Asianet Suvarna News Asianet Suvarna News

ಕಾರ್ಮಿಕ ಇಲಾಖೆ ಖಾಲಿ ಹುದ್ದೆ ಶೀಘ್ರ ಭರ್ತಿ: ಸಚಿವ ಹೆಬ್ಬಾರ್‌

* ವಿದ್ಯಾರ್ಥಿ ವೇತನ ಮೊತ್ತ 410 ಕೋಟಿಗೆ ಏರಿಕೆ
* ಸರ್ಕಾರದ ಹೊರಗುತ್ತಿಗೆದಾರರ ಸುರಕ್ಷತೆಗೂ ಮಸೂದೆ
* ಒಂದು ತಿಂಗಳ ಕಾಲ ಕಾರ್ಮಿಕ ಅದಾಲತ್‌
 

Recruitment of the Labor Department Post Soon Says Minister Shivaram Hebbar grg
Author
Bengaluru, First Published Aug 24, 2021, 3:39 PM IST

ಶಿರಸಿ(ಆ.24): ಕಾರ್ಮಿಕ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯನ್ನು ಕೆಪಿಎಸ್‌ಸಿ ಮತ್ತು ನೇರ ನೇಮಕಾತಿ ಮೂಲಕ ಭರ್ತಿಗೊಳಿಸುವ ಕಾರ್ಯಕ್ಕೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ. ಶೀಘ್ರವೇ ಈ ಕಾರ್ಯ ಆರಂಭಿಸಲಾಗುವುದು ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ ಹೆಬ್ಬಾರ್‌ ಹೇಳಿದ್ದಾರೆ.

ನಗರದ ಕೆಡಿಸಿಸಿ ಬ್ಯಾಂಕ್‌ ಸಭೆಯ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸಿಬ್ಬಂದಿ ಕೊರತೆ ಕೇವಲ ಕಾರ್ಮಿಕ ಇಲಾಖೆಗೆ ಮಾತ್ರ ಸೀಮಿತವಾಗಿಲ್ಲ. ಉಳಿದ ಇಲಾಖೆಗಳೂ ಇದೇ ಸಮಸ್ಯೆ ಎದುರಿಸುತ್ತಿವೆ. ಕಾರ್ಮಿಕ ಇಲಾಖೆಯಲ್ಲಿ ಸಮಸ್ಯೆ ಜಾಸ್ತಿ ಇದೆ. ಹೀಗಾಗಿ, ಕಾರ್ಮಿಕ ಇಲಾಖೆಯ ಸಿಬ್ಬಂದಿಗೆ ಮುಂಬಡ್ತಿ ನೀಡುವ ಪ್ರಕ್ರಿಯೆಯನ್ನೂ ಆರಂಭಿಸಲಿದ್ದೇವೆ ಎಂದರು.

ನಾನು ಈ ಇಲಾಖೆಯನ್ನು ವಹಿಸಿಕೊಳ್ಳುವ ವೇಳೆ ಉತ್ತರ ಕನ್ನಡದಲ್ಲಿ ಒಬ್ಬ ಅಧಿಕಾರಿ ಮಾತ್ರ ಇದ್ದರು. ಈಗ ಖಾಲಿ ಇದ್ದ ಬಹುತೇಕ ಹುದ್ದೆ ತುಂಬಿದ್ದು, ಇನ್ನೂ ಮೂರು ತಾಲೂಕುಗಳಿಗೆ ಅಧಿಕಾರಿಗಳ ಅಗತ್ಯತೆ ಇದೆ. ಕಾರ್ಮಿಕ ಇಲಾಖೆಗೆ ಶಕ್ತಿ ತುಂಬುವ ಕಾರ್ಯವನ್ನು ನಾನು ಮಾಡುತ್ತಿದ್ದೇನೆ ಎಂದರು.

ಕಂಪ್ಯೂಟರ್‌ ಕಲಿಯದ ನೌಕರರಿಗೆ ಬಡ್ತಿ ಇಲ್ಲ!

ಕಾರ್ಮಿಕ ಇಲಾಖೆ ಅನೇಕ ಹೊಸ ಕಾರ್ಯಸಕ್ರಮ ಹಾಕಿಕೊಂಡಿದ್ದು, ಕಾರ್ಮಿಕರ ಮಕ್ಕಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನ ಮೊತ್ತವನ್ನು 290 ಕೋಟಿಯಿಂದ 410 ಕೋಟಿಗೆ ಏರಿಸಿದ್ದೇವೆ. ರಾಷ್ಟ್ರ ಮಟ್ಟದ ವಿದ್ಯಾ ಸಂಸ್ಥೆಗಳಲ್ಲಿ ತೇರ್ಗಡೆ ಆಗುವ ಕಾರ್ಮಿಕರ ಮಕ್ಕಳ ಫೀ ಕಾರ್ಮಿಕ ಇಲಾಖೆಯಿಂದಲೇ ನೀಡುತ್ತೇವೆ. ಡ್ರೈವರ್‌ ಅಥವಾ ಮೆಕ್ಯಾನಿಕ್‌ ಅಪಘಾತದಿಂದ ಸತ್ತರೆ ಕುಟುಂಬಕ್ಕೆ 5 ಲಕ್ಷ ನೀಡುವ ಬಿಲ್‌ನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಿದ್ದೇವೆ. ಸರ್ಕಾರದ ಹೊರ ಗುತ್ತಿಗೆಯನ್ನೂ ಒಳಗೊಂಡಂತೆ ಹೊರ ಗುತ್ತಿಗೆದಾರರ ಸುರಕ್ಷತೆಗೂ ಹೊಸ ಬಿಲ್‌ ತರಲಿದ್ದೇವೆ. ಈ ತಿಂಗಳ 16ರಿಂದ ಕಾರ್ಮಿಕ ಅದಾಲತ್‌ ಆರಂಭಿಸಲಾಗಿದ್ದು, ಒಂದು ತಿಂಗಳ ಕಾಲ ನಡೆಯಲಿದೆ. ಪ್ರತಿ ತಾಲೂಕು ಮಟ್ಟದಲ್ಲಿ ನಡೆಯುತ್ತಿರುವ ಈ ಅದಾಲತ್‌ ನಲ್ಲಿ ಶೋಷಣೆಗೆ ಒಳಗಾದ ಕಾರ್ಮಿಕರಿಗೆ ನ್ಯಾಯ ಒದಗಿಸುವ ಯತ್ನ ಸ್ಥಳದಲ್ಲೇ ನಡೆಯಲಿದೆ ಎಂದರು.

ಗಣೇಶ ಚತುರ್ಥಿ ಆಚರಣೆ ಸಂಬಂಧ ಮುಂದಿನ ಹತ್ತು ದಿನದ ಪರಿಸ್ಥಿತಿ ಅವಲೋಕಿಸಿ ಹೊಸ ಮಾರ್ಗಸೂಚಿ ಹೊರಡಿಸುವ ಸಾಧ್ಯತೆ ಇದೆ. ಹಬ್ಬದ ಆಚರಣೆಗೆ ಕಠಿಣ ನಿರ್ಬಂಧ ವಿಧಿಸದಂತೆ ಈಗಾಗಲೆ ಗಣೇಶೋತ್ಸವ ಸಮಿತಿ ಪ್ರಮುಖರ ನಿಯೋಗ ಮನವಿ ಮಾಡಿದೆ. ಜನರ ಒತ್ತಾಯವನ್ನು ಸರ್ಕಾರಕ್ಕೂ ತಿಳಿಸಲಾಗಿದೆ. ಮುಂದಿನ ಸ್ಥಿತಿ ಗಮನಿಸಿ ಮುಖ್ಯಮಂತ್ರಿ ಸೂಕ್ತ ನಿರ್ಧಾರ ಕೈಗೊಳ್ಳುತ್ತಾರೆ ಎಂದರು.

ಕೋವಿಡ್‌ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಶಿರಸಿಯಲ್ಲಿ ಕೋವಿಡ್‌ ಪತ್ತೆ ಪ್ರಯೋಗಾಲಯ ಶೀಘ್ರ ಕಾರ್ಯಾರಂಭಿಸಲಿದೆ. ಶಾಲೆಗಳಲ್ಲಿಯೂ ಕೋವಿಡ್‌ ನಿಯಮ ಪಾಲಿಸಿ ತರಗತಿ ಆರಂಭಿಸಲಾಗಿದೆ ಎಂದರು.

ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುವ ಎರಡು ಸಾವಿರದಷ್ಟುರೈತರಿಗೆ ಬಿಡುಗಡೆ ಆಗಬೇಕಿರುವ ಮೊತ್ತವನ್ನು ಶೀಘ್ರ ದೊರಕುವಂತೆ ಮಾಡಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಿದ್ದೇನೆ. ವಾರದೊಳಗೆ ಸಕಾರಾತ್ಮಕ ಫಲಿತಾಂಶ ಕಂಡುಕೊಳ್ಳಲಿದ್ದೇವೆ ಎಂದರು. ಕೆಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಮೋಹನದಾಸ ನಾಯಕ, ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಇತರರಿದ್ದರು.

ಖಾತೆ ಹಂಚಿಕೆ ವಿಚಾರದಲ್ಲಿ ಯಾವ ಸಚಿವರಲ್ಲೂ ಅಪಸ್ವರವಿಲ್ಲ. ಸರ್ಕಾರ ಸುಭದ್ರವಾಗಿದ್ದು ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದೆ ಎಂದು ಶಿವರಾಮ ಹೆಬ್ಬಾರ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios