ರಾಜ್ಯಕ್ಕೆ 1 ಟ್ರಿಲಿಯನ್ ಆರ್ಥಿಕತೆ ಗುರಿ: ಸಿಎಂ ಬೊಮ್ಮಾಯಿ
ದೇಶದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ರಾಜ್ಯದ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಗುಂಪು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು (ಅ.19): ದೇಶದ ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಗೆ ರಾಜ್ಯದ ಒಂದು ಟ್ರಿಲಿಯನ್ ಡಾಲರ್ ಕೊಡುಗೆ ನೀಡುವ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಗುಂಪು ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳವಾರ ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಯೋಜನಾ ಇಲಾಖೆಯ ಕರ್ನಾಟಕ ಆರ್ಥಿಕ ಸಮೀಕ್ಷೆ 2021-22ರ ಆಧಾರದ ಮೇಲೆ ಹೆಚ್ಚಿನ ವಿಶ್ಲೇಷಣೆಯೊಂದಿಗೆ ಮೋಹನ್‌ದಾಸ್ ಪೈ ಮತ್ತು ನಿಶಾ ಹೊಳ್ಳ ರಚಿಸಿರುವ ‘ಕರ್ನಾಟಕ: ಒಂದು ಟ್ರಿಲಿಯನ್ ಡಾಲರ್ ಜಿಡಿಪಿ ವಿಷನ್’ ಎಂಬ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ಮುಂಬರುವ 2025ರ ವೇಳೆಗೆ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಸಾಧಿಸುವ ಗುರಿಯೊಂದಿಗೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯ ಮಾಪನವನ್ನು ಈ ಗುಂಪು ಮಾಡಲಿದೆ. ಯೋಜನಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಉದ್ಯಮಿ ಮೋಹನ್ ದಾಸ್ ಪೈ, ಎಫ್‌ಐಸಿಸಿಐ ಮತ್ತು ಮೆಕೆನ್ಸಿಯ ಪ್ರತಿನಿಧಿಗಳನ್ನು ಈ ಗುಂಪು ಒಳಗೊಳ್ಳಲಿದೆ ಎಂದರು.
ಒಕ್ಕಲಿಗರು ಹೆಚ್ಚು ಮೀಸಲು ಕೇಳುವುದು ತಪ್ಪಲ್ಲ: ಸಿಎಂ ಬೊಮ್ಮಾಯಿ
ಫಲಿತಾಂಶ ಆಧಾರಿತ ಉದ್ದೇಶಿತ ಬಜೆಟ್‌ಗೆ ಅನುಕೂಲವಾಗುವಂತೆ ಡಿಸೆಂಬರ್ ವೇಳೆಗೆ ಕ್ರಿಯಾಯೋಜನೆ ಸಿದ್ಧವಾಗಲಿದೆ. ಕರ್ನಾಟಕದಿಂದ ಒಂದು ಟ್ರಿಲಿಯನ್ ಡಾಲರ್ ಕೊಡುಗೆಯೊಂದಿಗೆ ಐದು ಟ್ರಿಲಿಯನ್ ಭಾರತದ ಗುರಿಯೊಂದಿಗೆ ನಾವು ಹೊಂದಿಕೊಳ್ಳಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಟಿ.ವಿ.ಮೋಹನ್ ದಾಸ್ ಪೈ, ನಿಶಾಹೊಳ್ಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಯೋಜನಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಇತರರು ಉಪಸ್ಥಿತರಿದ್ದರು.
ಉ.ಕ, ದ.ಕ ನಡುವೆ ಅಂತರ ಇದೆ: ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ನಡುವಿನ ಭಾರೀ ಅಂತರವಿದ್ದು, 10 ಅತಿ ಬಡ ಜಿಲ್ಲೆಗಳು ಉತ್ತರ ಕರ್ನಾಟಕದ ಭಾಗದಲ್ಲಿದೆ ಎಂಬುದಾಗಿ ಕರ್ನಾಟಕ ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧಿಸುವ ಕುರಿತ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ಕೃಷಿಯ ವಲಯದ ಕನಿಷ್ಠ ಬೆಂಬಲ ಬೆಲೆಯ ಬೆಳೆಗಳ ಉತ್ಪಾದನೆ ಕ್ರಮೇಣ ಕ್ಷೀಣಿಸುತ್ತಿವೆ. ಕನಿಷ್ಠ ಬೆಂಬಲ ಬೆಲೆಯಿಂದ ಹೊರತಾದ ವಲಯಗಳು ವೇಗವಾಗಿ ಬೆಳೆಯುತ್ತಿದ್ದು, ರೈತರ ಆದಾಯವನ್ನು ಸುಧಾರಿಸಲು ವಿಶೇಷ ಗಮನಹರಿಸುವ ಅಗತ್ಯ ಇದೆ. ರಾಜ್ಯವು 8.5 ಲಕ್ಷ ಬಲವಾದ ಎಂಎಸ್‌ಎಂಇಗಳನ್ನು ಹೊಂದಿದೆ. ಇದು 55 ಲಕ್ಷ ಕಾರ್ಮಿಕರ ಮತ್ತು 17 ಸಾವಿರ ಬೃಹತ್ ಎಂಜಿನಿಯರಿಂಗ್ ಆಧಾರಿತ ಬಲವಾದ ಕಾರ್ಖಾನೆಗಳನ್ನು ಹೊಂದಿದೆ.
ಆರೆಸ್ಸೆಸ್, ಸಿಎಂ, ಬಿಜೆಪಿ ಹೆಸರೆತ್ತದೆ ಸಿದ್ದು ಮಾತಾಡಲಿ: ಬೊಮ್ಮಾಯಿ ತಿರುಗೇಟು
ಈ ವಲಯವು ಬಂಡವಾಳದ ಲಭ್ಯತೆ, ಹೆಚ್ಚಿನ ವಿದ್ಯುಚ್ಫಕ್ತಿ ಮತ್ತು ಕಡಿಮೆ ಉತ್ಪಾದಕತೆಯಿಂದ ಸವಾಲುಗಳನ್ನು ಎದುರಿಸುತ್ತಿದೆ ಎಂದು ತಿಳಿಸಲಾಗಿದೆ. ಕರ್ನಾಟಕವು ದೇಶದ ಐದು ಪ್ರಮುಖ ರಾಜ್ಯಗಳಲ್ಲಿ ಒಂದಾಗಿದ್ದು, ಪ್ರಸ್ತು ಆರ್ಥಿಕ ವರ್ಷದಲ್ಲಿ 3ನೇ ಸ್ಥಾನದಲ್ಲಿದೆ. ಒಂದು ಟ್ರಿಲಿಯನ್ ಡಾಲರ್ ಗುರಿ ತಲುಪಲು ಮುಂದಿನ 10 ವರ್ಷದಲ್ಲಿ ಭಾರತಕ್ಕಿಂತ ವೇಗವಾಗಿ ಮುನ್ನಡೆಯಬೇಕು. ಸಾಮಾನ್ಯ ಆರ್ಥಿಕ ಚಟುವಟಿಕೆಯಿಂದ ಇದು ಸಾಧ್ಯವಿಲ್ಲ. ವೇಗವಾಗಿ ಬೆಳೆಯಲು ಮತ್ತು ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಲು ಆರ್ಥಿಕ ಉಪಕ್ರಮಗಳನ್ನು ಬೆಳೆಸಲು ಪ್ರಗತಿಪರ ನೀತಿಗಳು ಮತ್ತು ಹೂಡಿಕೆಯ ಹೆಚ್ಚಳದ ಅವಶ್ಯಕತೆ ಇದೆ ಎಂದು ಹೇಳಲಾಗಿದೆ.