ಶೀಘ್ರವೇ 3500 ಪಿಯು ಅತಿಥಿ ಉಪನ್ಯಾಸಕರ ನೇಮಕ

ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಪ್ರತಿಯಾಗಿ ಪ್ರಸಕ್ತ ಸಾಲಿನಲ್ಲೂ 3500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಪ್ರಸ್ತಾವನೆ ಸಲ್ಲಿಸಲಾಗಿದೆ.

over 3500 pu guest lecturers recruitment soon in karnataka gow

ಬೆಂಗಳೂರು (ಜು.3): ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಗಳಿಗೆ ಪ್ರತಿಯಾಗಿ ಪ್ರಸಕ್ತ ಸಾಲಿನಲ್ಲೂ 3500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಆ ಬೋಧಕರ ಸಂಭಾವನೆಯನ್ನು 9 ಸಾವಿರ ರು.ನಿಂದ 15 ಸಾವಿರ ರು.ಗೆ ಹೆಚ್ಚಿಸುವಂತೆ ಕೋರಿ ಪದವಿ ಪೂರ್ವ ಶಿಕ್ಷಣ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

‘ಪಿಯು ಇಲಾಖೆ ನಿರ್ದೇಶಕರಾದ ಆರ್‌.ರಾಮಚಂದ್ರನ್‌ 2022-23ನೇ ಸಾಲಿನಲ್ಲಿ ಸರ್ಕಾರಿ ಪಿಯು ಕಾಲೇಜುಗಳಿಗೆ 3500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲು ಹಾಗೂ ಅವರ ಗೌರವ ಧನವನ್ನು 15 ಸಾವಿರ ರು.ಗಳಿಗೆ ಹೆಚ್ಚಿಸಬೇಕೆಂದು ಕೋರಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈ ಪ್ರಸ್ತಾವನೆಯನ್ನು ಇಲಾಖೆಯು ಆರ್ಥಿಕ ಇಲಾಖೆಗೆ ರವಾನಿಸಿದ್ದು, ಪ್ರಸ್ತುತ ಚರ್ಚೆಯ ಹಂತದಲ್ಲಿದೆ. ಇನ್ನೊಂದು ವಾರದಲ್ಲಿ ಇದಕ್ಕೆ ಅನುಮೋದನೆ ದೊರೆಯುವ ಸಾಧ್ಯತೆ ಇದೆ ಎನ್ನುತ್ತವೆ’ ಇಲಾಖೆಯ ಉನ್ನತ ಮೂಲಗಳು.

ಪಿಯು ಕಾಲೇಜುಗಳಲ್ಲಿ ಡಿಸೆಂಬರ್‌ ಬಳಿಕ NEP ಪಠ್ಯಕ್ರಮ: BC NAGESH

ಗೌರವ ಧನ ಹೆಚ್ಚಳ ಖಚಿತ:
ರಾಜ್ಯದ 1220ಕ್ಕೂ ಹೆಚ್ಚು ಸರ್ಕಾರಿ ಪಿಯು ಕಾಲೇಜುಗಳಲ್ಲಿ ಸುಮಾರು 3000 ಕಾಯಂ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಅವುಗಳ ಭರ್ತಿಗೆ ಸರ್ಕಾರ ಕ್ರಮ ಕೈಗೊಂಡಿಲ್ಲ. ಬದಲಿಗೆ ಕಳೆದ ವರ್ಷ 3552 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲಾಗಿತ್ತು. ಈ ಉಪನ್ಯಾಸಕರ ಗೌರವಧವನ್ನು ಕನಿಷ್ಠ 12 ಸಾವಿರ ರು.ಗಳಿಗೆ ಹೆಚ್ಚಿಸುವಂತೆ ಹಿಂದೆಯೂ ಪಿಯು ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ಸರ್ಕಾರ ಕೋವಿಡ್‌ ಆರ್ಥಿಕ ಸಂಕಷ್ಟದ ಕಾರಣದಿಂದ ಒಪ್ಪಿರಲಿಲ್ಲ. ಈ ವರ್ಷ ಗೌರವಧನ ಹೆಚ್ಚಳವಾಗುವುದು ಬಹುತೇಕ ಖಚಿತ. ಆದರೆ ಎಷ್ಟುಪ್ರಮಾಣದಲ್ಲಿ ಹೆಚ್ಚಳವಾಗಲಿದೆ ಎಂಬುದು ಕಾದುನೋಡಬೇಕಾಗಿದೆ ಎನ್ನುತ್ತವೆ ಇಲಾಖೆ ಮೂಲಗಳು.

ರಾಜ್ಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 27 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಈಗಾಗಲೇ ಆದೇಶ ಮಾಡಿರುವ ಜೊತೆಗೆ ಆ ಅತಿಥಿ ಶಿಕ್ಷಕರಿಗೆ ಇದುವರೆಗೆ ಇದ್ದ ಮಾಸಿಕ 7500 ರು. ಸಂಭಾವನೆಯನ್ನು 10,500 ರು.ಗಳಿಗೆ ಸರ್ಕಾರ ಹೆಚ್ಚಳ ಮಾಡಿದೆ. ಅಂದರೆ ಇದು ಅತಿಥಿ ಉಪನ್ಯಾಸಕರ ಗೌರವಧನಕ್ಕಿಂತ ಹೆಚ್ಚಾದಂತಾಗಿದೆ. ಹಾಗಾಗಿ ಶಾಲಾ ಶಿಕ್ಷಣದ ಮುಂದಿನ ಹಂತವಾದ ಪಿಯು ಕಾಲೇಜು ಹಂತದ ಬೋಧಕರಿಗೆ ಶಿಕ್ಷಕರಿಗಿಂತ ಕಡಿಮೆ ವೇತನ ನೀಡುವುದು ಸಮಂಜಸವಲ್ಲ. ಅಲ್ಲದೆ, ಅತಿಥಿ ಉಪನ್ಯಾಸಕರಿಗೆ ಇರುವ 9 ಸಾವಿರ ರು. ಮಾಸಿಕ ಗೌರವಧನ ಯಾವುದಕ್ಕೂ ಸಾಲದು. ಬೋಧಕ ಹುದ್ದೆಗೆ ಒಂದು ಕನಿಷ್ಠ ಗೌರವ ಸಿಗುವಂತೆ ಗೌರವಧನ ಹೆಚ್ಚಿಸಬೇಕು ಎಂಬುದು ರಾಜ್ಯ ಪಿಯು ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಆಗ್ರಹವಾಗಿದೆ.

ಪಿಯುಸಿ ಫಲಿತಾಂಶದಲ್ಲಿ ಕೊನೆಯ ಸ್ಥಾನ: ಚಿತ್ರದುರ್ಗಕ್ಕೆ ಈ ಸ್ಥಿತಿ ಬರಲು ಅಧಿಕಾರಿಗಳೇ ಕಾರಣ..!

ಸರ್ಕಾರಿ ಪಿಯು ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರನ್ನು ನೇಮಕಾತಿಗೆ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅಲ್ಲದೆ, ಅವರ ಗೌರವಧವನ್ನು 15 ಸಾವಿರ ರು.ಗಳಿಗೆ ಹೆಚ್ಚಿಸಲು ಕೋರಲಾಗಿದೆ. ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುವುದು.
ಆರ್‌.ರಾಮಚಂದ್ರನ್‌, ನಿರ್ದೇಶಕ, ಪಿಯು ಇಲಾಖೆ

ಸರ್ಕಾರ ಆದಷ್ಟುಬೇಗೆ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಜೊತೆಗೆ ಅವರಿಗೆ ಇರುವ 9 ಸಾವಿರ ರು. ಸಭಾವನೆ ಯಾವುದಕ್ಕೂ ಬರುವುದಿಲ್ಲ. ಕನಿಷ್ಠ 20 ಸಾವಿರ ರು.ಗಳಿಗೆ ಹಚ್ಚಿಸಬೇಕು. ಕಳೆದ ಸಾಲಿನ ಎರಡು ತಿಂಗಳ ಬಾಕಿ ಗೌರವಧನವನ್ನೂ ಕೂಡಲೇ ಬಿಡುಗಡೆ ಮಾಡಬೇಕು.
ರಾಜೇಶ್‌ ಭಟ್‌, ಪಿಯು ಕಾಲೇಜು ಅತಿಥಿ ಉಪನ್ಯಾಸಕರ ಸಂಘದ ಸಂಚಾಲಕ

Latest Videos
Follow Us:
Download App:
  • android
  • ios