ಅತಿವೃಷ್ಟಿಯಿಂದ ಬೆಳೆ ಹಾನಿ: ಹಾವೇರಿಯಲ್ಲಿ 10 ತಿಂಗಳಲ್ಲಿ 112 ರೈತರ ಆತ್ಮಹತ್ಯೆ
ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಪ್ರಕೃತಿ ಮುನಿಸಿಕೊಂಡರೆ ಮೊದಲು ಸಂಕಷ್ಟಕ್ಕೆ ಸಿಲುಕುವವನೇ ಅನ್ನದಾತ. ಅತಿವೃಷ್ಟಿ, ಬೆಳೆ ನಷ್ಟದಿಂದ ಅಕ್ಷರಶಃ ನಲುಗಿ ಹೋಗಿದ್ದಾನೆ. 2022ನೇ ಸಾಲಿನಲ್ಲಿ ಈವರೆಗೆ ಒಬ್ಬ ರೈತ ಮಹಿಳೆ ಸೇರಿ 112 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ.
ನಾರಾಯಣ ಹೆಗಡೆ
ಹಾವೇರಿ (ಅ.21): ಕೃಷಿ ಪ್ರಧಾನ ಹಾವೇರಿ ಜಿಲ್ಲೆಯಲ್ಲಿ ಪ್ರಕೃತಿ ಮುನಿಸಿಕೊಂಡರೆ ಮೊದಲು ಸಂಕಷ್ಟಕ್ಕೆ ಸಿಲುಕುವವನೇ ಅನ್ನದಾತ. ಅತಿವೃಷ್ಟಿ, ಬೆಳೆ ನಷ್ಟದಿಂದ ಅಕ್ಷರಶಃ ನಲುಗಿ ಹೋಗಿದ್ದಾನೆ. 2022ನೇ ಸಾಲಿನಲ್ಲಿ ಈವರೆಗೆ ಒಬ್ಬ ರೈತ ಮಹಿಳೆ ಸೇರಿ 112 ಆತ್ಮಹತ್ಯೆ ಪ್ರಕರಣಗಳು ದಾಖಲಾಗಿವೆ. 2015ರಲ್ಲಿ ಮಂಡ್ಯ ಬಿಟ್ಟರೆ ರಾಜ್ಯದಲ್ಲಿ ಹಾವೇರಿಯಲ್ಲೇ ಅತಿ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದರು. ಆಗ ನಿರಂತರ ಬರಗಾಲದಿಂದ ನಾಲ್ಕಾರು ವರ್ಷ ರೈತರು ಸಂಕಷ್ಟಎದುರಿಸಿದ್ದರು. ಆದರೆ ಈಗ ಅತಿವೃಷ್ಟಿ, ಪ್ರವಾಹ, ಬೆಳೆಹಾನಿಯಿಂದ ಕಂಗಾಲಾಗಿದ್ದಾರೆ. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಮುಂಗಾರು ಹಂಗಾಮಿನಲ್ಲಿ 70 ಸಾವಿರ ಹೆಕ್ಟೇರ್‌ಗೂ ಅಧಿಕ ಬೆಳೆ ಹಾನಿಯಾಗಿದೆ.
10 ತಿಂಗಳಲ್ಲಿ 112 ಆತ್ಮಹತ್ಯೆ ಕೇಸ್: ನೆರೆ, ಅತಿವೃಷ್ಟಿಯಿಂದ ಮುಂಗಾರು ಬೆಳೆಗಳೆಲ್ಲ ರೈತರಿಗೆ ಕೈಕೊಟ್ಟಿವೆ. ಕೃಷಿ, ತೋಟಗಾರಿಕೆ, ತರಕಾರಿ ಬೆಳೆಗಳೂ ಹಾನಿಯಾಗಿವೆ. ಬಡ ರೈತರು ಮುಂದೇನು ಮಾಡಬೇಕು ಎಂದು ಗೊತ್ತಾಗದೇ, ಮಾಡಿದ ಸಾಲಕ್ಕೆ ಅಂಜಿ ಆತ್ಮಹತ್ಯೆಯತ್ತ ಹೆಜ್ಜೆ ಇಡುತ್ತಿರುವ ಆತಂಕಕಾರಿ ಬೆಳವಣಿಗೆ ಜಿಲ್ಲೆಯಲ್ಲಿ ನಡೆದಿದೆ. ಬಹುತೇಕ ರೈತರು ಬೆಳೆಹಾನಿ ಮತ್ತು ಸಾಲಬಾಧೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಣ್ಣ ಮತ್ತು ಅತಿಸಣ್ಣ ರೈತರೇ ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆಯಂತಹ ನಿರ್ಧಾರಕ್ಕೆ ಬರುತ್ತಿದ್ದಾರೆ. ಬ್ಯಾಂಕು, ಫೈನಾನ್ಸ್‌ಗಳು, ಕೈಗಡ ಹೀಗೆ ಸಾಲ ಮಾಡಿಕೊಂಡಿರುವ ರೈತರು, ಅದನ್ನು ತೀರಿಸಲಾಗದೇ ನೇಣಿಗೆ ಕೊರಳೊಡ್ಡುತ್ತಿದ್ದಾರೆ. ಜೂನ್‌ನಿಂದ ಇಲ್ಲಿಯವರೆಗೆ 56 ರೈತ ಆತ್ಮಹತ್ಯೆ ಕೇಸ್‌ಗಳು ದಾಖಲಾಗಿವೆ. ಅದರಲ್ಲೂ ಸೆಪ್ಟೆಂಬರ್ ತಿಂಗಳಲ್ಲೇ ಬರೋಬ್ಬರಿ 20 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮೈಸೂರು : ತಂಬಾಕು ದರ ದಿಢೀರ್ ಕುಸಿತ: ರೈತರ ಆಕ್ರೋಶ
ಬಂದಿದ್ದನ್ನು ಅನುಭವಿಸುವುದೊಂದೇ ರೈತನಿಗೆ ಉಳಿದಿರುವ ದಾರಿ ಎನ್ನುವಂತಾಗಿದೆ. ಬರಗಾಲ ಬಿದ್ದಾಗ ಸರ್ಕಾರ ಬರಪೀಡಿತ ಎಂದು ಘೋಷಿಸಿ ಎಲ್ಲ ರೈತರಿಗೆ ನೆರವು ನೀಡಿತ್ತು ಆದರೆ, ಈಗ 5 ಎಕರೆ ಬೆಳೆ ನಾಶವಾದರೆ ಅರ್ಧ ಎಕರೆ ಎಂದು ತೋರಿಸಿ ಅಲ್ಪಸ್ವಲ್ಪ ಪರಿಹಾರ ನೀಡಲಾಗುತ್ತಿದೆ. ರೈತರು ಬಹಳ ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕು. ಇಲ್ಲದಿದ್ದರೆ ಯಾವ ಜಾಗೃತಿಯೂ ರೈತರನ್ನು ಉಳಿಸುವುದಿಲ್ಲ.
- ಮಲ್ಲಿಕಾರ್ಜುನ ಬಳ್ಳಾರಿ, ರೈತ ಮುಖಂಡರು
ಸಾಲ ಮಾಡಿ ಖರೀದಿಸಿದ ಟ್ರಾಕ್ಟರ್ ಸೀಜ್, ಚೆಕ್ ಬೌನ್ಸ್: ರೈತ ಆತ್ಮಹತ್ಯೆ
ಯಾವ್ಯಾವ ತಿಂಗಳಲ್ಲಿ ಎಷ್ಟು ಸಾವು?
ಜನವರಿ - 13
ಫೆಬ್ರವರಿ- 10
ಮಾರ್ಚ್- 13
ಏಪ್ರಿಲ್ - 10
ಮೇ- 10
ಜೂನ್- 09
ಜುಲೈ- 08
ಆಗಸ್ಟ್- 12
ಸೆಪ್ಟೆಂಬರ್- 20
ಅಕ್ಟೋಬರ್- 07