ಸತತ 2ನೇ ದಿನವೂ 1000ಕ್ಕೂ ಅಧಿಕ ಕೇಸ್: ಬೆಂಗಳೂರಲ್ಲೇ 1008 ಪ್ರಕರಣ, ಹೆಚ್ಚಿದ ಆತಂಕ
* ರಾಜಧಾನಿಯಲ್ಲಿ ನಾಲ್ಕೂವರೆ ತಿಂಗಳ ಗರಿಷ್ಠ
* ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ
* ಸಕ್ರಿಯ ಸೋಂಕಿತರ ಸಂಖ್ಯೆ 6134ಕ್ಕೇರಿಕೆ
ಬೆಂಗಳೂರು(ಜು.02): ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಪ್ರಕರಣಗಳು 1 ಸಾವಿರ ಗಡಿ ದಾಟಿದ್ದು, ಸೋಂಕಿತರೊಬ್ಬರು ಸಾವಿಗೀಡಾಗಿದ್ದಾರೆ. ಈ ನಡುವೆ ಬೆಂಗಳೂರು ಒಂದರಲ್ಲಿಯೇ 1 ಸಾವಿರಕ್ಕೂ ಅಧಿಕ (1008) ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 4.5 ತಿಂಗಳ ಗರಿಷ್ಠವಾಗಿದೆ. ಇದು ಆತಂಕ ಹೆಚ್ಚಿಸಿದೆ.
ಶುಕ್ರವಾರ 1073 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿದ್ದು, 834 ಮಂದಿ ಗುಣಮುಖರಾಗಿದ್ದಾರೆ. ಬೆಂಗಳೂರಿನಲ್ಲಿ 42 ವರ್ಷದ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ. 26 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 4.2 ರಷ್ಟುದಾಖಲಾಗಿದೆ. ಗುರುವಾರದಷ್ಟೇ ಸೋಂಕು ಪರೀಕ್ಷೆಗಳು ನಡೆದಿದ್ದು, ಹೊಸ ಪ್ರಕರಣಗಳು ಮಾತ್ರ 27 ಹೆಚ್ಚಳವಾಗಿವೆ. (ಗುರುವಾರ 1046, ಸಾವು ಶೂನ್ಯ). ಸಕ್ರಿಯ ಸೋಂಕಿತರ ಸಂಖ್ಯೆ 6134ಕ್ಕೆ ಏರಿದೆ. ಆದರೆ, ಸಕ್ರಿಯರ ಪೈಕಿ 64 ಮಂದಿ ಮಾತ್ರ ಆಸ್ಪತ್ರೆಯಲ್ಲಿದ್ದು, ಉಳಿದಂತೆ 6070 ಮಂದಿ ಮನೆಯಲ್ಲಿಯೇ ಆರೈಕೆಯಲ್ಲಿದ್ದಾರೆ.
4 ತಿಂಗಳ ಬಳಿಕ ಕರ್ನಾಟಕದಲ್ಲಿ 1000ಕ್ಕೂ ಹೆಚ್ಚು ಕೊರೋನಾ ಸೋಂಕು ಕೇಸ್!
ಬೆಂಗಳೂರಲ್ಲಿ 4.5 ತಿಂಗಳ ಗರಿಷ್ಠ:
ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1008 ಪತ್ತೆಯಾಗಿವೆ. ನಾಲ್ಕೂವರೆ ತಿಂಗಳ ಬಳಿಗೆ ಮೊದಲ ಬಾರಿ ಒಂದೇ ದಿನ ಬೆಂಗಳೂರಿನಲ್ಲಿ 1 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.
ಉಳಿದಂತೆ ಮೈಸೂರು 12, ದಕ್ಷಿಣ ಕನ್ನಡ 10, ಬಳ್ಳಾರಿ 9, ತುಮಕೂರು 8, ಉಡುಪಿ 4, ಚಿಕ್ಕಮಗಳೂರು 3, ಬೀದರ್, ಚಿತ್ರದುರ್ಗ, ಧಾರವಾಡ, ಹಾಸನ, ಹಾವೇರಿ, ಕೋಲಾರ ತಲಾ ಇಬ್ಬರು, ಬಾಗಲಕೋಟೆ, ಬೆಳಗಾವಿ, ದಾವಣಗೆರೆ, ಕಲಬುರಗಿ, ಕೊಪ್ಪಳ, ರಾಮನಗರ ಹಾಗೂ ಶಿವಮೊಗ್ಗದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. 10 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.2 ಲಕ್ಷ ಮಂದಿ ಗುಣ ಮುಖರಾಗಿದ್ದು, 40,076 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಕೊರೋನಾ ವರದಿಯಲ್ಲಿ ತಿಳಿಸಿದೆ.