ಬೆಂಗಳೂರು(ನ.11): ದೀಪಾವಳಿ ಹಬ್ಬದ ಪ್ರಯುಕ್ತ ಊರುಗಳಿಗೆ ತೆರಳುವ ಪ್ರಯಾಣಿಕರ ಅನುಕೂಲಕ್ಕಾಗಿ ನ.13 ಮತ್ತು ನ.14ರಂದು ಬೆಂಗಳೂರಿನಿಂದ ರಾಜ್ಯ ಹಾಗೂ ಹೊರ ರಾಜ್ಯದ ವಿವಿಧ ಸ್ಥಳಗಳಿಗೆ ಒಂದು ಸಾವಿರ ಹೆಚ್ಚುವರಿ ಬಸ್‌ ಕಾರ್ಯಾಚರಿಸುವುದಾಗಿ ಕೆಎಸ್‌ಆರ್‌ಟಿಸಿ ತಿಳಿಸಿದೆ.

ಕೆಂಪೇಗೌಡ ಬಸ್‌ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್‌, ತಿರುಪತಿ ಮೊದಲಾದ ಸ್ಥಳಗಳಿಗೆ ವಿಶೇಷ ಬಸ್‌ ಸಂಚರಿಸಲಿವೆ. ಮೈಸೂರು ರಸ್ತೆಯ ಸ್ಯಾಟಲೆಟ್‌ ಬಸ್‌ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಲಿವೆ.

ಕೆಎಸ್ಸಾರ್ಟಿಸಿ- ಬಿಎಂಟಿಸಿ ಬಸ್‌ ಸಂಚಾರದಲ್ಲಿ ಉಂಟಾಗುತ್ತಾ ತೊಡಕು..?

ಶಾಂತಿನಗರ ಬಿಎಂಟಿಸಿ ಬಸ್‌ ನಿಲ್ದಾಣದಿಂದ ನೆರೆಯ ರಾಜ್ಯಗಳ ತಿರುಪತಿ, ವಿಜಯವಾಡ, ಹೈದರಾಬಾದ್‌, ತಿರುವನಂತಪುರ, ಕೊಟ್ಟಾಯಂ ಮೊದಲಾದ ಸ್ಥಳಗಳಿಗೆ ವಿಶೇಷ ಬಸ್‌ಗಳು ಸಂಚರಿಸಲಿವೆ. ಅಂತೆಯೇ ತಾಲೂಕು ಹಾಗೂ ಜಿಲ್ಲಾ ಬಸ್‌ ನಿಲ್ದಾಣಗಳಲ್ಲಿ ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಬಸ್‌ ಕಾರ್ಯಾಚರಿಸಲಾಗುವುದು. ಹಬ್ಬದ ಬಳಿಕ ನ.16ರಂದು ರಾಜ್ಯ ಹಾಗೂ ಹೊರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಹೆಚ್ಚುವರಿ ಬಸ್‌ ಕಾರ್ಯಾಚರಣೆ ಇರಲಿದೆ.

ಈ ಹೆಚ್ಚುವರಿ ಬಸ್‌ಗಳಲ್ಲಿ ಮುಂಗಡ ಆಸನ ಕಾಯ್ದಿರಿಸಲು ಅವಕಾಶವಿದ್ದು, ನಿಗಮದ ಜಾಲತಾಣ ಹಾಗೂ ರಾಜ್ಯ ಹಾಗೂ ಹೊರರಾಜ್ಯದ 706 ಬುಕ್ಕಿಂಗ್‌ ಕೌಂಟರ್‌ಗಳಲ್ಲಿ ಮುಂಗಡ ಆಸನ ಕಾಯ್ದಿರಿಸಬಹುದು. ಪ್ರಯಾಣಿಕರು ಪ್ರಯಾಣದ ದಿನ ಬಸ್‌ ನಿಲ್ದಾಣಗಳಿಗೆ ತೆರಳುವ ಮುನ್ನ ಮುಂಗಡ ಟಿಕೆಟ್‌ಗಳ ಮೇಲೆ ನಮೂದಿಸಲಾದ ಬಸ್‌ ನಿಲ್ದಾಣ ಅಥವಾ ಪಿಕ್‌ ಅಪ್‌ ಪಾಯಿಂಟ್‌ ಹೆಸರನ್ನು ಗಮನಿಸುವಂತೆ ತಿಳಿಸಲಾಗಿದೆ.