4ನೇ ದಿನವೂ ಭಾರತದಲ್ಲಿ 20 ಸಾವಿರ ಕೋವಿಡ್ ಕೇಸು: 49 ಸಾವು
ದೇಶದಲ್ಲಿ ಸತತ 4ನೇ ದಿನವೂ 20000ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 20,528 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ.
ನವದೆಹಲಿ (ಜು.18): ದೇಶದಲ್ಲಿ ಸತತ 4ನೇ ದಿನವೂ 20000ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣ ದಾಖಲಾಗಿದೆ. ಭಾನುವಾರ ಬೆಳಗ್ಗೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ದೇಶದಲ್ಲಿ 20,528 ಹೊಸ ಕೋವಿಡ್ ಪ್ರಕರಣ ದಾಖಲಾಗಿವೆ. ಕೇರಳದಲ್ಲಿ 17, ಮಹಾರಾಷ್ಟ್ರದಲ್ಲಿ 8 ಸೇರಿ 49 ಸೋಂಕಿತರು ಸಾವಿಗೀಡಾಗಿದ್ದಾರೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4.37 ಕೋಟಿಗೆ ಮತ್ತು ಸಾವಿನ ಸಂಖ್ಯೆ 5.25 ಲಕ್ಷಕ್ಕೆ ತಲುಪಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 1,43,449ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವು ಶೇ.5.23ರಷ್ಟಿದೆ. ಚೇತರಿಕೆ ದರವು ಶೇ.98.47ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 200 ಕೋಟಿ ಡೋಸ್ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
200 ಕೋಟಿ ಡೋಸ್-ಭಾರತ ದಾಖಲೆ: ಕೋವಿಡ್ ಲಸಿಕೆ ವಿತರಣೆಯಲ್ಲಿ ಭಾರತ ಭಾನುವಾರ ಹೊಸದೊಂದು ಮೈಲುಗಲ್ಲು ಸ್ಥಾಪಿಸಿದೆ. 2021ರ ಜ.16ರಂದು ದೇಶದಲ್ಲಿ ಕೋವಿಡ್ ಲಸಿಕಾ ಅಭಿಯಾನ ಆರಂಭಿಸಿದ್ದ ಭಾರತ, 2022ರ ಜು.17ರ ಭಾನುವಾರ 200 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಿದೆ. ಈ ಮೂಲಕ 200 ಕೋಟಿಗಿಂತ ಹೆಚ್ಚು ಪ್ರಮಾಣದಲ್ಲಿ ಲಸಿಕೆ ವಿತರಣೆ ಮಾಡಿದ ದೇಶಗಳ ಪೈಕಿ ಜಗತ್ತಿನ ಎರಡನೇ ದೇಶ ಎನ್ನಿಸಿಕೊಂಡಿದೆ. 341 ಕೋಟಿ ಡೋಸ್ ಲಸಿಕೆ ವಿತರಿಸಿರುವ ಚೀನಾ ಮೊದಲ ಸ್ಥಾನದಲ್ಲಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ ಟ್ವೀಟರ್‌ನಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
Booster Dose: 3ನೇ ಡೋಸ್ ಪಡೆದಿದ್ದು ಬರೀ 15% ಜನ!
ಅಭಿಯಾನ ಆರಂಭ: 2021ರ ಜ.16ರಂದು ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಮೂಲಕ ದೇಶದಲ್ಲಿ ಲಸಿಕಾ ಅಭಿಯಾನ ಆರಂಭವಾಗಿತ್ತು. ನಂತರ ಇದನ್ನು ಹಂತ ಹಂತವಾಗಿ ಮುಂಚೂಣಿ ಕಾರ್ಯಕರ್ತರು (2021 ಫೆ.2), 60 ವರ್ಷ ಮೇಲ್ಪಟ್ಟವರು (2021 ಮಾ.1), ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ 45 ವರ್ಷ ಮೇಲ್ಪಟ್ಟವರು (2021 ಮಾ.1), 45 ವರ್ಷ ಮೇಲ್ಪಟ್ಟವರು (2021 ಏ.1), 18 ವರ್ಷ ಮೇಲ್ಪಟ್ಟವರು (2021 ಮೇ 1), 15 ವರ್ಷ ಮೇಲ್ಪಟ್ಟವರು (2022 ಜ.3) ಮತ್ತು 12 ವರ್ಷ ಮೇಲ್ಪಟ್ಟವರಿಗೆ (2022 ಮಾ.16) ವಿಸ್ತರಿಸಲಾಗಿತ್ತು. ಇದುವರೆಗೂ ದೇಶದ 98ರಷ್ಟು ಜನರು ಕನಿಷ್ಠ 1 ಡೋಸ್, ಶೇ.90ರಷ್ಟುಜನರು ಎರಡೂ ಡೋಸ್ ಪಡೆದುಕೊಂಡಿದ್ದಾರೆ. ಇನ್ನು 15-18ರ ವಯೋಮಾನದ ಶೇ.82ರಷ್ಟುಜನರು ಮೊದಲ ಡೋಸ್ ಮತ್ತು ಶೇ.68ರಷ್ಟು ಜನರು ಎರಡೂ ಡೋಸ್ ಪಡೆದುಕೊಂಡಿದ್ದಾರೆ.
ಹಳ್ಳಿಗಳಿಗೇ ಶೇ.71ರಷ್ಟು ಲಸಿಕೆ: 200 ಕೋಟಿ ಡೋಸ್‌ಗಳ ಪೈಕಿ ಶೇ.71ರಷ್ಟುಲಸಿಕಾ ವಿತರಣೆ ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇ.29ರಷ್ಟು ನಗರ ಪ್ರದೇಶದಲ್ಲಿ ನಡೆದಿದೆ. ಇನ್ನು ಲಸಿಕೆ ಪಡೆದವರಲ್ಲಿ ಶೇ.48.9ರಷ್ಟುಪುರುಷರು ಮತ್ತು ಶೇ.51.5ರಷ್ಟು ಮಹಿಳೆಯರು. ಶೇ.0.02ರಷ್ಟನ್ನು ತೃತೀಯ ಲಿಂಗಿಗಳಿಗೆ ನೀಡಲಾಗಿದೆ.
ಶೇ.100ರ ಸಾಧನೆ: ಆಂಧ್ರಪ್ರದೇಶ, ಅಂಡಮಾನ್-ನಿಕೋಬಾರ್, ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ, ಲಕ್ಷದ್ವೀಪ, ಚಂಡೀಗಢ, ತೆಲಂಗಾಣ ಮತ್ತು ಗೋವಾ ರಾಜ್ಯಗಳು 12 ವರ್ಷ ಮೇಲ್ಪಟ್ಟಎಲ್ಲಾ ವಯಸ್ಕರಿಗೂ ಶೇ.100ರಷ್ಟುಎರಡೂ ಡೋಸ್ ನೀಡಿದ ಸಾಧನೆ ಮಾಡಿವೆ.
Covid Crisis: ಮಾಸ್ಕ್ ಧರಿಸದವರಿಗೆ ದಂಡ ಹಾಕಿ: ತಜ್ಞರು
ಅತಿ ಹೆಚ್ಚು ಲಸಿಕೆ: ಉತ್ತರಪ್ರದೇಶ (34.41 ಕೋಟಿ), ಮಹಾರಾಷ್ಟ್ರ (17.05 ಕೋಟಿ), ಪಶ್ಚಿಮ ಬಂಗಾಳ (14.40 ಕೋಟಿ), ಬಿಹಾರ (13.98 ಕೋಟಿ) ಮತ್ತು ಮಧ್ಯಪ್ರದೇಶ (12.13 ಕೋಟಿ) ಅತಿ ಹೆಚ್ಚು ಲಸಿಕೆ ವಿತರಣೆ ಮಾಡಿದ ಟಾಪ್ 5 ರಾಜ್ಯಗಳಾಗಿವೆ.