ಸಂಪತ್‌ ತರೀಕೆರೆ

 

ಬೆಂಗಳೂರು(ಜ.10): ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟವು (ಬಮೂಲ್‌) ಸಂಕ್ರಾಂತಿ ಬಳಿಕ ಪ್ರತಿ ಲೀಟರ್‌ ಹಾಲಿಗೆ .1 ಪ್ರೋತ್ಸಾಹ ಧನ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ಬಮೂಲ್‌ ಮೂಲಗಳು ಮಾಹಿತಿ ನೀಡಿವೆ.

ಪ್ರಸ್ತುತ ಒಕ್ಕೂಟ ಪ್ರತಿ ಲೀಟರ್‌ ಹಾಲಿಗೆ .25.30 ನೀಡುತ್ತಿದೆ. ಅದರಲ್ಲಿ .24 ಹಾಲು ಉತ್ಪಾದಕರಿಗೆ ಮತ್ತು .1.30 ಸೊಸೈಟಿಗೆ ಸಿಗುತ್ತಿದೆ. ಬಮೂಲ್‌ ಸಂಕ್ರಾಂತಿ ಬಳಿಕ .1 ಹೆಚ್ಚಿಸಿದರೆ, ಪ್ರತಿ ಲೀಟರ್‌ ಹಾಲಿಗೆ .26.40 ಸಿಗಲಿದೆ. ಬೆಂಗಳೂರು ಡೈರಿ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ 12 ತಾಲೂಕುಗಳ 1.20 ಲಕ್ಷಕ್ಕಿಂತ ಅಧಿಕ ಹಾಲು ಉತ್ಪಾದಕರು ಇದರ ಲಾಭ ಪಡೆಯಲಿದ್ದಾರೆ. ಒಂದು ರು. ಪ್ರೋತ್ಸಾಹ ದನ ಹೆಚ್ಚಳದಿಂದ ಸಂಸ್ಥೆಗೆ ತಿಂಗಳಿಗೆ .4.95 ಕೋಟಿ ಹೊರೆ ಬೀಳಲಿದೆ.

ಬೊಮ್ಮನಹಳ್ಳಿ ವಲಯದಲ್ಲಿ 16ರಿಂದ ವ್ಯಾಕ್ಸಿನೇಷನ್‌ ಶುರು

ಹಾಲಿ ಉತ್ಪಾದನೆ ಹೆಚ್ಚಳ ಮತ್ತು ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹಾಲು ಮಾರಾಟದಲ್ಲಿ ಕುಸಿತದಿಂದಾಗಿ ಕಳೆದ ಜೂನ್‌ನಲ್ಲಿ ಹಾಲು ಖರೀದಿ ದರನ್ನು .1 ಇಳಿಸಲಾಗಿತ್ತು. ಇದೀಗ ಪರಿಸ್ಥಿತಿ ಸುಧಾರಿಸಿದೆ. ಅಂದು ಪ್ರತಿ ದಿನ 17ರಿಂದ 18 ಲಕ್ಷ ಲೀಟರ್‌ ಸಂಗ್ರಹವಾಗುತ್ತಿದ್ದ ಹಾಲು ಈಗ 16ರಿಂದ 16.50 ಲಕ್ಷ ಲೀಟರ್‌ ಮಾತ್ರ ಸಂಗ್ರಹವಾಗುತ್ತಿದೆ.

ಬಮೂಲ್‌ಗೆ ನೀಡುವ ಪ್ರತಿ ಲೀಟರ್‌ ಹಾಲಿನಲ್ಲಿ ಕನಿಷ್ಠ ಶೇ.3.5ರಷ್ಟುಕೊಬ್ಬಿನಾಂಶ ಇರಬೇಕು. ಆ ನಂತರದಲ್ಲಿ 0.1ರಷ್ಟುಕೊಬ್ಬಿನ ಅಂಶ ಇರುವ ಪ್ರತಿ ಲೀಟರ್‌ ಹಾಲಿಗೆ ಹೆಚ್ಚುವರಿಯಾಗಿ 30 ಪೈಸೆ ನೀಡಲಾಗುತ್ತಿದೆ. 0.7ರಷ್ಟುಕೊಬ್ಬಿನ ಅಂಶಕ್ಕೆ .2.10 ಹಾಲು ಉತ್ಪಾದಕರಿಗೆ ಕೊಡಲಾಗುತ್ತದೆ. ಪ್ರಸ್ತುತ ಬಮೂಲ್‌ ಹಾಲಿನ ಗುಣಮಟ್ಟ4.2 ಕೊಬ್ಬಿನಾಂಶ ಮತ್ತು 8.5 ಎಸ್‌ಎನ್‌ಎಫ್‌(ಸಾಲಿಡ್‌ ನಾಟ್‌ ಫ್ಯಾಟ್‌) ಇದೆ ಎಂದು ಬಮೂಲ್‌ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಸಂಪುಟ ಕಸರತ್ತು, ಸಿಎಂ ಪಟ್ಟಿಯಲ್ಲಿದೆ ಈ ಸಚಿವಾಕಾಂಕ್ಷಿಗಳ ಹೆಸರು, ಇಲ್ಲಿದೆ ಟ್ವಿಸ್ಟ್!

ಇತ್ತೀಚಿನ ದಿನಗಳಲ್ಲಿ ಬಮೂಲ್‌ ಪ್ರತಿ ದಿನ ಸರಾಸರಿ 16.50 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, ಹಾಲು ಮತ್ತು ಮೊಸರಿಗೆ 9.50 ಲಕ್ಷ ಲೀಟರ್‌ ಬಳಕೆ ಮಾಡಲಾಗುತ್ತಿದೆ. 2 ಲಕ್ಷ ಲೀಟರ್‌ ಹಾಲನ್ನು ಚೀಸ್‌ ಉತ್ಪಾದನೆಗೆ ಮತ್ತು ಉಳಿದ 5 ಲಕ್ಷ ಲೀಟರ್‌ನಲ್ಲಿ ಕನಕಪುರದ ಮೆಗಾ ಡೈರಿಯಲ್ಲಿ 3.50 ಲಕ್ಷ ಲೀಟರ್‌ ಮತ್ತು ರಾಮನಗರದ ಘಟಕದಲ್ಲಿ 1.50 ಲಕ್ಷ ಲೀಟರ್‌ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತಿಸಲಾಗುತ್ತಿದೆ.

ಸಾವಿರ ಟನ್‌ ಹಾಲಿನ ಪುಡಿ ಮಾರಾಟ

ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ಹಾಲಿನ ಪುಡಿಗೆ .215ರಿಂದ 220 ಇದ್ದು, ತಿಂಗಳಿಗೆ ಸರಾಸರಿ ಸಾವಿರ ಟನ್‌ ಹಾಲಿನ ಪುಡಿ ಮಾರಾಟವಾಗುತ್ತಿದೆ. ನಂದಿನಿ ಬೆಣ್ಣೆಗೆ .290 ಇದ್ದು, ಮಾರಾಟ ಉತ್ತಮವಾಗಿದೆ. ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕುಸಿದಿದ್ದ ಹಾಲು, ಬೆಣ್ಣೆ, ತುಪ್ಪ ಸೇರಿದಂತೆ ಇತರೆ ನಂದಿನಿ ಉತ್ಪನ್ನಗಳ ಮಾರಾಟದಲ್ಲಿ ಚೇತರಿಕೆ ಕಾಣುತ್ತಿದೆ. ಹೊಸ ವರ್ಷದಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದ ಪರಿಸ್ಥಿತಿ ಸುಧಾರಿಸಲಿದ್ದು, ಬಮೂಲ್‌ ಆರ್ಥಿಕವಾಗಿ ಚೇತರಿಸಿಕೊಳ್ಳಲಿದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ಭರವಸೆ ವ್ಯಕ್ತಪಡಿಸಿದ್ದಾರೆ.

ಹಾಲು ಉತ್ಪಾದಕರಿಂದ ಸಂಗ್ರಹಿಸುವ ಪ್ರತಿ ಲೀಟರ್‌ ಹಾಲಿಗೆ ಎಷ್ಟುದರವನ್ನು ಹೆಚ್ಚಿಗೆ ಮಾಡಬೇಕೆಂದು ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಕಾರ್ಯಕಾರಿ ಮಂಡಳಿಯೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಸಂಕ್ರಾಂತಿ ಬಳಿಕ ಕಾರ್ಯಕಾರಿ ಮಂಡಳಿ ಸಭೆ ನಡೆಯಲಿದ್ದು, ಈ ಕುರಿತು ಚರ್ಚೆ ನಡೆಸಲಾಗುತ್ತದೆ ಎಂದು ಬಮೂಲ್‌ ಅಧ್ಯಕ್ಷ  ನರಸಿಂಹಮೂರ್ತಿ ಹೇಳಿದ್ದಾರೆ.