ಸಿಬ್ಬಂದಿ ಭಾಗಿಯಾಗಿರುವುದು ಕೆಟ್ಟಬೆಳವಣಿಗೆಯಾಗಿದೆ. ಈ ಘಟನೆಯಿಂದ ಆಯೋಗ ಪಾಠ ಕಲಿತಿದ್ದು, ಇನ್ನು ಮುಂದೆ ಈ ರೀತಿಯ ಬೆಳವಣಿಗೆ ನಡೆಯದಂತೆ ಕ್ರಮ ವಹಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆನ್‌ಲೈನ್‌ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದಾಗಿ ಅವರು ಹೇಳಿದರು.

ಸಾರ್ವಜನಿಕರಿಗೆ ಕೆಪಿಎಸ್‌ಸಿ ಬಗ್ಗೆ ಮತ್ತೆ ಭರವಸೆ ಮೂಡುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಪರೀಕ್ಷೆ ಪ್ರಕ್ರಿಯೆಗಳನ್ನು ಮತ್ತಷ್ಟುಕಠಿಣಗೊಳಿಸುವುದು. ಆಯೋಗದ ಮಾಹಿತಿ ಎಲ್ಲಿಯೂ ಸೋರಿಕೆಯಾಗದಂತೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ನಡೆಯದಂತೆ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಇನ್ನಿಲ್ಲ

ಪ್ರಶ್ನೆ ಪತ್ರಿಕೆ ಮುದ್ರಣ ಮತ್ತು ಸಾಗಾಟದಿಂದ ಸೋರಿಕೆಯಂತಹ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಆನ್‌ಲೈನ್‌ ಪರೀಕ್ಷೆ ನಡೆಸುವುದರಿಂದ ಈ ರೀತಿಯ ತೊಂದರೆಯಾಗುವುದಿಲ್ಲ. ಅಲ್ಲದೆ, ಬ್ಯಾಂಕಿಂಗ್‌ ಪರೀಕ್ಷೆ ಮಾದರಿಯಲ್ಲಿ ಪರೀಕ್ಷಾ ದಿನದಂದು ನಿಗದಿತ ಸಮಯಕ್ಕೆ ಕಂಪ್ಯೂಟರ್‌ನಲ್ಲಿ ಪ್ರಶ್ನೆ ಪತ್ರಿಕೆ ಗೋಚರವಾಗುತ್ತದೆ. ಯಾವ ಮಾದರಿ ಪ್ರಶ್ನೆ ಪತ್ರಿಕೆ ಬರುತ್ತದೆ ಎಂಬುದು ಕಡೆ ಕ್ಷಣದವರೆಗೂ ಯಾರ ಅರಿವಿಗೂ (ಕೆಲ ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿ) ಬರುವುದಿಲ್ಲ. ಅಲ್ಲದೆ, ಪರೀಕ್ಷೆ ಮುಗಿಯುತ್ತಿದ್ದಂತೆಯೇ ಪರದೆಯಿಂದ ಮರೆಯಾಗುತ್ತದೆ. ಇದರಿಂದ ಪ್ರಶ್ನೆ ಪತ್ರಿಕೆ ಸೋರಿಕೆ ಸಾಧ್ಯತೆ ಕಡಿಮೆ ಎಂದು ದಿವ್ಯಾ ಪ್ರಭು ತಿಳಿಸಿದರು.

ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಕಳಂಕ

ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಆಯೋಗದ ಸಿಬ್ಬಂದಿಯಿಂದ ಸೋರಿಕೆಯಾಗಿರುವುದು ಸಂಸ್ಥೆಗೆ ಕಳಂಕ ತಂದಿದೆ. ಹೀಗಾಗಿ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಆನ್‌ಲೈನ್‌ ಪರೀಕ್ಷಾ ಪದ್ಧತಿ ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದೇವೆ.

- ಜಿ.ಆರ್‌.ಜೆ. ದಿವ್ಯಾ ಪ್ರಭು, ಕೆಪಿಎಸ್‌ಸಿ ಪರೀಕ್ಷಾ ನಿಯಂತ್ರಕಿ

ಪಾಠ ಕಲಿತ ಕೆಪಿಎಸ್ಸಿ?

- ರಾಜ್ಯದ ಸರ್ಕಾರಿ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳು ಸದಾ ವಿವಾದಕ್ಕೆ ಕಾರಣವಾಗುತ್ತಿವೆ.

- ಇತ್ತೀಚಿನ ವರ್ಷಗಳಲ್ಲಿ ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆಯಂತಹ ಘಟನೆಗಳು ಕೂಡ ಹೆಚ್ಚುತ್ತಿವೆ.

- ಹೀಗಾಗಿ ಕೆಎಎಸ್‌ಗಿಂತ ಕೆಳಹಂತದ ಎಫ್‌