* 3ನೇ ಅಲೆಯಲ್ಲಿ ರಾಜ್ಯದ 1-1.5 ಲಕ್ಷ ಮಕ್ಕಳಿಗೆ ಸೋಂಕು!* 5 ಸಾವಿರ ಮಕ್ಕಳ ಐಸಿಯು, ವೆಂಟಿಲೇಟರ್‌ ಬೆಡ್‌ ಸಿದ್ಧಪಡಿಸಿ* ರಾಜ್ಯ ಸರ್ಕಾರಕ್ಕೆ ಡಾ| ದೇವಿಶೆಟ್ಟಿ ಸಮಿತಿ ಪ್ರಾಥಮಿಕ ವರದಿ

ಶ್ರೀಕಾಂತ್‌.ಎನ್‌.ಗೌಡಸಂದ್ರ

ಬೆಂಗಳೂರು(ಜೂ.20): ರಾಜ್ಯದಲ್ಲಿ ಕೊರೋನಾ ಮೂರನೇ ಅಲೆ ದಾಗುಂಡಿಯಿಟ್ಟರೆ ಸುಮಾರು ಒಂದರಿಂದ ಒಂದೂವರೆ ಲಕ್ಷ ಮಕ್ಕಳಿಗೆ ಸೋಂಕು ತಗಲುವ ಸಾಧ್ಯತೆಯಿದೆ. ಹೀಗಾಗಿ ಕನಿಷ್ಠ 5 ಸಾವಿರ ಹೆಚ್ಚುವರಿ ಐಸಿಯು- ವೆಂಟಿಲೇಟರ್‌ ಸಿದ್ಧಪಡಿಸಿಕೊಳ್ಳಬೇಕು.

ಹೀಗಂತ ಡಾ.ದೇವಿಪ್ರಸಾದ್‌ ಶೆಟ್ಟಿ ನೇತೃತ್ವದ ಉನ್ನತ ಮಟ್ಟದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಸಿದೆ.

"

ಕೇಂದ್ರದ ಮನವಿಗೆ ಸುಪ್ರೀಂ ಅಸ್ತು, ಆಕ್ಸಿಜನ್ ಪೂರೈಕೆಗಾಗಿ ಟಾಸ್ಕ್​ಫೋರ್ಸ್ ರಚನೆ

ಕೊರೋನಾ ಮೂರನೇ ಅಲೆಗೆ ರಾಜ್ಯ ಸರ್ಕಾರ ಮಾಡಿಕೊಳ್ಳಬೇಕಿರುವ ಮೂಲಸೌಕರ್ಯ, ಮಾನವ ಸಂಪನ್ಮೂಲದ ಸಿದ್ಧತೆ ಹಾಗೂ ಲಸಿಕೆ ಅಭಿಯಾನದಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಶನಿವಾರ ರಾಜ್ಯ ಸರ್ಕಾರಕ್ಕೆ ಪ್ರಥಮಿಕ ವರದಿ ಸಲ್ಲಿಸಿದ್ದು, ಇದರಲ್ಲಿ ಈ ಮುನ್ನೆಚ್ಚರಿಕೆ ನೀಡಿದೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಮೂರನೇ ಅಲೆ ಆರಂಭವಾದ ನಂತರದ ಪರಿಸ್ಥಿತಿ ಬಗ್ಗೆ ಎರಡು ರೀತಿಯ ಸಾಧ್ಯತೆಗಳನ್ನು ಸಮಿತಿ ಅಂದಾಜಿಸಿದೆ.

1- ಅತಿ ಕೆಟ್ಟಪರಿಸ್ಥಿತಿ ಎದುರಾದರೆ ರಾಜ್ಯದಲ್ಲಿ 1.5 ಲಕ್ಷದಷ್ಟುಮಕ್ಕಳಿಗೆ ಸೋಂಕು ಉಂಟಾಗಬಹುದು. ಆಗ 50ರಿಂದ 60 ಸಾವಿರ ಮಕ್ಕಳಲ್ಲಿ ಗಂಭೀರ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಈ ಪೈಕಿ 5 ಸಾವಿರ ಮಕ್ಕಳಿಗೆ ತೀವ್ರ ನಿಗಾ ಘಟಕದ ಚಿಕಿತ್ಸೆ ಬೇಕಾಗುತ್ತದೆ. ನಿತ್ಯ 500 ಮಂದಿ ಮಕ್ಕಳಿಗೆ ಐಸಿಯು ದಾಖಲಾತಿ ಬೇಕಾಗುತ್ತದೆ.

2- ಇದ್ದುದರಲ್ಲೇ ಉತ್ತಮ ಪರಿಸ್ಥಿತಿ ಎದುರಾದರೆ ರಾಜ್ಯದಲ್ಲಿ ಒಂದು ಲಕ್ಷ ಮಕ್ಕಳು ಸೋಂಕಿತರಾಗಬಹುದು. ಆಗ 20ರಿಂದ 30 ಸಾವಿರ ಮಕ್ಕಳಿಗೆ ಗಂಭೀರ ಲಕ್ಷಣ ಕಾಣಿಸಬಹುದು. ಮೂರು ಸಾವಿರ ಮಂದಿಗೆ ತೀವ್ರ ನಿಗಾ ಘಟಕದ ಚಿಕಿತ್ಸೆ ಬೇಕಾಗಬಹುದು. 300ರಿಂದ 500 ಮಂದಿ ಮಕ್ಕಳಿಗೆ ಐಸಿಯು ದಾಖಲಾತಿ ಬೇಕಾಗಬಹುದು.

ಮುಂದೆ ಡಾಕ್ಟರ್‌, ನರ್ಸ್‌ ತೀವ್ರ ಕೊರತೆ : ಈಗಲೇ ಸಿದ್ಧರಾಗಿ ಎಂದು ಡಾ.ದೇವಿಶೆಟ್ಟಿ ಎಚ್ಚರಿಕೆ

ಈ ಯಾವ ಪರಿಸ್ಥಿತಿ ಎದುರಾದರೂ ರಾಜ್ಯ ಸರ್ವಸನ್ನದ್ಧವಾಗಿರಬೇಕು ಎಂದರೆ, 5 ಸಾವಿರ ಹೆಚ್ಚುವರಿ ಪೀಡಿಯಾಟ್ರಿಕ್‌ ಐಸಿಯು ಹಾಗೂ ವೆಂಟಿಲೇಟರ್‌ ಸಿದ್ಧಪಡಿಸಿಕೊಳ್ಳಬೇಕು. ಸಾಮಾನ್ಯ ಐಸಿಯು ಅಥವಾ ವೆಂಟಿಲೇಟರ್‌ಗಳನ್ನಾದರೂ ಸ್ಥಾಪಿಸಿ ಮಕ್ಕಳಿಗೆ ಹೊಂದಾಣಿಕೆಯಾಗುವಂತೆ ಬದಲಿಸಿಕೊಳ್ಳಬೇಕು. ಅಲ್ಲದೆ, ಇವುಗಳ ನಿರ್ವಹಣೆಗೆ ತಜ್ಞ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯ ಅಗತ್ಯ ಬೀಳಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಎರಡನೇ ಅಲೆ ವೇಳೆಗೆ ವಯಸ್ಕರಲ್ಲಿ ಕೊರೋನಾ ಸೋಂಕು ಉಂಟಾದರೆ ಅಗತ್ಯವಿರುವ ಬೆಡ್‌, ಐಸಿಯು ಸೇರಿದಂತೆ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರ ಜತೆಗೆ ಅಗತ್ಯವಾದ ಔಷಧ ದಾಸ್ತಾನು ಹಾಗೂ ಆಕ್ಸಿಜನ್‌ ಘಟಕಗಳ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

3 ಸಾವಿರ ಮಕ್ಕಳತಜ್ಞರ ನೆರವು:

ರಾಜ್ಯದಲ್ಲಿ ಪ್ರಸ್ತುತ 3 ಸಾವಿರ ಮಕ್ಕಳ ತಜ್ಞ ವೈದ್ಯರು ಸರ್ಕಾರಕ್ಕೆ ನೆರವಾಗಲು ಸಿದ್ಧರಾಗಿದ್ದಾರೆ. ಈ ಬಗ್ಗೆ ಇಂಡಿಯನ್‌ ಪೀಡಿಯಾಟ್ರಿಕ್‌ ಅಸೋಸಿಯೇಷನ್‌ ಜತೆ ಚರ್ಚಿಸಿ, ಮಕ್ಕಳಿಗೆ ಚಿಕಿತ್ಸೆ ನೀಡಲು ಅಗತ್ಯವಿರುವ ಕೌಶಲ್ಯ ಹಾಗೂ ವ್ಯವಸ್ಥೆಗಳ ಸದುಪಯೋಗ ಪಡೆಯಲು ಸರ್ಕಾರ ಮುಂದಾಗಬೇಕು. ಜತೆಗೆ ವೈದ್ಯಕೀಯ ಪದವಿ ಜತೆಗೆ ಇಂಟರ್ನ್‌ಶಿಪ್‌ ಮುಗಿಸಿರುವ 3 ಸಾವಿರ ವೈದ್ಯರ ನೆರವು ಪಡೆಯಬೇಕು. ಹಾಗೆಯೇ ಖಾಸಗಿ ಆಸ್ಪತ್ರೆಗಳ ಸಹಭಾಗಿತ್ವ, ಎನ್‌ಜಿಒಗಳ ನೆರವು ಪಡೆಯಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಅಗತ್ಯ ವೈದ್ಯಕೀಯ ವ್ಯವಸ್ಥೆ ಮಾಡಿಕೊಳ್ಳಲು ಆರ್‌ಬಿಐ ಶೇ.4.8ರ ಬಡ್ಡಿ ದರದಲ್ಲಿ ಸಾಲ ನೀಡಲು ಮುಂದಾಗಿದೆ. ಇದರಡಿ ಆಸ್ಪತ್ರೆಗಳಿಗೆ ಸರ್ಕಾರ ನೆರವು ಕೊಡಿಸಬೇಕು ವರದಿಯಲ್ಲಿ ತಿಳಿಸಲಾಗಿದೆ.

ಮಕ್ಕಳಿಗೆ ಕೋವಿಡ್‌ ಟೆಸ್ಟ್‌ ಮಾದರಿ ಬದಲು

ಆರು ವರ್ಷದ ಮೇಲಿನ ಮಕ್ಕಳಿಗೆ ಕೊರೋನಾ ಪರೀಕ್ಷೆಯ ಮಾದರಿಯನ್ನು ಬದಲಿಸುವಂತೆ ವರದಿಯಲ್ಲಿ ಸೂಚಿಸಲಾಗಿದೆ. ಮೂಗಿಗೆ ಸ್ವಾಬ್‌ ಚುಚ್ಚುವುದರಿಂದ ರಕ್ತಸ್ರಾವ ಆಗಬಹುದು. ಹೀಗಾಗಿ ಐಸಿಎಂಆರ್‌ ನಿಯಮಾವಳಿ ಅಡಿಯಲ್ಲಿಯೇ ಕೇವಲ ಗಂಟಲು ದ್ರವ ಪಡೆದು ಪರೀಕ್ಷೆ ನಡೆಸಬೇಕು. 6 ವರ್ಷದಿಂದ 14 ವರ್ಷದ ಮಕ್ಕಳು ಗಾರ್ಗಲ್‌ ಮಾಡಿದ ನೀರನ್ನು ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಪಡಿಸಬಹುದು ಎಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ.

45 ದಿನದಲ್ಲಿ ಅನುಷ್ಠಾನ

ಡಾ.ದೇವಿಪ್ರಸಾದ್‌ ಶೆಟ್ಟಿನೇತೃತ್ವದ ಸಮಿತಿ 3ನೇ ಅಲೆ ಸಿದ್ಧತೆ ಕುರಿತು ಪ್ರಾಥಮಿಕ ವರದಿ ನೀಡಿದೆ. ಅದನ್ನು ಮುಖ್ಯಮಂತ್ರಿಗಳಿಗೆ ನೀಡಲಾಗುವುದು. ಅಂತಿಮ ವರದಿ ಬಂದ ಬಳಿಕ 45 ದಿನಗಳಲ್ಲಿ ಕಾರ್ಯರೂಪಕ್ಕೆ ತರಲಾಗುವುದು.

- ಡಾ| ಕೆ.ಸುಧಾಕರ್‌, ಆರೋಗ್ಯ ಸಚಿವ

30 ಮಕ್ಕಳ ಮೇಲೆ ಕೋವ್ಯಾಕ್ಸಿನ್‌ ಲಸಿಕೆ ಪ್ರಯೋಗ

ವರದಿಯಲ್ಲೇನಿದೆ?

1. 3ನೇ ಅಲೆ ತೀವ್ರವಾದರೆ 1.5 ಲಕ್ಷ, ಸಾಧಾರಣವಾದರೆ 1 ಲಕ್ಷ ಮಕ್ಕಳಿಗೆ ಸೋಂಕು

2. ಪ್ರತಿನಿತ್ಯ 500 ಹಾಗೂ ಒಟ್ಟಾರೆ 5000 ಮಕ್ಕಳಿಗೆ ಐಸಿಯು ಬೆಡ್‌ ಬೇಕಾಗಬಹುದು

3. ಹೆಚ್ಚುವರಿ 5000 ಪೀಡಿಯಾಟ್ರಿಕ್‌ ಐಸಿಯು, ವೆಂಟಿಲೇಟರ್‌ಗಳನ್ನು ಸಿದ್ಧಪಡಿಸಿಕೊಳ್ಳಿ

4. ಈ ವೈದ್ಯಕೀಯ ಸಲಕರಣೆ ನಿರ್ವಹಣೆಗೆ ತಜ್ಞ ವೈದ್ಯರು, ಸಿಬ್ಬಂದಿ ವ್ಯವಸ್ಥೆ ಮಾಡಿಕೊಳ್ಳಿ

5. 3000ದಷ್ಟು ಮಕ್ಕಳ ವೈದ್ಯರು ಸೇವೆ ನೀಡಲು ಸಿದ್ಧರಿದ್ದಾರೆ, ಅವರ ನೆರವು ಪಡೆದುಕೊಳ್ಳಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona