4 ತಿಂಗಳ ಬಳಿಕ ಕರ್ನಾಟಕದಲ್ಲಿ 1000ಕ್ಕೂ ಹೆಚ್ಚು ಕೊರೋನಾ ಸೋಂಕು ಕೇಸ್!
* ಬ್ಯಾಕ್‌ಲಾಗ್ ಇಲ್ಲದಿದ್ದರೂ 1046 ಕೇಸ್ ದೃಢ
* ಪರೀಕ್ಷೆಗೊಳಪಟ್ಟ ಪ್ರತಿ 100 ಮಂದಿಯಲ್ಲಿ ನಾಲ್ವರಿಗೆ ಸೋಂಕು ದೃಢ
* ಪಾಸಿಟಿವಿಟಿ ದರವೂ ಕೂಡಾ ಶೇ.3 ಆಸುಪಾಸಿನಿಂದ ಶೇ.4ಕ್ಕೆ ಹೆಚ್ಚಳ
ಬೆಂಗಳೂರು(ಜು.01): ರಾಜ್ಯದಲ್ಲಿ ಗುರುವಾರ ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಪರೀಕ್ಷೆಗೊಳಪಟ್ಟ ಪ್ರತಿ 100 ಮಂದಿಯಲ್ಲಿ ನಾಲ್ವರಿಗೆ ಸೋಂಕು ದೃಢಪಟ್ಟಿದೆ.
ಗುರುವಾರ 1046 ಕೊರೋನಾ ಹೊಸ ಪ್ರಕರಣಗಳು ವರದಿಯಾಗಿದ್ದು, 587 ಮಂದಿ ಗುಣಮುಖರಾಗಿದ್ದಾರೆ. ಸೋಂಕಿತರ ಸಾವಾಗಿಲ್ಲ. ಸದ್ಯ 5896 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. 26 ಸಾವಿರ ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ.4ರಷ್ಟುದಾಖಲಾಗಿದೆ. ತಾಂತ್ರಿಕ ಸಮಸ್ಯೆಯಿಂದ ಕೈಬಿಟ್ಟಿದ್ದ ಹೊಸ ಪ್ರಕರಣಗಳನ್ನು ಸೇರ್ಪಡೆಯಾಗಿದ್ದ ಕಾರಣ ಬುಧವಾರ ಒಂದು ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಆದರೆ, ಗುರುವಾರ ಯಾವುದೇ ಹೆಚ್ಚುವರಿ ಸೇರ್ಪಡೆಯಾಗದಿದ್ದರೂ ಒಂದು ಸಾವಿರ ಗಡಿದಾಟಿವೆ.
ಕರ್ನಾಟಕದಲ್ಲಿ 1249 ಕೊರೋನಾ ಪ್ರಕರಣ ಪತ್ತೆ
ಕಳೆದ ಫೆಬ್ರವರಿ 20ಕ್ಕೆ 1001 ಹೊಸ ಪ್ರಕರಣಗಳು ಪತ್ತೆಯಾಗಿದ್ದವು. ಸದ್ಯ 128 ದಿನಗಳ ಬಳಿಕ ಒಂದೇ ದಿನ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ. ಪಾಸಿಟಿವಿಟಿ ದರವೂ ಕೂಡಾ ಶೇ.3 ಆಸುಪಾಸಿನಿಂದ ಶೇ.4ಕ್ಕೆ ಹೆಚ್ಚಿದೆ. ಹೊಸ ಪ್ರಕರಣ ಮತ್ತು ಪಾಸಿಟಿವಿಟಿ ದರ ಎರಡೂ ಕೂಡಾ ಏರಿಕೆಯಾಗಿರುವುದು ಒಂದಿಷ್ಟುಆತಂಕ ಮೂಡಿಸಿವೆ.
ಎಲ್ಲಿ ಎಷ್ಟು ಮಂದಿಗೆ ಸೋಂಕು:
ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 984 ಪತ್ತೆಯಾಗಿವೆ. ಉಳಿದಂತೆ ಮೈಸೂರು 15, ಧಾರವಾಡ ಮತ್ತು ಕೋಲಾರ ತಲಾ 6, ದಕ್ಷಿಣ ಕನ್ನಡ 5, ಬಳ್ಳಾರಿ, ಉಡುಪಿ ಹಾಗೂ ಕಲಬುರಗಿ ತಲಾ 4, ಶಿವಮೊಗ್ಗ ಮತ್ತು ತುಮಕೂರು ತಲಾ 3, ಚಿಕ್ಕಮಗಳೂರು ಮತ್ತು ಬೆಂಗಳೂರು ಗ್ರಾಮಾಂತರ ತಲಾ ಇಬ್ಬರಿಗೆ, ಬೆಳಗಾವಿ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಪ್ಪಳ ಹಾಗೂ ಉತ್ತರ ಕನ್ನಡ ತಲಾ ಒಬ್ಬರಿಗೆ ಸೋಂಕು ತಗುಲಿದೆ. 13 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಸಕ್ರಿಯ ಸೋಂಕಿತರ ಪೈಕಿ 80 ಮಂದಿ ಮಾತ್ರ ಆಸ್ಪತೆಯಲ್ಲಿದ್ದು, ಉಳಿದ 5816 ಮಂದಿ ಮನೆಯ ಆರೈಕೆಯಲ್ಲಿದ್ದಾರೆ. ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.2 ಲಕ್ಷ ಮಂದಿ ಗುಣ ಮುಖರಾಗಿದ್ದು, 40,075 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಕೊರೋನಾ ವರದಿಯಲ್ಲಿ ತಿಳಿಸಿದೆ.