ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 28 ಸಂಘಟನೆಗಳ ಅನೇಕ ಮುಖಂಡರು ಪಾಲ್ಗೊಂಡು ಮಳೆ ಕೊರತೆಯಿಂದ ಕಾವೇರಿ ಜಲಾನಯದ ಜಲಾಶಯಗಳು ಭರ್ತಿಯಾಗದೆ ಸಂಕಷ್ಟ ಎದುರಾಗಿರುವ ಸಮಯದಲ್ಲಿ ಸರ್ಕಾರ ಯಾವ ರೀತಿ ರಾಜ್ಯದ ಹಿತಾಸಕ್ತಿ ಕಾಯಬೇಕು ಎಂಬ ಬಗ್ಗೆ ತಮ್ಮ ಅಭಿಪ್ರಾಯ, ಆಗ್ರಹಗಳನ್ನು ವ್ಯಕ್ತಪಡಿಸಿದರು.
ಬೆಂಗಳೂರು(ಆ.30): ‘ತಮಿಳುನಾಡಿಗೆ ಪ್ರತಿ ದಿನ 5000 ಕ್ಯೂಸೆಕ್ಸ್ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಸೂಚನೆಯನ್ನು ಹಿಂಪಡೆಯುವಂತೆ ಆಗ್ರಹಿಸಬೇಕು. ಕದ್ದು ಮುಚ್ಚಿ ನೀರು ಹರಿಸಿದರೆ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸಬೇಕು. ಸಂಕಷ್ಟ ಸೂತ್ರ ಜಾರಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು...’
ಇವು, ಕರ್ನಾಟಕ ಜಲ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಮಂಗಳವಾರ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ‘ನಮ್ಮ ಜಲ ನಮ್ಮದು-ಬನ್ನಿ ಮಾತನಾಡಿ’ ದುಂಡು ಮೇಜಿನ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಣಯಗಳು.
ಕಾವೇರಿ ನದಿ ನೀರು ವಿವಾದ, ತಮಿಳುನಾಡಿಗೆ ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸಲು CWMA ಆದೇಶ!
ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಮಾರು 28 ಸಂಘಟನೆಗಳ ಅನೇಕ ಮುಖಂಡರು ಪಾಲ್ಗೊಂಡು ಮಳೆ ಕೊರತೆಯಿಂದ ಕಾವೇರಿ ಜಲಾನಯದ ಜಲಾಶಯಗಳು ಭರ್ತಿಯಾಗದೆ ಸಂಕಷ್ಟ ಎದುರಾಗಿರುವ ಸಮಯದಲ್ಲಿ ಸರ್ಕಾರ ಯಾವ ರೀತಿ ರಾಜ್ಯದ ಹಿತಾಸಕ್ತಿ ಕಾಯಬೇಕು ಎಂಬ ಬಗ್ಗೆ ತಮ್ಮ ಅಭಿಪ್ರಾಯ, ಆಗ್ರಹಗಳನ್ನು ವ್ಯಕ್ತಪಡಿಸಿದರು.
ಸಂಕಷ್ಟದ ಸಂದರ್ಭದಲ್ಲಿ ರಾಜ್ಯದ ರೈತರಿಗೆ ಅನ್ಯಾಯ ಮಾಡಿ ತಮಿಳುನಾಡಿಗೆ ನೀರು ಹರಿಸಿದ ರಾಜ್ಯ ಸರ್ಕಾರದ ನಡೆಯನ್ನು ಬಹುತೇಕ ಎಲ್ಲ ಮುಖಂಡರೂ ಖಂಡಿಸಿದರಲ್ಲದೆ, ಕೊನೆಯಲ್ಲಿ 10 ನಿರ್ಣಯಗಳನ್ನು ಕೈಗೊಂಡು ಸರ್ಕಾರಕ್ಕೆ ಕಳುಹಿಸಲು ತೀರ್ಮಾನಿಸಿದರು.
ಮುಖ್ಯಮಂತ್ರಿ ಚಂದ್ರು ಮಾತನಾಡಿ, ರಾಜ್ಯ ಸರ್ಕಾರ ನಾವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ನಿಯಂತ್ರಣ ಸಮಿತಿಯ ಮುಂದೆ ಸಮರ್ಥವಾಗಿ ವಾದ ಮಂಡಿಸಿದ್ದೇವೆ ಎಂದು ಹೇಳಿಕೊಂಡೇ ತಮಿಳುನಾಡಿಗೆ ನೀರು ಹರಿಸುತ್ತಿದೆ. ಇದು ನಮ್ಮ ರೈತರಿಗೆ ಮಾಡುತ್ತಿರುವ ಅನ್ಯಾಯ. ನಮ್ಮ ರಾಜ್ಯಕ್ಕೇ ಅಗತ್ಯದಷ್ಟು ನೀರು ಇಲ್ಲದಿದ್ದಾಗ ಒಂದು ಹನಿ ನೀರನ್ನೂ ಬೇರೆಯವರಿಗೆ ಬಿಡಲು ಆಗುವುದಿಲ್ಲ ಎಂದು ಹೇಳುವ ಬದಲು ಹಂಚಿಕೆಯಾಗಿರುವಷ್ಟು ಬಿಟ್ಟಿಲ್ಲ, ಸಮಿತಿಯ ನಿರ್ದೇಶನದಂತೆ ಕಡಿಮೆ ಪ್ರಮಾಣದ ನೀರು ಬಿಟ್ಟಿದ್ದೇವೆ ಎಂದು ಹೇಳುವುದು ಬೇಜವಾಬ್ದಾರಿತನ. ಇತ್ತೀಚೆಗೆ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ರೈತರ ಸಂಘಟನೆಗಳು, ಕನ್ನಡಪರ ಸಂಘಟನೆಗಳನ್ನು ಆಹ್ವಾನಿಸದಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕೆಆರ್‌ಎಸ್‌ನಲ್ಲಿ ನೀರಿನ ಪ್ರಮಾಣ 100 ಅಡಿ, ಕಬಿನಿಯಲ್ಲಿ 72 ಅಡಿ ಕೆಳಗಿಳಿದಿದ್ದು, ಮುಂದೊಂದು ದಿನ ಕುಡಿಯುವ ನೀರಿಗೂ ಸಂಕಷ್ಟಎದುರಾಗುವಂತಾಗಿದೆ. ಯಾವುದೇ ಕಾರಣಕ್ಕೂ ಕಾವೇರಿ ನೀರು ನಿರ್ವಹಣ ಮಂಡಳಿ ಆದೇಶದಂತೆ ನೆರೆ ರಾಜ್ಯಕ್ಕೆ ನೀರು ಬಿಡಬಾರದು. ರಾಜ್ಯ ಸರ್ಕಾರವು ರಾಜ್ಯದಲ್ಲಿನ ನೀರಿನ ಅಗತ್ಯತೆಗಳ ಕುರಿತು ಸುಪ್ರೀಂಕೋರ್ಚ್‌ಗೆ ಮರು ಪರಿಶೀಲನೆಗೆ ಮನವಿ ಸಲ್ಲಿಸಬೇಕು, ಜತೆಗೆ ಈ ಕುರಿತು ರಾಜ್ಯದ ಲೋಕಸಭಾ ಸದಸ್ಯರು ಕೇಂದ್ರದಲ್ಲಿ ಧ್ವನಿಯೆತ್ತಬೇಕು ಎಂದು ಒತ್ತಾಯಿಸಿದರು.
ಜಲತಜ್ಞ ಕ್ಯಾಪ್ಟನ್ ರಾಜಾರಾಮ್, ಕರ್ನಾಟಕದಲ್ಲಿ ವಾಡಿಕೆಯಂತೆ ಮಳೆ ಕಡಿಮೆಯಾಗಿರುವುದನ್ನು ತಿಳಿದೂ ತಮಿಳುನಾಡು ಪದೇ ಪದೇ ತಕರಾರು ಎತ್ತುವುದು ಸರಿಯಲ್ಲ. 1924ರ ಒಪ್ಪಂದವನ್ನು ಈಗಲೂ ಮುಂದೆ ಇಟ್ಟು ಕ್ಯಾತೆ ತೆಗೆಯುತ್ತಿದೆ. ಆದರೂ, ರಾಜ್ಯ ಸರ್ಕಾರ ಈ ಕುರಿತು ಸರಿಯಾದ ವಾದ ಮಂಡನೆ ಮಾಡುತ್ತಿಲ್ಲ. ಜತೆಗೆ ಕಾವೇರಿ ವಿಚಾರದಲ್ಲಿ ನ್ಯಾಯಾಂಗದ ವಿಳಂಬ, ಮಳೆ ಪ್ರಮಾಣವನ್ನು ಸಮರ್ಪಕವಾಗಿ ಲೆಕ್ಕ ಆಗದೇ ಇರುವುದು, ತಮಿಳುನಾಡಿನ ಅಂತರ್ಜಲ ಪರಿಗಣನೆ ಮಾಡದೆ ಇರುವುದು ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು.
ಕೊಡಗು: ತವರಿನಲ್ಲೇ ಬರಿದಾಗುತ್ತಿದೆ ಕಾವೇರಿ ಒಡಲು!
ಸಭೆಯಲ್ಲಿ ಲೇಖಕ ಸಿ.ಚಂದ್ರಶೇಖರ್, ಮಹಿಳಾ ರೈತ ಹೋರಾಟಗಾರ್ತಿ ಸುನಂದಾ ಜಯರಾಂ, ಕಾನೂನು ತಜ್ಞ ಬ್ರಿಜೇಶ್ ಕಾಳಪ್ಪ, ನೀರಾವರಿ ಹೋರಾಟ ಸಮಿತಿಯ ಆಂಜನೇಯ ರೆಡ್ಡಿ, ಎಎಪಿಯ ಪೃಥ್ವಿ ರೆಡ್ಡಿ, ಕರವೇ ಪ್ರವೀಣ್ ಶೆಟ್ಟಿಸೇರಿದಂತೆ ಒಟ್ಟು 28 ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.
ಸಭೆಯ ನಿರ್ಣಯಗಳು
- ತಮಿಳುನಾಡಿಗೆ ನಿತ್ಯ 5,000 ಕ್ಯೂಸೆಕ್ಸ್ ನೀರು ಬಿಡುವ ತೀರ್ಮಾನ ಹಿಂಪಡೆಯುವಂತೆ ಒತ್ತಾಯಿಸುವುದು
- ಕದ್ದು ಮುಚ್ಚಿ ನೀರು ಬಿಟ್ಟರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸುವುದು
- ಮೇಕೆದಾಟು ಯೋಜನೆಯನ್ನು ಕೂಡಲೇ ಕೈಗೆತ್ತಿಕೊಳ್ಳಲು ಆಗ್ರಹಿಸುವುದು
- ಬೆಂಗಳೂರಿಗೆ ಈ ಹಿಂದೆ ನಿಗದಿಯಾಗಿದ್ದ 4.85 ಟಿಎಂಸಿ ನೀರಿನ ಪ್ರಮಾಣವನ್ನು ಕನಿಷ್ಠ 30 ಟಿಎಂಸಿಗೆ ಹೆಚ್ಚಿಸುವಂತೆ ಆಗ್ರಹಿಸುವುದು
- ಮಳೆ ಕೊರತೆಯಾದಾಗ ಸಂಕಷ್ಟ ಸೂತ್ರ ಜಾರಿಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದು
- ಸಂಕಷ್ಟ ಸೂತ್ರಕ್ಕಾಗಿ ರಾಜ್ಯದ ಎಲ್ಲಾ ಶಾಸಕರು, ಸಂಸದರು ನಿಯೋಗ ತೆರಳಿ ಕೇಂದ್ರವನ್ನು ಒತ್ತಾಯಿಸುವಂತೆ ಆಗ್ರಹಿಸುವುದು
- ಕಾವೇರಿ ಸಂರಕ್ಷಣೆಗೆ 10 ಜನರ ತಜ್ಞರ ಸಮಿತಿ ರಚಿಸುವುದು
- ನೀರು ಹರಿಸುವ ಸರ್ಕಾರದ ನಿರ್ಧಾರವನ್ನು ಸಾರಾಸಗಟಾಗಿ ತಿರಸ್ಕರಿಸುವುದು
