Save Soil Movement: 26 ದೇಶ ಸುತ್ತಿದ ಸದ್ಗುರು ಭಾರತ ಪ್ರವೇಶ!

ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸುವಂತೆ 26 ದೇಶಗಳಲ್ಲಿ ಮಣ್ಣು ಉಳಿಸಿ ಅಭಿಯಾನ ಕೈಗೊಂಡು ಈಶಾ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಭಾನುವಾರ ಗುಜರಾತ್‌ನ ಜಾಮ್‌ ನಗರದ ಮೂಲಕ ಭಾರತಕ್ಕೆ ವಾಪಸಾಗಿದ್ದಾರೆ. ಇನ್ನು ಮುಂದಿನ 25 ದಿನಗಳ ಕಾಲ ಭಾರತದ ವಿವಿಧ ಭಾಗಗಳಲ್ಲಿ ಅಭಿಯಾನ ಮುನ್ನಡೆಸಲಿದ್ದಾರೆ.

Save Soil Movement After covering 26 nations on motorcycle Sadhguru gets a rousing welcome in India gvd

ಬೆಂಗಳೂರು (ಮೇ.30): ಮಣ್ಣಿನ ಫಲವತ್ತತೆಯನ್ನು ಸಂರಕ್ಷಿಸುವಂತೆ 26 ದೇಶಗಳಲ್ಲಿ ಮಣ್ಣು ಉಳಿಸಿ ಅಭಿಯಾನ ಕೈಗೊಂಡು ಈಶಾ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಭಾನುವಾರ ಗುಜರಾತ್‌ನ ಜಾಮ್‌ ನಗರದ ಮೂಲಕ ಭಾರತಕ್ಕೆ ವಾಪಸಾಗಿದ್ದಾರೆ. ಇನ್ನು ಮುಂದಿನ 25 ದಿನಗಳ ಕಾಲ ಭಾರತದ ವಿವಿಧ ಭಾಗಗಳಲ್ಲಿ ಅಭಿಯಾನ ಮುನ್ನಡೆಸಲಿದ್ದಾರೆ. ಭಾರತೀಯ ನೌಕಾಪಡೆಯು ತಮ್ಮ ಸಂಗೀತ ವಾದನದಲ್ಲಿ ಮಣ್ಣು ಉಳಿಸಿ ಅಭಿಯಾನದ ಗೀತೆಯನ್ನು ನುಡಿಸಿ ಸದ್ಗುರು ಅವರನ್ನು ಸ್ವಾಗತಿಸಿದರೆ, ವಿವಿಧ ರಾಜ್ಯಗಳಿಂದ ಬಂದು ಸೇರಿದ್ದ ಸಾವಿರಾರು ಉತ್ಸಾಹಿಗಳ ಮುಗಿಲು ಮುಟ್ಟುವ ಘೋಷಣೆ, ಮೈನವಿರೇಳಿಸುವ ಡೋಲು ವಾದನ ಮತ್ತು ರೋಮಾಂಚಕ ಜಾನಪದ ಪ್ರದರ್ಶನಗಳ ನಡುವೆ ಸದ್ಗುರು ಭಾರತಕ್ಕೆ ಕಾಲಿಟ್ಟರು.

ಲಂಡನ್‌ನಲ್ಲಿ ಮಾರ್ಚ್‌ 21ರಿಂದ ಅಭಿಯಾನ ಆರಂಭಿಸಿದ ಸದ್ಗುರು ಯೂರೋಪ್‌, ಮಧ್ಯ ಏಷಿಯಾ ಮತ್ತು ಮಧ್ಯಪೂರ್ವ ದೇಶಗಳಲ್ಲಿ ಅಭಿಯಾನ ಸಂಘಟಿಸಿ ಓಮನ್‌ ದೇಶದ ಪೋರ್ಚ್‌ ಸುಲ್ತಾನ್‌ ಕಾಬೂಸ್‌ನಿಂದ ಹೊರಟು ಹಿಂದೂ ಮಹಾಸಾಗರದಲ್ಲಿ ಮೂರು ದಿನಗಳ ಸಮುದ್ರಯಾನ ನಡೆಸಿ ಜಾಮ್‌ ನಗರ ತಲುಪಿದ್ದರು. ನೆರೆದಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ಸದ್ಗುರು, ‘ಮಣ್ಣು ಉಳಿಸಿ ಅಭಿಯಾನದ ತೀವ್ರಗತಿಯನ್ನು ಕಾಪಾಡಿಕೊಂಡು ಮುಂದುವರಿಸಬೇಕು. ಕೊನೇಪಕ್ಷ ಮುಂದಿನ 30 ದಿನಗಳ ಕಾಲ ನೀವು ನಿಮ್ಮ ಧ್ವನಿಯನ್ನು ಮುಗಿಲು ಮುಟ್ಟುವಂತೆ ಏರಿಸಬೇಕು. 

Save Soil Movement: ನೀವು ತಿಳಿದಿರಲೇಬೇಕಾದ 15 ಮಹತ್ವದ ಸಂಗತಿಗಳು!

ಜಗತ್ತಿನ ಎಲ್ಲ ಸರ್ಕಾರಗಳೂ ಮಣ್ಣಿನ ಪುನರುಜ್ಜೀವನ ಮಾಡಲು ನೀತಿ-ನಿರೂಪಣೆಯನ್ನು ಮಾಡುವ ತನಕ, ಈ ಅಭಿಯಾನದ ಘೋಷವನ್ನು ಪ್ರತಿದಿನ 15-20 ನಿಮಿಷಗಳ ಕಾಲ ಎಲ್ಲರಿಗೂ ಕೇಳುವಂತೆ ಮಾಡಿ’ ಎಂದು ಕರೆ ನೀಡಿದರು. ಸದ್ಗುರು ಅವರು ಭರತ ಭೂಮಿಯಲ್ಲಿ ಮಣ್ಣು ಉಳಿಸಿ ಅಭಿಯಾನದ ಆರಂಭದ ದ್ಯೋತಕವಾಗಿ ಸಸಿಯೊಂದನ್ನು ನೆಟ್ಟರು. ಜಾಮ್‌ ನಗರದ ಜಾಮ್‌ ಸಾಹಿಬ್‌ನ ಪ್ರತಿನಿಧಿ ಎಕ್ತಬಾ ಸೋಧಾ ಅವರ ಜೊತೆ ಹಲವು ಧಾರ್ಮಿಕ ಮತ್ತು ರಾಜಕೀಯ ನೇತಾರರು, ಭಾರತೀಯ ನೌಕಾಪಡೆಯ ಕಮಾಂಡಿಂಗ್‌ ಆಫೀಸರ್‌ಗಳು ಮತ್ತು ಭಾರತೀಯ ವಾಯುಪಡೆ ಅಧಿಕಾರಿಗಳು ಸದ್ಗುರು ಅವರನ್ನು ಸ್ವಾಗತಿಸಿದರು.

27 ದೇಶಗಳಿಗೆ ಬೈಕ್‌ ಯಾತ್ರೆ: ಅಭಿಯಾನದ ಭಾಗವಾಗಿ ಸದ್ಗುರು ಅವರು 100 ದಿನಗಳಲ್ಲಿ 30 ಸಾವಿರ ಕಿ.ಮೀ. ಬೈಕ್‌ ಯಾತ್ರೆ ನಡೆಸುತ್ತಿದ್ದಾರೆ. ಮಾರ್ಚ್‌ 21 ರಂದು ಲಂಡನ್‌ನಿಂದ ಆರಂಭವಾದ ಬೈಕ್‌ ಯಾತ್ರೆ ಯುರೋಪ್‌, ಮಧ್ಯ ಏಷ್ಯಾದ 27 ರಾಷ್ಟ್ರಗಳಲ್ಲಿ ಸಾಗುತ್ತಿದೆ. ಅಲ್ಲಿನ ರಾಜಕೀಯ ನಾಯಕರು, ಉದ್ಯಮಿಗಳು, ಪತ್ರಕರ್ತರು, ಸೆಲೆಬ್ರಿಟಿಗಳು, ಸಾರ್ವಜನಿಕರನ್ನು ಭೇಟಿ ಮಾಡಿ ಮಣ್ಣು ಉಳಿಸುವ ಅನಿವಾರ್ಯತೆಯನ್ನು ಸದ್ಗುರು ಮನದಟ್ಟು ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಆ ದೇಶಗಳ ಸರ್ಕಾರಗಳಿಗೆ ನೀತಿಗಳನ್ನು ರೂಪಿಸುವ ಮೂಲಕ ತುರ್ತು ಕ್ರಮ ಕೈಗೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ.  ಈಗಾಗಲೇ ಹಲವು ದೇಶಗಳ ಮುಖ್ಯಸ್ಥರು, ಜಾಗತಿಕ ನಾಯಕರು, ವಿಜ್ಞಾನಿಗಳು, ಪರಿಸರ ಸಂರಕ್ಷಣಾ ಸಂಸ್ಥೆಗಳು ಹಾಗೂ ವಿಶ್ವಸಂಸ್ಥೆ ಅಂಗ ಸಂಸ್ಥೆಗಳು ಅಭಿಯಾನಕ್ಕೆ ಬೆಂಬಲ ಸೂಚಿಸಿವೆ.

Save Soil Movement: ‘ಮಣ್ಣು ಉಳಿಸಿ’ಗೆ ಹಾಲಿ, ಮಾಜಿ ಸಿಎಂಗಳ ಬೆಂಬಲ

ಅರಮನೆ ಮೈದಾನದಲ್ಲಿ ಕಾರ್ಯಕ್ರಮ: ಜೂನ್‌ 19ರಂದು ಸದ್ಗುರು ಕರ್ನಾಟಕ ತಲುಪಲಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೃಹತ್‌ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಎಲ್ಲ ಮಾಜಿ ಮುಖ್ಯಮಂತ್ರಿಗಳು ಮತ್ತು ಹಲವಾರು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಸದ್ಗುರುಗಳ ಮಣ್ಣು ಉಳಿಸಿ ಯಾತ್ರೆಯು ಜೂನ್‌ನಲ್ಲಿ ಕಾವೇರಿ ನದಿಯ ಜಲಾನಯನ ಪ್ರದೇಶದಲ್ಲಿ ಸಾಗುವ ಮೂಲಕ ಮುಕ್ತಾಯಗೊಳ್ಳಲಿದೆ.

Latest Videos
Follow Us:
Download App:
  • android
  • ios