ಕೊರೋನಾವೈರಸ್‌ ಬಿಕ್ಕಟ್ಟಿನ ನಡುವೆ ಕಗ್ಗಂಟಾಗಿರುವ ಆಕ್ಸಿಜನ್‌ ಪೂರೈಕೆ ಸುಪ್ರೀಂ ಕೋರ್ಟ್ ಮೆಟ್ಟಿಲು ಹತ್ತಿರುವ ಆಕ್ಸಿಜನ್‌ ಪೂರೈಕೆ ವಿಚಾರ ಸುಪ್ರೀಂನಿಂದ 12 ಸದಸ್ಯರ ರಾಷ್ಟ್ರೀಯ ಟಾಸ್ಕ್​ಫೋರ್ಸ್​, ಡಾ. ದೇವಿ ಶೆಟ್ಟಿಗೆ ಸ್ಥಾನ

ನವದೆಹಲಿ, (ಮೇ.08): ದೇಶದ ವಿವಿಧ ರಾಜ್ಯಗಳ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಆಕ್ಸಿಜನ್​ನ ಸಮರ್ಪಕ ಮತ್ತು ತ್ವರಿತ ಪೂರೈಕೆಗಾಗಿ, ಕೇಂದ್ರ ಸರ್ಕಾರದ ಮನವಿ ಮೇರೆಗೆ ಸುಪ್ರೀಂಕೋರ್ಟ್ 12 ಸದಸ್ಯರ ರಾಷ್ಟ್ರೀಯ ಟಾಸ್ಕ್​ಫೋರ್ಸ್​ನ್ನು ರಚಿಸಿದೆ. 

ಕೇಂದ್ರದ ಪರ ವಾದಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ರಾಜ್ಯಗಳಲ್ಲಿನ ವಸ್ತು ಸ್ಥಿತಿ-ಗತಿಗಳನ್ನು ತಿಳಿಯಲು ಒಂದು ತಜ್ಞರ ತಂಡ ರಚಿಸಿ ಎಂದು ಸುಪ್ರೀಂಕೋರ್ಟ್‌ಗೆ ಮನವಿ ಮಾಡಿದ್ದರು. ಇದಕ್ಕೆ ಸುಪ್ರೀಂ ಕೋರ್ಟ್, ಸಾಲಿಸಿಟರ್ ಜನರಲ್ ಮನವಿಯನ್ನು ಪುರಸ್ಕರಿಸಿ ಟಾಸ್ಕ್ ಫೋರ್ಸ್ ರಚಿಸಿದೆ.

ಕೇಂದ್ರ ಸಂಪುಟ ಕಾರ್ಯದರ್ಶಿ ಈ ಟಾಸ್ಕ್​ಫೋರ್ಸ್​ನ ನೇತೃತ್ವ ವಹಿಸಲಿದ್ದು, ಬೆಂಗಳೂರಿನ ಡಾ.ದೇವಿ ಪ್ರಸಾದ್ ಶೆಟ್ಟಿ ಅವರಿಗೂ ಟಾಸ್ಕ್​ಫೋರ್ಸ್​ನಲ್ಲಿ ಸ್ಥಾನ ನೀಡಲಾಗಿದೆ. ದೇಶಾದ್ಯಂತ ಆಕ್ಸಿಜನ್, ಡ್ರಗ್ಸ್‌ ಹಂಚಿಕೆಯ ಉಸ್ತುವಾರಿಯನ್ನು ಈ ಟಾಸ್ಕ್​ಫೋರ್ಸ್ ನಿಭಾಯಿಸಲಿದೆ.

ಭಾರತದಲ್ಲಿ ಆಕ್ಸಿಜನ್ ಎಮರ್ಜೆನ್ಸಿ: ಪ್ರತಿದಿನ ಬೇಕು 8400 ಮೆಟ್ರಿಕ್ ಟನ್ ಆಕ್ಸಿಜನ್

ಪಶ್ಚಿಮ ಬಂಗಾಳದ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿ ಡಾ.ಬವತೋಶ್ ವಿಶ್ವಾಸ್ ಟಾಸ್ಕ್​ಫೋರ್ಸ್​ನ ನೇತೃತ್ವ ವಹಿಸಲಿದ್ದಾರೆ. ಗುರುಗ್ರಾಮದ ಮೇದಾಂತ ಆಸ್ಪತ್ರೆಯ ಎಂ.ಡಿ. ಡಾ.ನರೇಶ್ ತೆಹ್ರಾನ್, ದೆಹಲಿಯ ಸರ್ ಗಂಗಾರಾಂ ಆಸ್ಪತ್ರೆ, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜು, ಮುಂಬೈನ ಫೋರ್ಟಿಸ್ ಆಸ್ಪತ್ರೆಯ ವೈದ್ಯರುಗಳನ್ನು ಸಹ ಟಾಸ್ಕ್​ಫೋರ್ಸ್ ಒಳಗೊಂಡಿದ್ದು, ಶೀಘ್ರದಲ್ಲಿಯೇ ಈ ಟಾಸ್ಕ್​ಫೋರ್ಸ್​ ತನ್ನ ಕೆಲಸ ಆರಂಭಿಸಲಿದೆ.

ಕೇಂದ್ರಕ್ಕೆ ತೀವ್ರ ಮುಖಭಂಗ: ಆಕ್ಸಿಜನ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂ

ಅಗತ್ಯವಿರುವ ಎಲ್ಲ ಸಹಕಾರವನ್ನು ಒದಗಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ದೇಶದ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಆಸ್ಪತ್ರೆಗಳೂ ಟಾಸ್ಕ್​ಫೋರ್ಸ್​ನ ಕೆಲಸ ಕಾರ್ಯಗಳಿಗೆ ಸಹಕಾರ ನೀಡಬೇಕು ಎಂದು ಸುಪ್ರೀಂ ತಿಳಿಸಿದೆ.

ರಾಜ್ಯಗಳ ಅವಶ್ಯಕತೆಗೆ ತಕ್ಕಂತೆ ಆಕ್ಸಿಜನ್​ ಪ್ರಮಾಣ ನಿರ್ಧರಿಸಲು ತಜ್ಞರ ಸಮಿತಿಯನ್ನು, ಹಾಗೂ ಸಮರ್ಪಕ ಮತ್ತು ತ್ವರಿತ ಪೂರೈಕೆಗಾಗಿ ಟಾಸ್ಕ್‌ಫೋರ್ಸ್‌ನ್ನು ರಚಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.

ಕಳೆದ ಶುಕ್ರವಾರ ಆಕ್ಸಿಜನ್ ಪೂರೈಕೆ ವಿಚಾರವಾಗಿ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿದಿತ್ತು. ಹೈಕೋರ್ಟ್‌ ತೀರ್ಪಿನನ್ವಯ 1200 ಮೆಟ್ರಿಕ್ ಟನ್‌ ಆಮ್ಲಜನಕ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.