ಕೊಪ್ಪಳ : ರಾಜ್ಯದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆ ಮಿತಿಮೀರಿದ ಬಗ್ಗೆ ವರದಿ ಬಂದಿರುವ ಬೆನ್ನಲ್ಲೇ, ಇದೀಗ ರಾಜ್ಯಾದ್ಯಂತ ಲಕ್ಷಾಂತರ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವ ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. 

ಸರ್ವ ಶಿಕ್ಷಣ ಅಭಿಯಾನದಡಿ ಬಳಸುವ ಸ್ಯಾಟ್ ಸಾಫ್ಟ್ ವೇರ್‌ನ ಅಂಕಿಅಂಶಗಳ ಪ್ರಕಾರ 16 ಜಿಲ್ಲೆಯಲ್ಲಿ ಸುಮಾರು 1.19ಲಕ್ಷ ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವ ಅಂಶ ಗೊತ್ತಾಗಿದೆ. 

ಪ್ರತಿ ವರ್ಷವೂ ರಾಜ್ಯಾದ್ಯಂತ ನಾಲ್ಕಾರು ಸಾವಿರ ಮಕ್ಕಳು ಮಾತ್ರ ಶಾಲೆಯಿಂದ ಉಳಿದಿದ್ದಾರೆ ಎನ್ನುವ ಲೆಕ್ಕಾಚಾರ ನೀಡಲಾಗುತ್ತಿತ್ತು. ಆದರೆ ಈ ಬಾರಿಯ ಅಂಕಿ ಅಂಶಗಳು ಶಿಕ್ಷಣ ಇಲಾಖೆಯನ್ನೇ ಬೆಚ್ಚಿ ಬೀಳಿಸಿದೆ. ಸಮಗ್ರ ಶಿಕ್ಷಣ ಯೋಜನಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ವರದಿಯಲ್ಲೂ ಉಲ್ಲೇಖಿಸಿ, ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಜಾಡು ಹಿಡಿದು ವರದಿಯನ್ನು ಸಲ್ಲಿಸುವಂತೆ ಕಟ್ಟನಿಟ್ಟಾಗಿ ಸೂಚಿಸಲಾಗಿದೆ. 

ಎಲ್ಲಿಗೆ ಹೋದರು ಮಕ್ಕಳು?: ಪ್ರಾಥಮಿಕ ಶಾಲೆಯಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಹೈಸ್ಕೂಲಿಗೆ ಹೋದಾಗ ಅಲ್ಲಿ ಇರದೆ ಎಲ್ಲಿಗೆ ಹೋದವು ಮಕ್ಕಳು ಎನ್ನುವುದೇ ಈಗ ದೊಡ್ಡ ಪ್ರಶ್ನೆ ಯಾಗಿದೆ. ಶಾಲೆಯಲ್ಲಿರುವ ಮಕ್ಕಳನ್ನು ಪರಿಶೀಲನೆ ಮಾಡಿ, ಮುಂದಿನ ತರಗತಿಗೆ ಹೋಗದೆ ಶಾಲೆ ಬಿಟ್ಟ ಮಕ್ಕಳು ಎಲ್ಲಿ ಇದ್ದಾರೆ ಎಂಬ ಜಾಡು ಹಿಡಿದು ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ ಕ್ರಮ ಕೈಗೊಳ್ಳಲು ಸೂಚಿಸಲಾಗಿ ದ್ದರೂ ಇದುವರೆಗಿನ ಪ್ರಗತಿ ಅತೃಪ್ತಿಕರವಾಗಿದೆ ಎಂದು ಖಡಕ್ ಆಗಿಯೇ ಜಿಲ್ಲಾವಾರು ಶಿಕ್ಷಣ ಇಲಾಖೆಗೆ ಕಟ್ಟೆಚ್ಚರಿಕೆ ನೀಡಲಾಗಿದೆ. 

ನೋಂದಣಿಯಲ್ಲಿ ವ್ಯತ್ಯಾಸ: ಕಂಪ್ಯೂಟರ್ ನೋಂದಣಿಯಲ್ಲಿ ವ್ಯತ್ಯಾಸವಾಗಿದ್ದರಿಂದ ಸಮಸ್ಯೆಯಾಗಿದೆಯೇ ಹೊರತು ಆ ಮಕ್ಕಳು ಎಲ್ಲರೂ ಶಾಲೆಯಿಂದ ಹೊರಗೆ ಉಳಿದವರು ಅಲ್ಲ. ಆನ್‌ಲೈನ್ ನೋಂದಣಿ ಸರಿಯಾಗದೇ ಇರುವುದರಿಂದ ಹಾಗೂ ಡಬಲ್ ಎಂಟ್ರಿಯಾಗಿದ್ದರೂ ಇಂಥ ಅಘಾತಕಾರಿ ಅಂಕಿಸಂಖ್ಯೆ ಬರುತ್ತದೆ. ಇದನ್ನು ಒರೆಗೆ ಹಚ್ಚಿ ನೋಡಿದಾಗ ಪ್ರಮಾಣ ತಗ್ಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ. 

ಏನಿದು ಸ್ಯಾಟ್ ಸಾಫ್ಟ್‌ವೇರ್?: ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳನ್ನು ಗುರುತಿಸುವುದಕ್ಕಾಗಿಯೇ ಈ ಸ್ಯಾಟ್ ಸಾಫ್ಟ್‌ವೇರ್ ಅಭಿವೃದ್ಧಿ ಮಾಡಿ, ಅಳವಡಿಸಲಾಗಿದೆ. ಕಳೆದ ವರ್ಷದಿಂದ ಜಾರಿ ಮಾಡಿರುವ ಈ ಸಾಫ್ಟ್‌ವೇರ್‌ನಲ್ಲಿ ಪ್ರತಿಯೊಂದು ಮಗುವಿನ ದಾಖಲಾತಿಯ ಲೆಕ್ಕಾಚಾರವೂ ಸಿಗುತ್ತದೆ. ದಾಖಲಾದ ಮಕ್ಕಳ ಮುಂದಿನ ತರಗತಿಗೆ ಹೋಗಿರುವ ಲೆಕ್ಕಚಾರ ಮಾಡಲಾಗುತ್ತದೆ. ಈ ವೇಳೆಯಲ್ಲಿ ಕಂಡುಬರುವ ವ್ಯತ್ಯಾಸವನ್ನು ಆಧರಿಸಿ ಶಾಲೆಯಿಂದ ಹೊರಗೆ ಉಳಿದ ಮಕ್ಕಳ ಲೆಕ್ಕಾಚಾರ ಸಿಗುತ್ತದೆ. ಅಂದರೆ ತರಗತಿವಾರು ಪ್ರಾಥಮಿಕ ಶಾಲೆಯಿಂದ ಹೈಸ್ಕೂಲಿನವರೆಗೂ ಮಕ್ಕಳ ದಾಖಲಾತಿಯ ವರ್ಗಾವಣೆಯ ಲೆಕ್ಕಾಚಾರ ಇದರಲ್ಲಿ ಲಭ್ಯವಾಗುತ್ತದೆ. ಅಂದರೇ ಏಳನೇ ತರಗತಿ ಮುಗಿದ ಮೇಲೆ ೮ನೇ ತರಗತಿಗೆ ಯಾವ ಶಾಲೆಗೆ ವಿದ್ಯಾರ್ಥಿ ಸೇರಿದ, ಅಲ್ಲಿ ದಾಖಲಾದನೋ ಇಲ್ಲವೋ ಎನ್ನುವ ಮಾಹಿತಿಯೂ ಇದರಲ್ಲಿ ನಮೂದಿಸಲಾಗುತ್ತದೆ. ಅಂದರೆ ಶಾಲೆಯ ವರ್ಗಾವಣೆ ಪ್ರಮಾಣ ಪತ್ರಗಳನ್ನು ಆನ್‌ಲೈನ್ ಮೂಲಕವೇ ವರ್ಗಾವಣೆ ಮಾಡುವ ವೇಳೆಯಲ್ಲಿ ಈ ಲೆಕ್ಕಚಾರ ಸಿಗುತ್ತದೆ.

ವರದಿ :  ಸೋಮರಡ್ಡಿ ಅಳವಂಡಿ