Asianet Suvarna News Asianet Suvarna News

Covid Crisis: 22 ತಿಂಗಳ ಬಳಿಕ ಸೋಂಕಿತರ ಸಂಖ್ಯೆ 100ರ ಆಸುಪಾಸಿಗೆ..!

*  106 ಮಂದಿ ಸೋಂಕಿತರಾಗಿದ್ದು, 4 ಸೋಂಕಿತರ ಸಾವು
*  337 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,420 ಸೋಂಕಿತರಿಗೆ ಚಿಕಿತ್ಸೆ
*  ಕೇವಲ 2503 ಕೋವಿಡ್‌ ಕೇಸು, ಸಾರ್ವಕಾಲಿಕ ಕನಿಷ್ಠ 

106 New Coronavirus Cases on March 14th in Karnataka grg
Author
First Published Mar 15, 2022, 6:49 AM IST

ಬೆಂಗಳೂರು(ಮಾ.15):  ರಾಜ್ಯದಲ್ಲಿ(Karnataka) 22 ತಿಂಗಳ ಬಳಿಕ ಕೊರೋನಾ(Coronavirus) ಹೊಸ ಪ್ರಕರಣಗಳು 100 ಆಸುಪಾಸು ಬಂದಿದ್ದು, ಅರ್ಧದಷ್ಟು ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣಗಳು ವರದಿಯಾಗಿವೆ. ಸೋಮವಾರ 106 ಮಂದಿ ಸೋಂಕಿತರಾಗಿದ್ದು, 4 ಸೋಂಕಿತರು ಸಾವಿಗೀಡಾಗಿದ್ದಾರೆ. 337 ಮಂದಿ ಗುಣಮುಖರಾಗಿದ್ದಾರೆ. ಸದ್ಯ 2,420 ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಂಕು ಪರೀಕ್ಷೆಗಳು 23 ಸಾವಿರ ನಡೆದಿದ್ದು, ಪಾಸಿಟಿವಿಟಿ ದರ(Positivity Rate) ಶೇ.0.4 ರಷ್ಟುದಾಖಲಾಗಿದೆ. ಭಾನುವಾರಕ್ಕೆ ಹೋಲಿಸಿದರೆ ಪರೀಕ್ಷೆಗಳು 13 ಸಾವಿರ ಇಳಿಕೆಯಾಗಿದ್ದು, ಈ ಹಿನ್ನೆಲೆ ಹೊಸ ಸೋಂಕಿತರ ಸಂಖ್ಯೆ 58 ತಗ್ಗಿವೆ. ಆದರೆ, ಸಾವು ನಾಲ್ಕು ಏರಿಕೆಯಾಗಿವೆ. (ಭಾನುವಾರ 164 ಪ್ರಕರಣ, ಶೂನ್ಯ ಸಾವು).

2020 ಮೇ 30ರಂದು 106 ಸೋಂಕು ಪ್ರಕರಣಗಳು ದಾಖಲಾಗಿದ್ದವು. ನಂತರ ಮೊದಲ, ಎರಡನೇ ಹಾಗೂ ಮೂರನೇ ಅಲೆಯಲ್ಲಿ ಏರಿಳಿಕೆಯಾಗುತ್ತಾ ಒಂದೇ ದಿನ ಬರೋಬ್ಬರಿ 50 ಸಾವಿರ ಪ್ರಕರಣಗಳು ಪತ್ತೆಯಾಗಿದ್ದವು. ಪ್ರಸ್ತುತ 22 ತಿಂಗಳ ಬಳಿಕ 106ಕ್ಕೆ ತಗ್ಗಿವೆ. ರಾಜ್ಯದ 15 ಜಿಲ್ಲೆಗಳಲ್ಲಿ ಹೊಸ ಪ್ರಕರಣಗಳು ಪತ್ತೆಯಾಗಿಲ್ಲ. ಬೆಂಗಳೂರು 61, ಮೈಸೂರು 11 ಹೊರತು ಪಡಿಸಿ ಉಳಿದ 13 ಜಿಲ್ಲೆಗಳಲ್ಲಿ ಬೆರಳೆಣಿಕೆ ಪ್ರಕರಣಗಳು ವರದಿಯಾಗಿವೆ.

Coronavirus: ಖಾಸಗಿ ಆಸ್ಪತ್ರೆ ಕೋವಿಡ್‌ ಚಿಕಿತ್ಸೆ ದರ ಇಳಿಕೆ?

ಇನ್ನೊಂದೆಡೆ 21 ತಿಂಗಳ ಬಳಿಕ ಭಾನುವಾರ ಶೂನ್ಯಕ್ಕಿಳಿಕೆಯಾಗಿದ್ದ ಸಾವು ಮತ್ತೆ ಹೆಚ್ಚಳವಾಗಿದೆ. ವಿಜಯಪುರ, ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬೊಬ್ಬ ಹಿರಿಯ ನಾಗರೀಕರು, ಮಂಡ್ಯ, ಕಲಬುರಗಿಯಲ್ಲಿ ತಲಾ ಒಬ್ಬೊಬ್ಬ ವಯಸ್ಕರು ಮೃತಪಟ್ಟಿದ್ದಾರೆ. ಮೂರೂ ಅಲೆಗಳಲ್ಲಿಯೂ ಒಟ್ಟಾರೆ 39.43 ಲಕ್ಷ ಮಂದಿಗೆ ಸೊಂಕು ತಗುಲಿದೆ. 39.01 ಲಕ್ಷ ಮಂದಿ ಗುಣಮುಖರಾಗಿದ್ದು, 40,022 ಮಂದಿ ಸಾವಿಗೀಡಾಗಿದ್ದಾರೆ.

ಬೆಂಗಳೂರು ನಗರದಲ್ಲಿ ಸತತ ಮೂರನೇ ದಿನ ಕೊರೋನಾ ಸಾವಿಲ್ಲ

ಬೆಂಗಳೂರು: ರಾಜಧಾನಿಯಲ್ಲಿ ಸತತವಾಗಿ ಮೂರನೇ ದಿನ ಕೊರೋನಾ ಸೋಂಕಿತರ ಸಾವು ಶೂನ್ಯ ವರದಿಯಾಗಿದೆ. ಇನ್ನೊಂದೆಡೆ ಸಕ್ರಿಯ ಸೋಂಕು ಪ್ರಕರಣಗಳು ಎರಡು ಸಾವಿರಕ್ಕಿಂತ ಕಡಿಮೆಯಾಗಿವೆ.

ನಗರದಲ್ಲಿ ಸೋಮವಾರ 61 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 229 ಮಂದಿ ಗುಣಮುಖರಾಗಿದ್ದಾರೆ. ಯಾವ ಸೋಂಕಿತರು ಸಾವಿಗೀಡಾಗಿಲ್ಲ. ಸದ್ಯ 1954 ಸಕ್ರಿಯ ಸೋಂಕಿತರು ಆಸ್ಪತ್ರೆ/ಮನೆಯಲ್ಲಿ ಚಿಕಿತ್ಸೆ, ಆರೈಕೆಯಲ್ಲಿದ್ದಾರೆ. ಸೋಮವಾರ 7 ಸಾವಿರ ಪರೀಕ್ಷೆ ನಡೆದಿದ್ದು, ಶೇ.0.8ರಷ್ಟು ಪಾಸಿಟಿವಿಟಿ ದರ ದಾಖಲಾಗಿದೆ (ಭಾನುವಾರ 112 ಕೇಸ್‌).

Covid Crisis: ಏಷ್ಯಾ ದೇಶಗಳಲ್ಲಿ ಮತ್ತೆ ಸೋಂಕು ಹೆಚ್ಚಳ, ಕಳವಳ

ಮೂರನೇ ಅಲೆಯಲ್ಲಿ ಮೊದಲ ಬಾರಿ ಮಾರ್ಚ್‌ 9 ರಂದು ಸೋಂಕಿತರ ಸಾವು ಶೂನ್ಯಕ್ಕಿಳಿದಿತ್ತು. ಶುಕ್ರವಾರದಿಂದ ಸತತ ಮೂರನೇ ದಿನ ಯಾವುದೇ ಸಾವು ವರದಿಯಾಗಿಲ್ಲ. ಮೂರನೇ ಅಲೆಯ ಉಚ್ಛ್ರಾಯ ಸ್ಥಿತಿಯಲ್ಲಿ ಮೂರು ಲಕ್ಷಕ್ಕೆ ಹೆಚ್ಚಳವಾಗಿದ್ದ ಸಕ್ರಿಯ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಾ ಬಂದು, ಸದ್ಯ ಎರಡು ಸಾವಿರಕ್ಕಿಂತ ಕಡಿಮೆಯಾಗಿದೆ. ಸಕ್ರಿಯ ಸೋಂಕಿತರ ಪೈಕಿ 53 ಮಂದಿ ಆಸ್ಪತ್ರೆಯಲ್ಲಿದ್ದಾರೆ. ಇದರಲ್ಲಿ ಏಳು ಮಂದಿ ವೆಂಟಿಲೇಟರ್‌ನಲ್ಲಿ, 13 ಮಂದಿ ಐಸಿಯುನಲ್ಲಿ, ಏಳು ಮಂದಿ ಆಕ್ಸಿಜನ್‌, ಸಾಮಾನ್ಯ ಹಾಸಿಗೆಗಳಲ್ಲಿ 26 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇವಲ 2503 ಕೋವಿಡ್‌ ಕೇಸು, ಸಾರ್ವಕಾಲಿಕ ಕನಿಷ್ಠ: 27 ಸೋಂಕಿತರ ಸಾವು

ನವದೆಹಲಿ: ದೇಶದಲ್ಲಿ(India) ದೈನಂದಿನ ಕೋವಿಡ್‌ ಪ್ರಕರಣದಲ್ಲಿ ಮತ್ತಷ್ಟು ಇಳಿಕೆ ಕಂಡುಬಂದಿದ್ದು, ಸೋಮವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 2,503 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದೆ. ಇದು 680 ದಿನಗಳ ಕನಿಷ್ಠವಾಗಿದ್ದು, ಜೊತೆಗೆ ಕೋವಿಡ್‌ನ ಮೊದಲ ಅಲೆ ತುತ್ತತುದಿಗೆ ಹೋದ ಬಳಿಕ ದಾಖಲಾದ ಕನಿಷ್ಠ ದೈನಂದಿನ ಪ್ರಕರಣಗಳೂ ಆಗಿವೆ.

ಇದೇ ಅವಧಿಯಲ್ಲಿ 27 ಸೋಂಕಿತರು ಸಾವಿಗೀಡಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ 1,901 ಸೋಂಕಿತರು ಗುಣಮುಖವಾಗುವ ಮೂಲಕ ಒಟ್ಟು ಸಕ್ರಿಯ ಪ್ರಕರಣಗಳು 36,168ಕ್ಕೆ ಇಳಿಕೆಯಾಗಿವೆ. ಒಟ್ಟು ಪ್ರಕರಣಗಳಿಗೆ ಹೋಲಿಸಿದರೆ ಸಕ್ರಿಯ ಸೋಂಕಿನ ಪ್ರಮಾಣ ಶೇ.0.08ರಷ್ಟಿದೆ. ಇನ್ನು ದೈನಂದಿನ ಪಾಸಿಟಿವಿಟಿ ದರ ಶೇ.0.47 ಮತ್ತು ವಾರದ ಪಾಸಿಟಿವಿಟಿ ದರ ಶೇ.0.47ರಷ್ಟುದಾಖಲಾಗಿದೆ. ಒಟ್ಟು ಪ್ರಕರಣಗಳು 4.29 ಕೋಟಿಗೆ ಮತ್ತು ಒಟ್ಟು ಸಾವು 5.15 ಲಕ್ಷಕ್ಕೆ ಏರಿಕೆಯಾಗಿವೆ. ದೇಶದಲ್ಲಿ ಈವರೆಗೆ 180.19 ಕೋಟಿ ಡೋಸ್‌ ಲಸಿಕೆ ವಿತರಿಸಲಾಗಿದೆ.
 

Follow Us:
Download App:
  • android
  • ios