ರೈತರನ್ನು ಸ್ವಾವಲಂಬಿಯಾಗಿಸಲು 10 ಸಾವಿರ ರೈತ ಉತ್ಪಾದಕ ಸಂಘ
- ರೈತರನ್ನು ಸ್ವಾವಲಂಬಿಯನ್ನಾಗಿ ಮಾಡಲು ದೇಶದಲ್ಲಿ ಸುಮಾರು 10 ಸಾವಿರ ರೈತ ಉತ್ಪಾದಕರ ಸಂಘ
- ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆ
ಚಿಕ್ಕಮಗಳೂರು (ಆ.19) : ರೈತರನ್ನು ಸ್ವಾವಲಂಬಿಯನ್ನಾಗಿ ಮಾಡಲು ದೇಶದಲ್ಲಿ ಸುಮಾರು 10 ಸಾವಿರ ರೈತ ಉತ್ಪಾದಕರ ಸಂಘಗಳನ್ನು (ಎಫ್‌ಪಿಓ) ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ರೈತರು ಸ್ವಾವಲಂಬಿಯಾಗಬೇಕು. ಪ್ರಧಾನಿಯವರಿಗೆ ಈ ಸಂಕಲ್ಪ ಇದೆ. ಈ ಹಿನ್ನೆಲೆಯಲ್ಲಿ ಎಫ್‌ಪಿಓ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ ಎಂದರು.
' ಪಡಿತರದಲ್ಲಿ ಬೆಲ್ಲ ನೀಡಲು ಕ್ರಮ: ರೈತರ ಆದಾಯ ದ್ವಿಗುಣ ಗುರಿ'
ದೇಶದ ಕೃಷಿಕರು ಸ್ವಾತಂತ್ರ್ಯ ಬಂದ ದಿನದಿಂದಲೂ ನೆಮ್ಮದಿಯಲ್ಲಿ ಇಲ್ಲ. ಈ ಸತ್ಯವನ್ನು ನಾವುಗಳು ಒಪ್ಪಬೇಕು. ಆರಂಭದಲ್ಲಿನ ಸರ್ಕಾರಗಳು ಭಾರತ ಕೃಷಿಕರ ದೇಶ ಎಂಬುದನ್ನು ಮರೆತು, ಕೈಗಾರಿಕೆಗಳ ಕಡೆಗೆ ಒತ್ತು ನೀಡಿದವು. ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿದವು. ನಂತರ ಅವುಗಳು ಹೆಸರಿಲ್ಲದೆ ಮುಚ್ಚಿ ಹೋಗಿವೆ. ಅದಕ್ಕಾಗಿ ಹೂಡಿದ ಲಕ್ಷಾಂತರ ಕೋಟಿ ರು. ಹಾಳಾಗಿದೆ ಎಂದರು.
ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿಯಾದ ಮೇಲೆ ಈ ದೇಶದ ಕೃಷಿಕರನ್ನು ಮೇಲೆತ್ತುವ ಕೆಲಸ ಮಾಡಿದರು. ಗುಜರಾತ್‌ನಲ್ಲಿ ಮುಖ್ಯಮಂತ್ರಿ ಆಗಿದ್ದಾಗ ರೈತರ ಆದಾಯವನ್ನು ದ್ವಿಗುಣಗೊಳಿಸುವ ಕೆಲಸ ಮಾಡಿ ಯಶಸ್ವಿಯಾದರು. ಆದ್ದರಿಂದಲೇ ಅವರು ಪ್ರಧಾನಿ ಆಗುತ್ತಿದ್ದಂತೆ ಕೃಷಿಯ ಕಡೆಗೆ ಹೆಚ್ಚಿನ ಒತ್ತು ನೀಡಿದರು. ಅದಕ್ಕಾಗಿ ಬೇರೆ ಬೇರೆ ಯೋಜನೆ ರೂಪಿಸಿದರು. ದೇಶದಲ್ಲಿ ಶೇ.70ರಷ್ಟುಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಅವರ ಆದಾಯವೇ ಕೃಷಿ ಎಂದು ಹೇಳಿದರು.
ಶೇ.80ರಷ್ಟುರೈತರಲ್ಲಿ ಸಣ್ಣ ಮತ್ತು ಮಧ್ಯಮ ಕೃಷಿಕರಾಗಿದ್ದು, ಕೃಷಿ ಲಾಭದಾಯಕವಲ್ಲ ಎಂದೆನಿಸಿದೆ. ಪ್ರಧಾನಿಯವರು ಸಣ್ಣ ಮತ್ತು ಮಧ್ಯಮ ಕೃಷಿಕರಿಗಾಗಿ ಯೋಜನೆ ನೀಡಲು ಬಜೆಟ್‌ನಲ್ಲಿ ಹಣ ಮೀಸಲು ಇಟ್ಟಿದ್ದಾರೆ ಎಂದು ತಿಳಿಸಿದರು.