ಕಾವೇರಿಗಾಗಿ ಮೋದಿಗೆ ಕರವೇ 1 ಲಕ್ಷ ರಕ್ತ ಪತ್ರ..!
ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಹೋರಾಟದ ಸ್ವರೂಪ ಬದಲಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಜೊತೆಗೆ ಅ.10ರಂದು ದೆಹಲಿಯ ಜಂತರ್‌ಮಂತರ್ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ: ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ
ಬೆಂಗಳೂರು(ಸೆ.29): ಕಾವೇರಿ ನದಿ ನೀರು ಹಂಚಿಕೆಯಲ್ಲಿನ ಸಮಸ್ಯೆ ಇತ್ಯರ್ಥ ಸಂಬಂಧ ಕೇಂದ್ರ ಸರ್ಕಾರದ ಗಮನ ಸೆಳೆಯಲು ಕರ್ನಾಟಕ ರಕ್ಷಣಾ ವೇದಿಕೆಯ (ನಾರಾಯಣ ಗೌಡ ಬಣ) ಒಂದು ಲಕ್ಷ ಕಾರ್ಯಕರ್ತರು ಭಾನುವಾರ (ಅ.1) ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆದು ರವಾನಿಸಲು ಹಾಗೂ ಅಕ್ಟೋಬರ್ 10ರಂದು ದೆಹಲಿ ಚಲೋ ನಡೆಸಲು ನಿರ್ಧರಿಸಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ, ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಹೋರಾಟದ ಸ್ವರೂಪ ಬದಲಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಜೊತೆಗೆ ಅ.10ರಂದು ದೆಹಲಿಯ ಜಂತರ್‌ಮಂತರ್ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದರು.
ಕಾವೇರಿ ಉಗಮ ಸ್ಥಾನ ಕೊಡಗಿನಲ್ಲೇ ಇಂದು ಬಂದ್ ಇಲ್ಲ..!
ಪ್ರತಿಭಟನೆ ವೇಳೆ ಕಾವೇರಿ, ಮಹದಾಯಿ ನೀರಾವರಿ ಯೋಜನೆ, ಬೆಳಗಾವಿ ಗಡಿ ವಿಚಾರದಲ್ಲಿ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು. ಅಲ್ಲದೆ, ದೆಹಲಿ ಚಲೋ ಸಂದರ್ಭದಲ್ಲಿ ಪ್ರಧಾನಿಗಳ ಭೇಟಿಗೆ ಅವಕಾಶ ಕೊಡಿಸುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಕೋರಲಾಗಿದೆ. ಅವರು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ. ಒಂದು ವೇಳೆ ಪ್ರಧಾನಿಗಳ ಭೇಟಿಗೆ ಅವಕಾಶ ಸಿಕ್ಕರೆ, ಕಾವೇರಿಯ ಸದ್ಯದ ಪರಿಸ್ಥಿತಿ, ರೈತರ ಸಂಕಷ್ಟ ಸೇರಿದಂತೆ ರಾಜ್ಯದ ಇತರ ಸಮಸ್ಯೆ ಬಗ್ಗೆಯೂ ವಿವರಿಸುತ್ತೇವೆ ಎಂದರು.
ರಾಜ್ಯದ ಸಂಸದರು ರಾಜ್ಯದ ಪರಿಸ್ಥಿತಿ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡದೆ ನಿರಾಸಕ್ತಿ ಹೊಂದಿದ್ದಾರೆ. ತಮಿಳುನಾಡು ಸಂಸದರು ಅವರ ರಾಜ್ಯಕ್ಕೆ ಸಂಕಷ್ಟ ಎದುರಾದಾಗ ರಾಜಕೀಯ ಬದಿಗಿಟ್ಟು ಎಲ್ಲರೂ ಒಟ್ಟಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತಾರೆ. ಆದರೆ, ರಾಜ್ಯದ ಸಂಸದರು ಈವರೆಗೆ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ, ಸಮಸ್ಯೆ ಬಗ್ಗೆ ಮಾತನಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ಹೋರಾಟಕ್ಕಿಂದು ಕನ್ನಡ ಚಿತ್ರರಂಗ: ಶಿವಣ್ಣ, ಶ್ರೀಮುರಳಿ, ಧ್ರುವ ಸರ್ಜಾ ಭಾಗಿ
ಈ ಹಿಂದೆ ಕೇಂದ್ರ ಸಚಿವರಾಗಿದ್ದ ಅಂಬರೀಶ್ ಅವರು ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾದಾಗ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂತಹ ಗಟ್ಟಿತನ ಈಗಿನ ಸಂಸದರು, ಕೇಂದ್ರ ಸಚಿವರಿಗಿಲ್ಲದಂತಾಗಿದೆ. ಅನಂತಕುಮಾರ್ ಅವರು ಇದ್ದಾಗ ದೆಹಲಿ ಮತ್ತು ರಾಜ್ಯದ ನಡುವೆ ಕೊಂಡಿಯಾಗಿ ಕೆಲಸ ಮಾಡಿದ್ದರು. ಪಕ್ಷಭೇದ ಮರೆತು ರಾಜ್ಯದ ಹಿತಾಸಕ್ತಿಗೆ ಕೆಲಸ ಮಾಡಿದ್ದರು. ಆದರೆ, ಈಗ ಅಂತಹವರಿಲ್ಲ. ಹೀಗಾಗಿ ರಾಜ್ಯಕ್ಕೆ ಅನ್ಯಾಯವಾದಾಗ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತಿಲ್ಲ ಎಂದರು.
ಹೋರಾಟ ತೀವ್ರಗೊಳಿಸಲು ಕರವೇ ನಿರ್ಧಾರ
ಕಾವೇರಿ ವಿಚಾರವಾಗಿ ಕೇಂದ್ರ ಸರ್ಕಾರದ ಗಮನ ಸೆಳೆಯಲು ಹೋರಾಟದ ಸ್ವರೂಪ ಬದಲಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರಿಗೆ ರಕ್ತದಲ್ಲಿ ಪತ್ರ ಬರೆಯುವ ಜೊತೆಗೆ ಅ.10ರಂದು ದೆಹಲಿಯ ಜಂತರ್‌ಮಂತರ್ ಮೈದಾನದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ತಿಳಿಸಿದ್ದಾರೆ.