ಕೂಲಿ ಕಾರ್ಮಿಕರೊಬ್ಬರ ಇಬ್ಬರು ಹೆಣ್ಣುಮಕ್ಕಳು ಬಡತನವನ್ನು ಮೆಟ್ಟಿ ನಿಂತು ಸರ್ಕಾರಿ ಹುದ್ದೆಗಳನ್ನು ಪಡೆದಿದ್ದಾರೆ. ಹಿರಿಯ ಮಗಳು ಪೂಜಾ ಅಹಿರ್ವಾರ್, ಎಸ್‌ಐ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದರೆ, ಅವರ ತಂಗಿ ಪೊಲೀಸ್ ಕಾನ್‌ಸ್ಟೆಬಲ್ ಆಗಿ ಆಯ್ಕೆಯಾಗಿದ್ದಾರೆ.
ಬಡತನದ ನಡುವೆಯೂ ಸಾಧಿಸುವ ಛಲವೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು ಎನ್ನುವುದಕ್ಕೆ ಮಧ್ಯಪ್ರದೇಶದ ಈ ಸಹೋದರಿಯರೇ ಸಾಕ್ಷಿಯಾಗಿದ್ದಾರೆ. ಅಪ್ಪ ಕೂಲಿ ಮಾಡುತ್ತಿದ್ದರೂ ಮಕ್ಕಳು ಮಾತ್ತು ಸರ್ಕಾರದ ಉನ್ನತ ಹುದ್ದೆಗಳನ್ನು ಪಡೆಯುವಲ್ಲಿ ಸಫಲರಾಗಿದ್ದಾರೆ.
ಕೂಲಿ ಕಾರ್ಮಿಕರೊಬ್ಬರ ಹಿರಿಯ ಮಗಳು ಪೂಜಾ ಅಹಿರ್ವಾರ್, ಮಧ್ಯಪ್ರದೇಶ ಸಬ್-ಇನ್ಸ್‌ಪೆಕ್ಟರ್ (ಎಸ್‌ಐ) ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಗಳಿಸಿದ್ದಾರೆ. ಇದೇ ಹೊತ್ತಿನಲ್ಲಿ, ಅವರ ತಂಗಿಯೂ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಯಾಗುವ ಮೂಲಕ ಇಡೀ ಕುಟುಂಬಕ್ಕೆ ಡಬಲ್ ಖುಷಿ ನೀಡಿದ್ದಾರೆ. ಮಧ್ಯಪ್ರದೇಶದ ಅಶೋಕನಗರ ಜಿಲ್ಲೆಯವರಾದ ಪೂಜಾ, ಎಸ್‌ಐ ಪರೀಕ್ಷೆಯ ಪರಿಶಿಷ್ಟ ಜಾತಿ (ಎಸ್‌ಸಿ) ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ. ಕಡು ಬಡತನ ಮತ್ತು ಆರ್ಥಿಕ ಸಂಕಷ್ಟಗಳೇ ಇವರ ದಾರಿಗೆ ಅಡ್ಡಿಯಾಗಿದ್ದವು. ಆದರೆ, ಇವೆಲ್ಲವನ್ನೂ ಮೆಟ್ಟಿ ನಿಂತು ಈ ಸಹೋದರಿಯರು ಸರ್ಕಾರಿ ಹುದ್ದೆ ಗಿಟ್ಟಿಸಿಕೊಂಡಿರುವುದು ನಿಜಕ್ಕೂ ದೊಡ್ಡ ಸಾಧನೆ.
ಬಡತನವನ್ನೇ ಮೆಟ್ಟಿ ನಿಂತ ಸಹೋದರಿಯರು
ಪೂಜಾ ಮತ್ತು ಅವರ ತಂಗಿಯ ತಂದೆ ಒಬ್ಬ ದಿನಗೂಲಿ ಕಾರ್ಮಿಕ. ಮನೆಯಲ್ಲಿನ ಆರ್ಥಿಕ ಪರಿಸ್ಥಿತಿ ಹೇಳತೀರದು. ಇಂತಹ ಕಷ್ಟದ ಪರಿಸ್ಥಿತಿಯಲ್ಲೂ ಹೆಣ್ಣುಮಕ್ಕಳ ಓದಿಗೆ ಅವರ ತಂದೆ ಎಂದಿಗೂ ಅಡ್ಡಿಪಡಿಸಲಿಲ್ಲ. ತಮ್ಮ ಮಕ್ಕಳ ಕನಸು ನನಸಾಗಿಸಲು ಅವರು ಹಗಲಿರುಳು ಶ್ರಮಿಸಿದ್ದಾರೆ. ತಂದೆಯ ಕಷ್ಟವನ್ನು ಅರಿತಿದ್ದ ಈ ಹೆಣ್ಣುಮಕ್ಕಳು, ತಮ್ಮ ಗುರಿ ತಲುಪಲೇಬೇಕೆಂದು ಹಠಕ್ಕೆ ಬಿದ್ದಿದ್ದರು. ಯಾವುದೇ ಕೋಚಿಂಗ್ ಅಥವಾ ವಿಶೇಷ ತರಬೇತಿಗಳಿಲ್ಲದೆ, ಸ್ವಂತ ಪರಿಶ್ರಮದಿಂದಲೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದರು. ಇವರ ಈ ಯಶಸ್ಸಿನ ಹಿಂದೆ ಅಪಾರವಾದ ಶ್ರಮ ಮತ್ತು ತ್ಯಾಗ ಅಡಗಿದೆ.
ಅಕ್ಕ ಎಸ್‌ಐ, ತಂಗಿ ಕಾನ್‌ಸ್ಟೆಬಲ್!
ಪೂಜಾ ಅಹಿರ್ವಾರ್ ಅವರ ಸಾಧನೆ ಸಾಮಾನ್ಯವಾದುದಲ್ಲ. ಇಡೀ ರಾಜ್ಯಕ್ಕೆ ಎಸ್‌ಸಿ ಕೆಟಗರಿಯಲ್ಲಿ ಮೊದಲ ರ‍್ಯಾಂಕ್ ಪಡೆಯುವುದು ಎಂದರೆ ಸುಲಭದ ಮಾತಲ್ಲ. ಅವರ ಈ ಯಶಸ್ಸು ಸಾವಿರಾರು ಯುವಕ-ಯುವತಿಯರಿಗೆ ಸ್ಫೂರ್ತಿ ನೀಡಿದೆ. ಇದೇ ವೇಳೆ, ಪೂಜಾ ಅವರ ತಂಗಿ ಕೂಡ ಪೊಲೀಸ್ ಇಲಾಖೆಯ ಕಾನ್‌ಸ್ಟೆಬಲ್ ಹುದ್ದೆಗೆ ಆಯ್ಕೆಯಾಗಿದ್ದಾರೆ. ಒಂದೇ ಮನೆಯ ಇಬ್ಬರು ಹೆಣ್ಣುಮಕ್ಕಳು ಪೊಲೀಸ್ ಇಲಾಖೆಗೆ ಆಯ್ಕೆಯಾಗಿರುವುದು ಅವರ ಕುಟುಂಬಕ್ಕೆ ಮಾತ್ರವಲ್ಲ, ಇಡೀ ಜಿಲ್ಲೆಗೇ ಹೆಮ್ಮೆ ತಂದಿದೆ. ಇವರ ಕಥೆ ಕೇಳಿದರೆ ಎಂಥವರಿಗೂ ಸ್ಫೂರ್ತಿ ಬಾರದೇ ಇರದು.


