ಆರೆಸ್ಸೆಸ್, ಸಿಎಂ, ಬಿಜೆಪಿ ಹೆಸರೆತ್ತದೆ ಸಿದ್ದು ಮಾತಾಡಲಿ: ಬೊಮ್ಮಾಯಿ ತಿರುಗೇಟು
‘ನಾವು ಮಾತನಾಡುವಾಗ ಸಿದ್ದರಾಮಯ್ಯನವರ ಹೆಸರನ್ನು ತೆಗೆದುಕೊಳ್ಳದೆ ಭಾಷಣ ಮಾಡಿದ್ದೇವೆ, ಅವರ ಹೆಸರನ್ನು ತೆಗೆದುಕೊಂಡೂ ಮಾತನಾಡಿದ್ದೇವೆ. ಯಾವಾಗ, ಯಾರ ಹೆಸರನ್ನು ತೆಗೆದುಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ಅಷ್ಟಕ್ಕೂ, ಸಿದ್ದರಾಮಯ್ಯನವರು ಆರ್‌ಎಸ್‌ಎಸ್, ಬೊಮ್ಮಾಯಿ, ಬಿಜೆಪಿ ಹೆಸರುಗಳನ್ನು ತೆಗೆದುಕೊಳ್ಳದೆ ಭಾಷಣ ಮಾಡಲಿ ನೋಡೋಣ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಬೀದರ್ (ಅ.19): ‘ನಾವು ಮಾತನಾಡುವಾಗ ಸಿದ್ದರಾಮಯ್ಯನವರ ಹೆಸರನ್ನು ತೆಗೆದುಕೊಳ್ಳದೆ ಭಾಷಣ ಮಾಡಿದ್ದೇವೆ, ಅವರ ಹೆಸರನ್ನು ತೆಗೆದುಕೊಂಡೂ ಮಾತನಾಡಿದ್ದೇವೆ. ಯಾವಾಗ, ಯಾರ ಹೆಸರನ್ನು ತೆಗೆದುಕೊಳ್ಳಬೇಕು ಎಂಬುದು ನಮಗೆ ಗೊತ್ತಿದೆ. ಅಷ್ಟಕ್ಕೂ, ಸಿದ್ದರಾಮಯ್ಯನವರು ಆರ್‌ಎಸ್‌ಎಸ್, ಬೊಮ್ಮಾಯಿ, ಬಿಜೆಪಿ ಹೆಸರುಗಳನ್ನು ತೆಗೆದುಕೊಳ್ಳದೆ ಭಾಷಣ ಮಾಡಲಿ ನೋಡೋಣ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಔರಾದ್ ತಾಲೂಕಿನ ಬಲ್ಲೂರ್ ಜೆ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಬಿಜೆಪಿಯವರಿಗೆ ನನ್ನನ್ನು ಕಂಡರೆ ಭಯ. ಯಾವಾಗಲೂ ನನ್ನ ಬಗ್ಗೆಯೇ ಮಾತನಾಡುತ್ತಾರೆ’ ಎನ್ನುವ ಸಿದ್ದರಾಮಯ್ಯನವರ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಆರ್‌ಎಸ್‌ಎಸ್, ಬೊಮ್ಮಾಯಿ, ಬಿಜೆಪಿ ಹೆಸರುಗಳನ್ನು ತೆಗೆದುಕೊಳ್ಳದೆ ಭಾಷಣ ಮಾಡಲಿ ನೋಡೋಣ ಎಂದು ಸವಾಲೆಸೆದರು. ಸಂಕಲ್ಪ ಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಜನರ ಉತ್ಸಾಹ ನೋಡಿದಾಗ, ಇದು ಜನ ಸಂಕಲ್ಪ ಯಾತ್ರೆ ಅಷ್ಟೇ ಅಲ್ಲ, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಎನಿಸುತ್ತಿದೆ ಎಂದರು.
ಸಿದ್ದು ಅವಧಿಯಲ್ಲಿ ನಡೆದ ಭ್ರಷ್ಟಾಚಾರ ದೇಶದಲ್ಲೆಲ್ಲೂ ನಡೆದಿಲ್ಲ: ಸಿಎಂ ಬೊಮ್ಮಾಯಿ
ರೈತರ, ದಲಿತರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹೆಚ್ಚಳ: ಬಳಿಕ, ಹುಮನಾಬಾದ್‌ನಲ್ಲಿ ನಡೆದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ನಾಲ್ಕು ತಿಂಗಳಲ್ಲಿ ರೈತರ ಹಾಗೂ ಅವರ ಮಕ್ಕಳ ಅಭಿವೃದ್ಧಿಗೆ ವಿದ್ಯಾಶ್ರೀ ವಿದ್ಯಾರ್ಥಿ ವೇತನ ನೀಡಿದ್ದೇವೆ. ದೀನ ದಲಿತರ ವಿದ್ಯಾರ್ಥಿ ವೇತನ ಹೆಚ್ಚಳ ಮಾಡಿದ್ದೇವೆ. 6 ಲಕ್ಷ ಕೂಲಿ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿದ್ದೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂತನವಾಗಿ 1,200 ಅಂಗನವಾಡಿಗಳನ್ನು ತೆರೆಯಲು ಅನುಮೋದನೆ ನೀಡಿದ್ದೇವೆ.
ಆದರೆ, ಕಾಂಗ್ರೆಸ್ ದೀನ ದಲಿತರನ್ನು ಸರಾಗವಾಗಿ ಮತ ಹಾಕುವ ಯಂತ್ರದಂತೆ ಮಾಡಿಕೊಂಡಿದೆ. ಬಡಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಕೆಲಸವನ್ನು ಅದು ಮಾಡಿಲ್ಲ. ಪುಸ್ತಕದಲ್ಲಿ ಮಾತ್ರ ಹಣ ಇಡುವ ಕೆಲಸ ಮಾಡಿ, ಕಲ್ಯಾಣ ಕರ್ನಾಟಕದ ಜನರಿಗೆ ಮೋಸ ಮಾಡಿದೆ ಎಂದು ಆರೋಪಿಸಿದರು. ಸಿದ್ದು ಆಡಳಿತಾವಧಿಯಲ್ಲಿ ಪ್ರಕೃತಿ ವಿಕೋಪಗಳಿಗೆ ಪರಿಹಾರ ಸಿಗಬೇಕಾದ್ರೆ ಒಂದೆರಡು ವರ್ಷ ಆಗುತ್ತಿತ್ತು. ಈಗ ನಾವು ಒಂದು ತಿಂಗಳಲ್ಲೇ ಪರಿಹಾರ ಕೊಡ್ತಿದ್ದೇವೆ ಎಂದು ಹೇಳಿದರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಪ್ರಭಾಕರ ಕೋರೆ: ಸಿಎಂ ಬೊಮ್ಮಾಯಿ
ಪ್ರಭು ಚವ್ಹಾಣ್ ಕುರಿತು ಸಿಎಂ ಮೆಚ್ಚುಗೆ: ಪ್ರಭು ಚವ್ಹಾಣ್ ಉಡ ಇದ್ದಂಗ, ಹಿಡಿದರೆ ಬಿಡೋದೆ ಇಲ್ಲ. ಇಂದು ಇಲ್ಲಿ ಸೇರಿರುವ ಜನರ ಸಂಖ್ಯೆ, ಅವರ ಉತ್ಸಾಹ ನೋಡಿದರೆ ಔರಾದ್ ಕ್ಷೇತ್ರದಲ್ಲಿ ಪ್ರಭು ಚವ್ಹಾಣ್ ಅವರು ನೂರಕ್ಕೆ ನೂರು ಪ್ರತಿಶತ ಗೆಲುವು ಸಾಧಿಸುತ್ತಾರೆ. ಕಳೆದ ಬಾರಿಗಿಂತ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುತ್ತಾರೆ. ಅವರದು ದೊಡ್ಡ ಗುಣ. ಚವ್ಹಾಣ್, ದೊಡ್ಡವರ ಜೊತೆ ದೊಡ್ಡವರಂತೆ, ಸಣ್ಣವರ ಜೊತೆ ಸಣ್ಣವರಂತೆ ಇದ್ದು ಕೆಲಸ ಮಾಡುತ್ತಾರೆ ಎಂದು ಸಚಿವ ಪ್ರಭು ಚವ್ಹಾಣ್ ಅವರ ಗುಣಗಾನ ಮಾಡಿದರು.