' ಪಡಿತರದಲ್ಲಿ ಬೆಲ್ಲ ನೀಡಲು ಕ್ರಮ: ರೈತರ ಆದಾಯ ದ್ವಿಗುಣ ಗುರಿ'
- ರೈತರ ಆದಾಯ ದ್ವಿಗುಣಗೊಳಿಸುವುದೇ ಕೇಂದ್ರ ಸರ್ಕಾರದ ಗುರಿ
- ರಾಷ್ಟ್ರದಾದ್ಯಂತ 10 ಸಾವಿರ ರೈತ ಉತ್ಪಾದಕ ಘಟಕಗಳನ್ನು ತೆರೆಯಲು ಉದ್ದೇಶ
ಮಂಡ್ಯ/ಚಾಮರಾಜನಗರ (ಆ.17): ರೈತರ ಆದಾಯ ದ್ವಿಗುಣಗೊಳಿಸುವುದೇ ಕೇಂದ್ರ ಸರ್ಕಾರದ ಗುರಿಯಾಗಿದ್ದು, ಅದಕ್ಕಾಗಿ ರಾಷ್ಟ್ರದಾದ್ಯಂತ 10 ಸಾವಿರ ರೈತ ಉತ್ಪಾದಕ ಘಟಕಗಳನ್ನು ತೆರೆಯಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರದ್ಲಾಂಜೆ ತಿಳಿಸಿದ್ದಾರೆ. ಜೊತೆಗೆ ಪಡಿತರದಲ್ಲಿ ಬೆಲ್ಲ ನೀಡುವ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು.
ಮಂಡ್ಯ ಮತ್ತು ಚಾಮರಾಜನಗರಗಳಲ್ಲಿ ಜನಾಶೀರ್ವಾದ ಯಾತ್ರೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿಕರು ಆಹಾರ ಉತ್ಪಾದನಾ ಘಟಕಗಳನ್ನು ಸ್ಥಾಪನೆ ಮಾಡಬೇಕು. ಬೆಳೆಯಲ್ಲಿ ಹೆಚ್ಚಿನ ಪ್ರಮಾಣದ ಇಳುವರಿ ತೆಗೆಯಲು ಚಿಂತನೆ ಮಾಡಬೇಕು. ಇದರಿಂದ ಆಹಾರ ಪದಾರ್ಥಗಳನ್ನು ವಿದೇಶಗಳಿಗೆ ರಫ್ತು ಮಾಡಿ ಇನ್ನು ಹೆಚ್ಚಿನ ಲಾಭಗಳಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಜನಾಶೀರ್ವಾದ ಯಾತ್ರೆ
ಸಮಗ್ರ ಕೃಷಿಯಿಂದ ಲಾಭ: ಸಮಗ್ರ ಕೃಷಿಯಿಂದ ರೈತರು ಲಾಭ ಪಡೆಯಲು ಸಾಧ್ಯ. ಒಂದು ಬೆಳೆ ಕೈ ಕೊಟ್ಟರೆ ಮತ್ತೊಂದರಲ್ಲಿ ಬೆಲೆ ಸಿಗಲಿದೆ. ಅಧ್ಯಯನಗಳ ಪ್ರಕಾರ ರೈತ ಆತ್ಮಹತ್ಯೆ ಪ್ರಕರಣಗಳಲ್ಲಿ ಏಕ ಬೆಲೆ ಆಶ್ರಯಿಸಿದ ರೈತರ ಸಂಖ್ಯೆಯೇ ಹೆಚ್ಚಿದೆ. ವ್ಯವಸಾಯದೊಂದಿಗೆ ಮೀನುಗಾರಿಕೆ, ಕುಕ್ಕುಟೋದ್ಯಮ, ಹೈನುಗಾರಿಕೆ ಕಸುಬುಗಳು ಪೂರಕವಾಗಿದ್ದು ರೈತರು ಇವುಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಇದೀಗ ಸಕ್ಕರೆಗಿಂತಲೂ ಬೆಲ್ಲಕ್ಕೆ ಹೆಚ್ಚಿನ ಬೇಡಿಕೆಯಿದ್ದು ಗುಣಾತ್ಮಕ ಬೆಲ್ಲ ಉತ್ಪಾದನೆಯಿಂದ ಆದಾಯ ದ್ವಿಗುಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.