ಕಳೆದ 25 ವರ್ಷದಲ್ಲಿ 10% ಭೂಮಿ ಮರುಭೂಮಿಯಾಗಿದೆ: ಸದ್ಗುರು
* ರಾಜಸ್ಥಾನ ಸರ್ಕಾರ ಜತೆ ಮಣ್ಣು ಉಳಿಸುವ ಕ್ರಮ ಜಾರಿಗೆ ಒಪ್ಪಂದ
* ಮಣ್ಣು ಉಳಿಸಿ ಅಭಿಯಾನಕ್ಕೆ ಲಾಲಚಂದ್ ಕಟಾರಿಯಾ ಬೆಂಬಲ
* ರಾಜಸ್ಥಾನ ಒಪ್ಪಂದ
ಬೆಂಗಳೂರು(ಜೂ.05): ವಿಶ್ವದಾದ್ಯಂತ ತೀವ್ರಗತಿಯಲ್ಲಿ ಮಣ್ಣು ವಿನಾಶ ಹೊಂದುತ್ತಿದ್ದು, ಕಳೆದ 25 ವರ್ಷಗಳಲ್ಲಿ ಶೇ.10ರಷ್ಟು ಭೂಭಾಗ ಮರುಭೂಮಿಯಾಗಿ ಪರಿವರ್ತಿತವಾಗಿದೆ ಎಂದು ಈಶ ಫೌಂಡೇಶನ್‌ನ ಸದ್ಗುರು ಕಳವಳ ವ್ಯಕ್ತಪಡಿಸಿದರು.
ಜೈಪುರದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ರಾಜಸ್ಥಾನ ರಾಜ್ಯ ಸರ್ಕಾರದ ಸಚಿವರುಗಳೊಂದಿಗೆ ಮಣ್ಣು ಉಳಿಸುವ ಕ್ರಮಗಳ ಜಾರಿ ಒಪ್ಪಂದ ಮಾಡಿಕೊಂಡು ಬಳಿಕ ಮಾತನಾಡಿದ ಅವರು, ‘ನಮ್ಮ ಸಂಸ್ಕೃತಿಯಲ್ಲಿ ಮಣ್ಣು ತಾಯಿಯೆಂದು ಗೌರವಿಸಲ್ಪಟ್ಟಿದೆ. ಸದ್ಯ ಮರುಭೂಮೀಕರಣ ಹೆಚ್ಚಾಗಿ ಮಣ್ಣು ವಿನಾಶವಾಗುತ್ತಿದೆ. ಹಸಿ ಕಸ ಮತ್ತು ಜಾನುವಾರುಗಳ ತ್ಯಾಜ್ಯ ಇವೆರಡೇ ಮಣ್ಣಿನ ಜೈವಿಕ ಸತ್ವಕ್ಕೆ ಮೂಲವಾಗಿದೆ. ಭಾರತದಲ್ಲಿ ಶೇ.60 ರಷ್ಟುಜನಸಂಖ್ಯೆ ಕೃಷಿ ಆಧಾರಿತವಾಗಿದ್ದರೂ ಜಾನುವಾರುಗಳ ಸಾಕಣೆ ತೀರಾ ಕಡಿಮೆ ಇದೆ. ಮುಂಬರುವ 10-15 ವರ್ಷಗಳಲ್ಲಿ ಜಾನುವಾರುಗಳ ಪ್ರಮಾಣ ಮತ್ತಷ್ಟುಕಡಿಮೆಯಾದರೆ ಮಣ್ಣಿನ ಮಾಲಿನ್ಯ ಹೆಚ್ಚಾಗಿ ದೇಶವು ಪರಿಸರದ ದೊಡ್ಡ ಸಮಸ್ಯೆ ಎದುರಿಸಲಿದೆ’ ಎಂದು ಎಚ್ಚರಿಕೆ ನೀಡಿದರು. ಮುಂದಿನ ಪೀಳಿಗೆಗಳಿಗಾಗಿ ಸಾರ್ವಜನಿಕರು, ಸರ್ಕಾರಗಳು ಮಣ್ಣಿನ ಸಂರಕ್ಷಣೆಗೆ ಕ್ರಮಕೈಗೊಳ್ಳುಬೇಕು’ ಒತ್ತಾಯಿಸಿದರು.
World Environment Day: 'ಮಣ್ಣು ಉಳಿಸಿ' ಅಭಿಯಾನದಲ್ಲಿ ಇಂದು ಸದ್ಗುರು-ಮೋದಿ ಭಾಗಿ
ರಾಜಸ್ಥಾನ ಒಪ್ಪಂದ:
ಈ ಸಂದರ್ಭದಲ್ಲಿ ರಾಜಸ್ಥಾನದ ಫಲವತ್ತಾದ ಕೃಷಿ ಪ್ರದೇಶದ ಮರುಭೂಮೀಕರಣವನ್ನು ತಡೆಯುವ ಮೂಲಕ ಮಣ್ಣು ಉಳಿಸಲಾಗುವುದು ಎಂಬ ಒಪ್ಪಂದ ಪತ್ರಕ್ಕೆ ರಾಜಸ್ಥಾನ ಸರ್ಕಾರ ಸಹಿ ಮಾಡಿದೆ. ಈ ಒಪ್ಪಂದ ಮಾಡಿಕೊಂಡ ಭಾರತದ ಎರಡನೇ ರಾಜ್ಯವಾಗಿದೆ.
ಇದಕ್ಕೂ ಮುನ್ನ ಮೇ 29ರಂದು ಗುಜರಾತಿನ ಜಾಮ್ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುಜರಾತ್ ಸರ್ಕಾರ ಮಣ್ಣುಉಳಿಸುವ ಒಪ್ಪಂದಕ್ಕೆ ಸಹಿಹಾಕಿತ್ತು. ಸದ್ಗುರು ಅವರು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಭೇಟಿ ಮಾಡಿ ಮಣ್ಣಿನ ಪುನಶ್ಚೇತನ ಹೊತ್ತಿಗೆ ನೀಡಿದರು.
Save Soil Movement: 26 ದೇಶ ಸುತ್ತಿದ ಸದ್ಗುರು ಭಾರತ ಪ್ರವೇಶ!
ರಾಜಸ್ಥಾನದ ಪಂಚಾಯತ್ ರಾಜ್ ಮತ್ತು ಗ್ರಾಮಾಭಿವೃದ್ಧಿ ಮಂತ್ರಿ ರಾಜೇಶ್ ಚಂದ್ ಮೀನಾ ಮಾತನಾಡಿ, ‘ಪ್ರಕೃತಿಯಲ್ಲಿ ಕಾಣುವ ಎಲ್ಲವೂ ಮಣ್ಣಿನಿಂದಲೇ ಬರುವುದು ಮತ್ತು ಮರಳಿ ಮಣ್ಣಿಗೇ ಹೋಗಿ ಸೇರುವುದು. ಈ ಅಭಿಯಾನವು ಸದ್ಗುರುಗಳ ವೈಯಕ್ತಿಕ ಉದ್ದೇಶ ಹೊಂದಿಲ್ಲ. ಪ್ರತಿಯೊಬ್ಬ ಮನುಷ್ಯನಿಗೂ ಪ್ರಯೋಜನವಾಗಲಿದೆ. ಯುವಜನತೆ ಪರಿಸರ ಸ್ನೇಹಿ ಕ್ರಮಗಳ ಮೂಲಕ ಮಣ್ಣನ್ನು ಪುನಶ್ಚೇತನಗೊಳಿಸುವುದಕ್ಕೆ ಬದ್ಧರಾಗಿ’ ಎಂದು ಕರೆಕೊಟ್ಟರು.
ಕೃಷಿ ಮಂತ್ರಿ ಲಾಲಚಂದ್ ಕಟಾರಿಯಾ ಮಾತನಾಡಿ ವಿಶ್ವದಾದ್ಯಂತ ವ್ಯಾಪಿಸುತ್ತಿರುವ ಮಣ್ಣು ಉಳಿಸಿ ಅಭಿಯಾನಕ್ಕೆ ತಮ್ಮ ಬೆಂಬಲವನ್ನು ವ್ಯಕ್ತಪಡಿದರು. ಇದೇ ವೇಳೆ ಸದ್ಗುರು ಕೃಷಿಮಂತ್ರಿಗಳಿಗೆ ಮಣ್ಣು ಉಳಿಸಲು ಕೈಗೊಳ್ಳಬೇಕಾದ ನೀತಿಗಳ ಕೈಪಿಡಿಯನ್ನು ನೀಡಿದರು.