Corona Crisis: ಮತ್ತೆ ಕರ್ನಾಟಕದಲ್ಲಿ 1000 ಗಡಿ ದಾಟಿದ ಕೋವಿಡ್
ರಾಜ್ಯದಲ್ಲಿ ಸೋಮವಾರ 1,108 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 997 ಮಂದಿ ಗುಣ ಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 7,680 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ.
ಬೆಂಗಳೂರು (ಜು.19): ರಾಜ್ಯದಲ್ಲಿ ಸೋಮವಾರ 1,108 ಕೊರೋನಾ ಹೊಸ ಪ್ರಕರಣಗಳು ಪತ್ತೆಯಾಗಿದ್ದು, 997 ಮಂದಿ ಗುಣ ಮುಖರಾಗಿದ್ದಾರೆ. ಸೋಂಕಿತರ ಸಾವು ವರದಿಯಾಗಿಲ್ಲ. ಸದ್ಯ 7,680 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 16 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 6.82 ರಷ್ಟುದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು 13 ಸಾವಿರ ಕಡಿಮೆ ನಡೆದಿವೆ.
ಆದರೂ, ಹೊಸ ಪ್ರಕರಣಗಳು 164 ಏರಿಕೆಯಾಗಿವೆ. ಭಾನುವಾರ 944 ಕೇಸ್, ಒಂದು ಸಾವು ವರದಿಯಾಗಿತ್ತು. ಹೊಸ ಪ್ರಕರಣಗಳು 1,000-900 ನಡುವೆ ಏರಿಳಿತ ಮುಂದುವರೆದಿದೆ. ಸೋಂಕು ಪರೀಕ್ಷೆಗಳು ಬರೋಬ್ಬರಿ 13 ಸಾವಿರ ತಗ್ಗಿದ ಹಿನ್ನೆಲೆ ಪಾಸಿಟಿವಿಟಿ ದರ ಹೆಚ್ಚಳವಾಗಿದೆ. ಮೂರು ದಿನಗಳ ಬಳಿಕ ಸೋಂಕಿತರ ಸಾವು ವರದಿಯಾಗಿಲ್ಲ. ಸಕ್ರಿಯ ಸೋಂಕಿತರ ಪೈಕಿ 80 ಮಂದಿ ಆಸ್ಪತ್ರೆಯಲ್ಲಿದ್ದು, 7600 ಮಂದಿ ಮನೆಯಲ್ಲಿ ಆರೈಕೆಯಲ್ಲಿದ್ದಾರೆ.
4ನೇ ದಿನವೂ ಭಾರತದಲ್ಲಿ 20 ಸಾವಿರ ಕೋವಿಡ್ ಕೇಸು: 49 ಸಾವು
ಎಲ್ಲೆಲ್ಲಿ ಸೋಂಕು: ಸೋಮವಾರ ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 933 ಪತ್ತೆಯಾಗಿವೆ. ಉಳಿದಂತೆ ಮೈಸೂರು 25, ದಕ್ಷಿಣ ಕನ್ನಡ 15, ಕೋಲಾರ 12, ಬಳ್ಳಾರಿ 11 ಮಂದಿಗೆ ಸೋಂಕು ತಗುಲಿದೆ. ಉಳಿದಂತೆ 16 ಜಿಲ್ಲೆಗಳಲ್ಲಿ ಬೆರಳೆಣಿಕೆಯಷ್ಟುಪತ್ತೆಯಾಗಿವೆ. 9 ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ವರದಿಯಾಗಿದೆ.
8 ಲಕ್ಷ ಮಂದಿಗೆ ಬೂಸ್ಟರ್ ಡೋಸ್ ಗುರಿ: ಜಿಲ್ಲೆಯಲ್ಲಿ ಕೋವಿಡ್-19 ಸಂಭಾವ್ಯ 4ನೇ ಅಲೆಯ ಸೋಂಕಿನ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ 18-59 ವರ್ಷದೊಳಗಿನ ಸಾರ್ವಜನಿಕರಿಗೆ ಸೆ.30 ರೊಳಗೆ 8 ಲಕ್ಷ ಮಂದಿಗೆ ಮುಂಜಾಗ್ರತಾ ಡೋಸ್ ಲಸಿಕೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಹೇಳಿದರು. ಅವರು ಸೋಮವಾರ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತದ ವತಿಯಿಂದ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ 1ನೇ ಮತ್ತು 2ನೇ ಡೋಸ್ ಲಸಿಕೆ ನೀಡುವಲ್ಲಿ ಶೇ.100 ಸಾಧನೆ ಆಗಿದ್ದು, ಕೋವಿಡ್ 3ನೇ ಅಲೆಯಲ್ಲಿ ಆಸ್ಪತ್ರೆಗೆ ದಾಖಲಾದ ಪ್ರಕರಣಗಳು ಕಡಮೆಯಾಗಿದ್ದವು. ಪ್ರಸ್ತುತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ನೀಡಲಾಗುತ್ತಿದೆ ಎಂದರು.
Free Booster Dose: ಇಂದಿನಿಂದ ರಾಜ್ಯದಲ್ಲಿ ಉಚಿತ 3ನೇ ಡೋಸ್ ಕೋವಿಡ್ ಲಸಿಕೆ
ಕಾರ್ಯಕ್ರಮದಲ್ಲಿ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳು ಮುನ್ನೆಚ್ಚರಿಕಾ ಡೋಸ್ ಲಸಿಕೆ ಪಡೆದರು. ಜಿಲ್ಲಾ ಕೋವಿಡ್ ಲಸಿಕಾ ಉಸ್ತುವಾರಿ ಡಾ.ಎಂ.ಜಿ.ರಾಮ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ. ಕೀರ್ತಿನಾಥ ಬಲ್ಲಾಳ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಉಪಸ್ಥಿತರಿದ್ದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್ ವಂದಿಸಿದರು.