*ಬೆಂಗಳೂ 8, ಧಾರವಾಡದಲ್ಲಿ 2 ಹೊಸ ಕೇಸ್*ಕೊರೋನಾ ರೂಪಾಂತರಿ ಸಂಖ್ಯೆ 76ಕ್ಕೇರಿಕೆ*ಒಬ್ಬ ಸೋಂಕಿತನ ಮಾಹಿತಿಯೇ ಇಲ್ಲ

ಬೆಂಗಳೂರು (ಜ.4): ರಾಜ್ಯದಲ್ಲಿ ಒಮಿಕ್ರೋನ್‌ ಹಾವಳಿ (Omicron Variant) ಮುಂದುವರೆದಿದ್ದು, ಬೆಂಗಳೂರಿನಲ್ಲಿ (Bangalore) ಎಂಟು ಮತ್ತು ಧಾರವಾಡದಲ್ಲಿ (Dharwad) ಇಬ್ಬರಿಗೆ ಸೇರಿ ಸೋಮವಾರ 10 ಮಂದಿಯಲ್ಲಿ ರೂಪಾಂತರಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟಾರೆ ಒಮಿಕ್ರೋನ್‌ ಸೋಂಕಿತರ ಸಂಖ್ಯೆ 76ಕ್ಕೆ ಹೆಚ್ಚಳವಾಗಿದೆ. ವಿದೇಶದಿಂದ ಬಂದವರಲ್ಲಿ ಮಾತ್ರವಲ್ಲದೆ, ಕ್ಲಸ್ಟರ್‌ ಕೇಸ್‌ಗಳ ಆಯ್ದ ಸೋಂಕಿತರ ಮಾದರಿಯಲ್ಲಿಯೂ ಒಮಿಕ್ರೋನ್‌ ಸೋಂಕು ಪತ್ತೆಯಾಗಿದೆ. 

ಸೋಮವಾರ ಪತ್ತೆಯಾದ ಸೋಂಕಿತರಲ್ಲಿ ಕಳೆದ ವಾರ ದುಬೈನಿಂದ (Dubai) ಬಂದಿದ್ದ ಇಬ್ಬರು, ಬೆಲ್ಜಿಯಂ (Belgium) , ಕೆನಡಾ (Canada), ಅಮೆರಿಕದಿಂದ (America) ಬಂದಿದ್ದ 3 ಮಂದಿ ವಿದೇಶಿ ಪ್ರಯಾಣಿಕರಿದ್ದಾರೆ. ಅಮೆರಿಕ ಸೋಂಕಿತರ ಸಂಪರ್ಕದಲ್ಲಿದ್ದ 13 ವರ್ಷದ ಬಾಲಕಿ, ಮುಂಬೈನಿಂದ (Mumbai) ಬಂದಿದ್ದ ಇಬ್ಬರು, ಹುಬ್ಬಳ್ಳಿಯ ರೈಲ್ವೆ ಶಾಲೆಯ ಬಾಲಕಿ ಮತ್ತು ಶಿಕ್ಷಕಿ ಇದ್ದಾರೆ. ಈ ಎಲ್ಲಾ ಸೋಂಕಿತರ ಆರೋಗ್ಯ ಸ್ಥಿರವಾಗಿದ್ದು, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಐಸೋಲೇಷನ್‌ (Isolation) ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಒಬ್ಬ ಸೋಂಕಿತನ ಮಾಹಿತಿಯೇ ಇಲ್ಲ

ಆರೋಗ್ಯ ಇಲಾಖೆ ಮೊದಲು 11 ಮಂದಿಯಲ್ಲಿ ಒಮಿಕ್ರೋನ್‌ ಪತ್ತೆಯಾಗಿದೆ ಎಂದು ಮಾಹಿತಿ ನೀಡಿತ್ತು. 11ನೇ ಸೋಂಕಿತ ಬೆಂಗಳೂರಿನ ಖಾಸಗಿ ಪ್ರಯೋಗಾಲಯದಲ್ಲಿ ಡಿ.28ರಂದು ಸೊಂಕು ಪರೀಕ್ಷೆಗೊಳಗಾಗಿ ಕೊರೋನಾ ವರದಿ ಪಾಸಿಟಿವ್‌ (Corona Positive) ಬಂದಿತ್ತು. ಆತನ ವಿಳಾಸ ಮಾಹಿತಿ ಇಲ್ಲ, ಸಂಪರ್ಕ ಸಾಧ್ಯವಾಗಿಲ್ಲ. ಐಸೋಲೇಷನ್‌ ಇದ್ದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಕುರಿತು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತು ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ 11ನೇ ಸೋಂಕಿತರ ಮಾಹಿತಿಯನ್ನು ತೆಗೆದು ಆ ಬಳಿಕ 10 ಸೋಂಕಿತರ ಮಾಹಿತಿ ಒಳಗೊಂಡ ದಾಖಲಾತಿಯನ್ನು ಬಿಡುಗಡೆ ಮಾಡಿದೆ.

"

ಇದನ್ನೂ ಓದಿ: Corona Update ಕರ್ನಾಟಕದಲ್ಲಿ ಕೊರೋನಾ ಭಾರಿ ಹೆಚ್ಚಳ, ಹೀಗೆ ಮುಂದುವರಿದ್ರೆ ಲಾಕ್‌ ಫಿಕ್ಸ್!

ಈ ಎಲ್ಲಾ ಸೋಂಕಿತರ ಸಂಪರ್ಕ ಹೊಂದಿದ್ದ 450 ಪ್ರಾಥಮಿಕ, 30 ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಿ ಸೋಂಕು ಪರೀಕ್ಷೆಗೊಳಪಡಿಸಿದ್ದು, ನಾಲ್ಕು ಮಂದಿಯಲ್ಲಿ ಮಾತ್ರ ಸೋಂಕು ದೃಢಪಟ್ಟಿದೆ. ವಿದೇಶದಿಂದ ಬಂದ ಐದು ಪ್ರಯಾಣಿಕರಿಗೆ ಕಳೆದ ವಾರವೇ ವಿಮಾನ ನಿಲ್ದಾಣದಲ್ಲಿಯೇ ಸೋಂಕು ದೃಢಪಟ್ಟು, ಆಸ್ಪತ್ರೆಯಲ್ಲಿ ಐಸೋಲೇಷನ್‌ನಲ್ಲಿದ್ದರು. ಸದ್ಯ ವಂಶವಾಹಿ ಪರೀಕ್ಷೆ ವರದಿ ಬಂದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಕ್ಲಸ್ಟರ್‌ ಕೇಸ್‌ನಲ್ಲಿ ಒಮಿಕ್ರೋನ್‌ ಪತ್ತೆ:

ಡಿಸೆಂಬರ್‌ ಮೂರನೇ ವಾರ ಹುಬ್ಬಳ್ಳಿಯ ರೈಲ್ವೆ ಶಾಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿತ್ತು. ಇದನ್ನು ಕ್ಲಸ್ಟರ್‌ ಕೊರೋನಾ (Cluster Corona) ಎಂದು ಪರಿಗಣಿಸಲಾಗಿತ್ತು. ಈ ಹಿನ್ನೆಲೆ ಆ ಶಾಲೆಯ ಆಯ್ದ ಸೋಂಕಿತರ ಮಾದರಿಯನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಿದ್ದು, ಇಬ್ಬರಲ್ಲಿಯೂ ಒಮಿಕ್ರೋನ್‌ ದೃಢಪಟ್ಟಿದೆ. ಈ ಮೂಲಕ ಕ್ಲಸ್ಟರ್‌ ಕೇಸ್‌ಗೆ ವೇಗವಾಗಿ ಹರಡುವ ಶಕ್ತಿ ಹೊಂದಿರುವ ಒಮಿಕ್ರೋನ್‌ ರೂಪಾಂತರಿಯೇ ಕಾರಣ ಎನ್ನಲಾಗುತ್ತಿದೆ.

ವಿದೇಶದಿಂದ ಸೋಂಕು ತಂದ 47 ಜನ:

ದಿನದಿಂದ ದಿನಕ್ಕೆ ವಿದೇಶದಿಂದ ಬಂದವರಿಂದ ರಾಜ್ಯದಲ್ಲಿ ಒಮಿಕ್ರೋನ್‌ ಹೆಚ್ಚಳವಾಗುತ್ತಿದೆ. ಡಿ.1 ರಿಂದ 31ವರೆಗೂ 42 ವಿದೇಶ ಪ್ರಯಾಣಿಕರಲ್ಲಿ ದೃಢಪಟ್ಟಿತ್ತು. ಸೋಮವಾರ ಮತ್ತೆ ಐದು ವಿದೇಶಿ ಪ್ರಯಾಣಿಕರಲ್ಲಿ ಕಾಣಿಸಿಕೊಂಡಿದೆ. ಈ ಮೂಲಕ ವಿದೇಶದಿಂದ (International Travelers) ರಾಜ್ಯಕ್ಕೆ ಬಂದ 47 ಪ್ರಯಾಣಿಕರಲ್ಲಿ ಒಮಿಕ್ರೋನ್‌ ದೃಢಪಟ್ಟಂತಾಗಿದೆ. ಇದರ ಜತೆಗೆ ದೆಹಲಿ, ಮುಂಬೈನಲ್ಲಿಯೂ ಒಮಿಕ್ರೋನ್‌ ಭಾರೀ ಸಂಖ್ಯೆಯಲ್ಲಿ ಹೆಚ್ಚಿದ್ದು, ಅಲ್ಲಿಂದ ಬಂದ ಪ್ರಯಾಣಿಕರಲ್ಲಿಯೂ ಒಮಿಕ್ರೋನ್‌ ಪತ್ತೆಯಾಗುತ್ತಿದೆ.

ಇದನ್ನೂ ಓದಿ: Coronavirus Update: ಕೊರೋನಾ ಹೆಚ್ಚಳ, ಕಠಿಣ ಕ್ರಮದ ಎಚ್ಚರಿಕೆ ಕೊಟ್ಟ ಸಿಎಂ ಬೊಮ್ಮಾಯಿ