* ರಾಜ್ಯ ಸರ್ಕಾರಿ ನೌಕರರಿಗೆ ಮಾ.22ರ ಗಡುವು* ಕಂಪ್ಯೂಟರ್‌ ಕಲಿಯದ ನೌಕರರಿಗೆ ಬಡ್ತಿ ಇಲ್ಲ* ಅಷ್ಟರೊಳಗೆ ಕಲಿಯದಿದ್ದರೆ ಬಡ್ತಿ ಇಲ್ಲ: ಸರ್ಕಾರ

ಬೆಂಗಳೂರು(ಆ.24): ನೇರ ನೇಮಕಾತಿ ಹೊಂದಿರುವ ಮತ್ತು ಸೇವಾನಿರತ ಸರ್ಕಾರಿ ನೌಕರರು ಮುಂದಿನ ವರ್ಷದ ಮಾಚ್‌ರ್‍ 22ರೊಳಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗದಿದ್ದಲ್ಲಿ ಮುಂಬಡ್ತಿ, ವಾರ್ಷಿಕ ಬಡ್ತಿ ಪಡೆಯಲು ಅನರ್ಹರಾಗಿರುತ್ತಾರೆ ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.

ಕರ್ನಾಟಕ ಸಿವಿಲ್‌ ಸೇವಾ (ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ) ನಿಯಮಗಳು-2012 ಅಡಿಯಲ್ಲಿ ನಿರ್ದಿಷ್ಟಹುದ್ದೆ ಹೊರತುಪಡಿಸಿ ಇನ್ನಿತರ ಎಲ್ಲ ಅಭ್ಯರ್ಥಿಗಳಿಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ. ಇಷ್ಟುವರ್ಷವಾದರೂ ಇನ್ನೂ ಅನೇಕ ಇಲಾಖೆಗಳ ನೂರಾರು ಸರ್ಕಾರಿ ನೌಕರರು ಕಂಪ್ಯೂಟರ್‌ ಜ್ಞಾನವನ್ನು ಹೊಂದಿಲ್ಲ. ಹೀಗಾಗಿ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸರ್ಕಾರ ಹಲವಾರು ಬಾರಿ ಕಾಲಮಿತಿಯನ್ನು ವಿಸ್ತರಿಸಿದ್ದರೂ ಅನೇಕ ನೌಕರರು ಈ ಬಗ್ಗೆ ನಿರ್ಲಕ್ಷ್ಯ ಹೊಂದಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಸುತ್ತೋಲೆ ಹೊರಡಿಸಿದೆ.

ಪ್ರಸ್ತುತ ಸರ್ಕಾರದಿಂದ ಅನುಮೋದಿಸಲ್ಪಟ್ಟಕಿಯೋನಿಕ್ಸ್‌ ಸಂಸ್ಥೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯನ್ನು ನಡೆಸುತ್ತದೆ. ನೌಕರರು ನಿಗದಿಪಡಿಸಿರುವ ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾಗುತ್ತದೆ. ಈ ಸಂಸ್ಥೆಯಲ್ಲಿ ಮಾಚ್‌ರ್‍ 22ರೊಳಗೆ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗದ ನೌಕರರು ಪರಿವೀಕ್ಷಣಾ ಅವಧಿ, ಮುಂಬಡ್ತಿ ಹಾಗೂ ವಾರ್ಷಿಕ ಬಡ್ತಿ ಇತ್ಯಾದಿಗಳನ್ನು ಪಡೆಯಲು ಅನರ್ಹರಾಗುತ್ತಾರೆ. ಆದ್ದರಿಂದ ಪರೀಕ್ಷೆ ತೆಗೆದುಕೊಳ್ಳದೆ ಇರುವ ನೌಕರರು ತಕ್ಷಣ ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದೆ.