*  ಆದಷ್ಟು ಬೇಗ ಬಿಡುಗಡೆ ಮಾಡುವ ಭರವಸೆ* ಬೊಮ್ಮಾಯಿಗೆ ಸಚಿವೆ ನಿರ್ಮಲಾ ಆಶ್ವಾಸನೆ* ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ ಬೊಮ್ಮಾಯಿ   

ನವದೆಹಲಿ(ಆ.01): ಕಳೆದ ವರ್ಷದ ಜಿಎಸ್‌ಟಿ ಪರಿಹಾರದ ಬಾಕಿ 11,400 ಕೋಟಿ ರು.ಗಳನ್ನು ಕಂತುಗಳಲ್ಲಿ ಆದಷ್ಟು ಬೇಗ ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಶನಿವಾರ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಲ್ಲಿ ಕೋವಿಡ್‌ ಹಾಗೂ ಇತರ ವೆಚ್ಚಗಳಿಗೆ ಹಣದ ಅಗತ್ಯವಿದೆ. ಹೀಗಾಗಿ ಕಳೆದ ವರ್ಷದ ಜಿಎಸ್‌ಟಿ ಪರಿಹಾರದ ಬಾಕಿ 11,400 ಕೋಟಿ ರು.ಗಳನ್ನು ಬಿಡುಗಡೆ ಮಾಡುವಂತೆ ವಿತ್ತ ಮಂತ್ರಿಗಳನ್ನು ಕೇಳಿದೆ. ಅವರು ಕಂತುಗಳಲ್ಲಿ ಬಿಡುಗಡೆ ಮಾಡಲು ಒಪ್ಪಿದ್ದಾರೆ. ತಕ್ಷಣವೇ ಹಣ ಬಿಡುಗಡೆ ಆರಂಭವಾಗಲಿದೆ’ ಎಂದು ಹೇಳಿದರು.

ಸಾಲ ಪಡೆದು ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ: ಕೇಂದ್ರದ ಭರವಸೆ

ಕಳೆದ 2020-21ನೇ ಸಾಲಿನಲ್ಲಿ ರಾಜ್ಯಕ್ಕೆ 12,000 ಕೋಟಿ ರು. ಜಿಎಸ್‌ಟಿ ಪರಿಹಾರ ಬಂದಿದೆ. ಇನ್ನೂ 11,400 ಕೋಟಿ ರು. ಬಾಕಿಯಿದೆ. ಅದರ ಜೊತೆಗೆ, ಈ ವರ್ಷದ ಜಿಎಸ್‌ಟಿ ಪರಿಹಾರ 18,000 ಕೋಟಿ ರು.ಗಳನ್ನು ಕೂಡ ಬಿಡುಗಡೆ ಮಾಡುವಂತೆ ಕೇಳಿದ್ದೇನೆ. ಹಾಗೆಯೇ, ಕೇಂದ್ರ ಸರ್ಕಾರದ ಯೋಜನೆಗಳಿಗೆ ಬರಬೇಕಾದ ಹಣವನ್ನೂ ನೀಡುವಂತೆ ಕೇಳಿದ್ದೇನೆ. ವಿತ್ತ ಮಂತ್ರಿಗಳು ಕೃಷಿ ಕ್ಷೇತ್ರಕ್ಕೆ ನಬಾರ್ಡ್‌ ಮೂಲಕ ಸಾಕಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಜಿಎಸ್‌ಟಿ ಮಂಡಳಿಯ ಸದಸ್ಯರೂ ಆಗಿರುವ ಬೊಮ್ಮಾಯಿ ತಿಳಿಸಿದ್ದಾರೆ.