ಸರ್ಕಾರದ ಡಿಜಿಟಲ್ ಲೈಬ್ರರಿಗೆ 1 ಕೋಟಿ ಓದುಗರು!
- ‘ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿ’ (ಕೆಡಿಪಿಎಲ್)ಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಬರೋಬ್ಬರಿ ಒಂದು ಕೋಟಿಗೂ ಅಧಿಕ ಓದುಗರು ನೋಂದಣಿ
- ಆನ್‌ಲೈನ್‌ನಲ್ಲಿ ಲಭ್ಯವಿರುವ ಒಟ್ಟು 18 ಲಕ್ಷಕ್ಕೂ ಅಧಿಕ ಇ-ಕಂಟೆಂಟ್‌ಗಳನ್ನು ಓದುಗರು ಉಪಯೋಗಿಸಿದ್ದಾರೆ.
ಬೆಂಗಳೂರು (ಆ.15): ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ‘ಕರ್ನಾಟಕ ಡಿಜಿಟಲ್ ಪಬ್ಲಿಕ್ ಲೈಬ್ರರಿ’ (ಕೆಡಿಪಿಎಲ್)ಗೆ ಅತ್ಯಂತ ಕಡಿಮೆ ಅವಧಿಯಲ್ಲಿ ಬರೋಬ್ಬರಿ ಒಂದು ಕೋಟಿಗೂ ಅಧಿಕ ಓದುಗರು ನೋಂದಣಿಯಾಗಿದ್ದಾರೆ. ಆನ್‌ಲೈನ್‌ನಲ್ಲಿ ಲಭ್ಯವಿರುವ ಒಟ್ಟು 18 ಲಕ್ಷಕ್ಕೂ ಅಧಿಕ ಇ-ಕಂಟೆಂಟ್‌ಗಳನ್ನು ಓದುಗರು ಉಪಯೋಗಿಸಿದ್ದಾರೆ.
2020ರ ಫೆಬ್ರವರಿಯಲ್ಲಿ ಇಲಾಖೆ ಆರಂಭಿಸಿದ ಈ ಡಿಜಿಟಲ್ ಗ್ರಂಥಾಲಯ ಸೌಲಭ್ಯಕ್ಕೆ ಸಾಹಿತ್ಯಪ್ರೇಮಿಗಳು, ವಿದ್ಯಾರ್ಥಿಗಳಿಂದ ವ್ಯಾಪಕ ಸ್ಪಂದನೆ ದೊರೆತಿದೆ. ಈ ಡಿಜಿಟಲ್ ಗ್ರಂಥಾಲಯ ಜಾರಿಗೆ ಬಂದು ಈವರೆಗಿನ ಒಟ್ಟು 17 ತಿಂಗಳಲ್ಲಿ ಒಟ್ಟು 1,00,25,924 ಮಂದಿ ನೋಂದಣಿಯಾಗಿದ್ದಾರೆ. ಇ-ಬುಕ್ಸ್, ವಿಡಿಯೋ ಮತ್ತು ಲಿಂಕ್ಸ್ ಸೇರಿದಂತೆ ಹೊಸದಾಗಿ ಅಳವಡಿಸಿದ 18,75,592 ಇ-ಕಂಟೆಂಟ್ ಓದುಗರು ಉಪಯೋಗಿಸಿದ್ದಾರೆ.
ನಗರ (26), ತಾಲೂಕು (216) ಹಾಗೂ ಜಿಲ್ಲೆಗಳು (30) ಸೇರಿದಂತೆ ಒಟ್ಟು ರಾಜ್ಯದಲ್ಲಿರುವ 272 ಗ್ರಂಥಾಲಯಗಳಲ್ಲಿ ಓದುಗರಿಗೆ ಈ ಡಿಜಿಟಲ್ ಆವೃತ್ತಿ ಲಭ್ಯವಿದೆ. ಇದರ ಲಾಭ ಪಡೆದುಕೊಳ್ಳಲು ನೋಂದಣಿಯಾದವರ ಪೈಕಿ ಕಲಬುರಗಿ ಜಿಲ್ಲೆಯು (16.68 ಲಕ್ಷ) ಪ್ರಥಮ ಸ್ಥಾನದಲ್ಲಿದ್ದರೆ, ದಕ್ಷಿಣ ಕನ್ನಡ ದ್ವಿತೀಯ (16.61 ಲಕ್ಷ) ಸ್ಥಾನದಲ್ಲಿದೆ. ಬೆಂಗಳೂರು ನಗರ (16.15 ಲಕ್ಷ) ಹಾಗೂ ಹಾಸನ ಜಿಲ್ಲೆಗಳು (10.38 ಲಕ್ಷ) ನಂತರದ ಕ್ರಮವಾದ ಸ್ಥಾನದಲ್ಲಿವೆ.
ಸುನೀಲ್ ಕುಮಾರ್ ಪುಸ್ತಕ ಕೋರಿಕೆಗೆ ಭಾರೀ ಸ್ಪಂದನೆ; 600 ಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹ!
ಕೊರೋನಾ ಹಿನ್ನೆಲೆಯಲ್ಲಿ ಲಾಕ್‌ಡೌನ್ ಜಾರಿ ಆದ ಮೇಲೆ ರಾಜ್ಯದ ಎಲ್ಲ ಗ್ರಂಥಾಲಯಗಳು ಬಂದ್ ಆಗಿದ್ದವು. ವಿದ್ಯಾರ್ಥಿಗಳು, ಸ್ಪರ್ಧಾತ್ಮಕ ಪರೀಕ್ಷೆ ಅಭ್ಯರ್ಥಿಗಳು, ಸಾಹಿತ್ಯಾಸಕ್ತರು ಹಾಗೂ ಎಲ್ಲ ಪುಸ್ತಕ ಪ್ರೇಮಿಗಳಿಗೆ ಈ ಡಿಜಿಟಲ್ ಗ್ರಂತಾಲಯ ವರದಾನವಾಗಿ ಪರಿಣಮಿಸಿತು.
ಅನೇಕ ಕಂಟೆಂಟ್/ಇ-ಪುಸ್ತಕಗಳು ಲಭ್ಯ:
ಶೈಕ್ಷಣಿಕ ಪಠ್ಯಕ್ರಮಗಳು, ಐಐಟಿ, ಜೆಇಇ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಯ ಪರಿಕರಗಳು ಮತ್ತು ತಯಾರಿಗೆ ಬೇಕಾದ ಅಂಶಗಳು, ಕಥೆ, ಕಾದಂಬರಿ, ರೂಪಕ, ನಾಟಕ, ಖ್ಯಾತ ಲೇಖಕರ ಕೃತಿಗಳು, ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ಸೇರಿದಂತೆ ಲಕ್ಷಾಂತರ ಹೊತ್ತಿಗೆಗಳನ್ನು ಡಿಜಿಟಲ್ ಆವೃತ್ತಿಯಲ್ಲಿ ಅಳವಡಿಸಲಾಗಿದೆ. ಇತ್ತೀಚೆಗೆ ಹೊಸದಾಗಿ ಅಂತಾರಾಷ್ಟ್ರೀಯ ಶೈಕ್ಷಣಿಕ ವಿಡಿಯೋಗಳು, ಇ-ಜರ್ನಲ್ಸ್, ತಾಂತ್ರಿಕ ಕೋರ್ಸ್‌ನ ಸಾಮಗ್ರಿಗಳು ಹಾಗೂ ಇನ್ನಿತರ ವಿಷಯಗಳ ಲಿಂಕ್‌ಗಳು ಮತ್ತು ವಿಡಿಯೋಗಳನ್ನು ಅಳವಡಿಸಿದೆ.
ಬುಕ್‌ಬ್ಯಾಂಕ್‌ನಲ್ಲಿ 1.40 ಕೋಟಿ ಪಠ್ಯಪುಸ್ತಕ ಸಂಗ್ರಹ..!
ಓದುಗರ ಅನುಕೂಲಕ್ಕಾಗಿ ಇಲಾಖೆಯು ಕನ್ನಡ, ಇಂಗಿಷ್, ಹಿಂದಿ, ಮರಾಠಿ, ತಮಿಳು, ತೆಲುಗು ಸೇರಿದಂತೆ ಒಟ್ಟು ಎಂಟು ಭಾಷೆಗಳಲ್ಲಿ ಪುಸ್ತಕಗಳನ್ನು ಇ-ಆವೃತ್ತಿಗೆ ಅಳವಡಿಸಿದೆ. ಆಸಕ್ತರು ಇನ್ನು ಹೆಚ್ಚೆಚ್ಚು ನೋಂದಾಯಿಸಿಕೊಳ್ಳಲು https://www.karnatakadigitalpubliclibrary.org ಜಾಲತಾಣಕ್ಕೆ ಬೇಟಿ ನೀಡಬೇಕು. ಇಲ್ಲವೇ ‘ಇ-ಸಾರ್ವಜನಿಕ ಗ್ರಂಥಾಲಯ’ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಓದಬಹುದು.
ಅತ್ಯಂತ ಕಡಿಮೆ ಅವಧಿಯಲ್ಲಿ ಡಿಜಿಟಲ್ ಗ್ರಂಥಾಲಯಕ್ಕೆ 1 ಕೋಟಿಗೂ ಅಧಿಕ ಜನ ಕೆಡಿಪಿಎಲ್ ಜಾಲತಾಣ ಹಾಗೂ ಆ್ಯಪ್ ಮೂಲಕ ನೋಂದಣಿ ಆಗಿದ್ದಾರೆ. ಓದಗರಿಗೆಂದೇ ಮತ್ತಷ್ಟು ಪುಸ್ತಕ, ಇ-ಕಂಟೆಂಟ್‌ಗಳನ್ನು ಡಿಜಿಟಲ್ ಆವೃತ್ತಿಗೆ ಸೇರಿಸಲಾಗಿದೆ. ಹೆಚ್ಚೆಚ್ಚು ಪುಸ್ತಕ ಪ್ರೇಮಿಗಳು ನೋಂದಾಯಿಸಿಕೊಳ್ಳುವ ಮೂಲಕ ಇಲಾಖೆಯ ಸೌಲಭ್ಯ ಸದುಪಯೋಗ ಪಡೆದುಕೊಳ್ಳಬೇಕು.
- ಡಾ.ಸತೀಶ್‌ಕುಮಾರ್ ಹೊಸಮನಿ, ನಿರ್ದೇಶಕ, ರಾಜ್ಯ ಸಾರ್ವಜನಿಕ ಗ್ರಂಥಾಲಯ ಇಲಾಖೆ