ಬೆಂಗಳೂರು(ಜ.28): ಕರ್ನಾಟಕ ಲೋಕ ಸೇವಾ ಆಯೋಗದ (ಕೆಪಿಎಸ್‌ಸಿ) ಎಫ್‌ಡಿಎ ಪ್ರಶ್ನೆ ಸೋರಿಕೆ ಪ್ರಕರಣದ ಸಂಬಂಧ ಆಯೋಗದ ಮತ್ತೊಬ್ಬ ಸಿಬ್ಬಂದಿ ಹಾಗೂ ಪೊಲೀಸ್‌ ಕಾನ್‌ಸ್ಟೇಬಲ್‌ ಸಿಸಿಬಿ ಬಲೆಗೆ ಬುಧವಾರ ಬಿದ್ದಿದ್ದಾರೆ.

ಕೆಪಿಎಸ್‌ಸಿ ದ್ವಿತೀಯ ದರ್ಜೆ ಸಹಾಯಕ ಬಸವರಾಜ್‌ ಕುಂಬಾರ ಹಾಗೂ ಕೆಪಿಎಸ್‌ಸಿ ಭದ್ರತಾ ವಿಭಾಗದ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್‌) ಕಾನ್‌ಸ್ಟೇಬಲ್‌ ಮುಸ್ತಕ್‌ ಖ್ವಾತಿನಾಯ್‌್ಕ ಬಂಧಿತರು. ಇದರಿಂದ ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಒಟ್ಟು 18ಕ್ಕೆ ಏರಿದಂತಾಗಿದೆ.

ಆಯೋಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೋಪಿಗಳು ಸನಾ ಬೇಡಿ ಮೂಲಕ ಪ್ರಶ್ನೆ ಪತ್ರಿಕೆ ಪಡೆದು ಎಫ್‌ಡಿಎ ಪರೀಕ್ಷೆ ಬರೆಯಲು ಸಜ್ಜಾಗಿದ್ದರು. ಇದೇ ಪ್ರಕರಣದಲ್ಲಿ ಬಂಧಿತರಾಗಿರುವ ಕೆಪಿಎಸ್‌ಸಿಯ ಉದ್ಯೋಗಿಗಳಾದ ರಮೇಶ್‌ ಹೆರ್‌ಕಲ್‌ ಹಾಗೂ ಸನಾ ವಿಚಾರಣೆ ವೇಳೆ ಆರೋಪಿಗಳ ಕುರಿತು ಮಾಹಿತಿ ಸಿಕ್ಕಿತು. ಅಂತೆಯೇ ಕಾರ್ಯಾಚರಣೆ ನಡೆಸಲಾಯಿತು ಎಂದು ಜಂಟಿ ಆಯುಕ್ತ (ಅಪರಾಧ) ಸಂದೀಪ್‌ ಪಾಟೀಲ್‌ ತಿಳಿಸಿದ್ದಾರೆ.

ವಿಧಾನಸೌಧ ನೌಕರಿ ಕನಸು:

ಹಾವೇರಿ ಜಿಲ್ಲೆ ಬಸವರಾಜ್‌ ಕುಂಬಾರ, 2017ರಿಂದ ಕೆಪಿಎಸ್‌ಸಿಯಲ್ಲಿ ಉದ್ಯೋಗಕ್ಕೆ ಸೇರಿದ್ದ. ಪ್ರಸುತ್ತ ಆಯೋಗದ ಲೆಕ್ಕ ಪತ್ರ ವಿಭಾಗದಲ್ಲಿ ಆತ ಕಾರ್ಯನಿರ್ವಹಿಸುತ್ತಿದ್ದ. ಒಂದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ರಮೇಶ್‌ ಹಾಗೂ ಸನಾ ಬೇಡಿಗೆ ಆತನ ಪರಿಚಯವಾಗಿತ್ತು. ಉತ್ತರ ಕರ್ನಾಟಕದವರಾದ ಕಾರಣ ರಮೇಶ್‌ ಮತ್ತು ಬಸವರಾಜ್‌ ನಡುವೆ ಆತ್ಮೀಯ ಒಡನಾಡಿಗಳಾಗಿದ್ದು, ವಿಜಯನಗರದ ಹತ್ತಿರದ ದೀಪಾಂಜಲಿ ನಗರದಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರು ಒಟ್ಟಿಗೆ ನೆಲೆಸಿದ್ದರು. ‘ಕೆಪಿಎಸ್‌ಸಿಯಲ್ಲೇ ಉಳಿದರೆ ಜೀವನವಿಡೀ ಇದೇ ಕಟ್ಟಡದಲ್ಲೇ ಕೊಳೆಯಬೇಕು. ವಿಧಾನಸೌಧ ಸಚಿವಾಲಯಕ್ಕೆ ಸೇರಿದರೆ ಕೈ ತುಂಬಾ ಹಣ ಮಾಡಬಹುದು. ಹೀಗಾಗಿ ‘ಎಫ್‌ಡಿಎ ಪರೀಕ್ಷೆ ಬರೆಯೋಣ’ ಎಂದು ಈ ಸ್ನೇಹಿತರು ನಿರ್ಧರಿಸಿದ್ದರು. ಕೊನೆಗೆ ಗೆಳತಿ ಸನಾ ಮೂಲಕ ಪ್ರಶ್ನೆ ಪತ್ರಿಕೆ ಪಡೆದ ರಮೇಶ್‌, ಅದನ್ನು ಬಸವರಾಜ್‌ ಜತೆ ಹಂಚಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಪಿಎಸ್ಸಿ ಸಿಬ್ಬಂದಿಯಿಂದಲೇ ಪ್ರಶ್ನೆಪತ್ರಿಕೆ ಸೋರಿಕೆ: ಇಬ್ಬರು ನೌಕರರ ಬಂಧನ

ಹಾವೇರಿ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಆತ ಶನಿವಾರ ತೆರಳಿದ್ದ. ಅಷ್ಟರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಕೃತ್ಯ ಬಯಲಾಗಿ ರಮೇಶ್‌ ಸಿಸಿಬಿ ಬಲೆಗೆ ಬಿದ್ದ ಸಂಗತಿ ತಿಳಿದ ಬಸವರಾಜ್‌, ಬಂಧನಭೀತಿಯಿಂದ ಕಣ್ಮೆರೆಯಾಗಿದ್ದ. ಇತ್ತ ತಮ್ಮ ಬಲೆಗೆ ರಮೇಶ್‌ನ ಸಂಪರ್ಕ ಜಾಲ ಶೋಧನೆಗಿಳಿದ ಪೊಲೀಸರು, ಆತನನ್ನು ತೀವ್ರ ವಿಚಾರಣೆಗೊಳಪಡಿಸಿದರು. ಆದರೆ ಆರಂಭದಲ್ಲಿ ತಾನು ಯಾರಿಗೂ ಪ್ರಶ್ನೆ ಪತ್ರಿಕೆ ಕೊಟ್ಟಿಲ್ಲ ಎಂದಿದ್ದ. ನಿನ್ನ ಜೊತೆ ಯಾರ್ಯಾರು ವಾಸವಾಗಿದ್ದರು. ಅವರೆಲ್ಲ ಏನ್‌ ಕೆಲಸ ಮಾಡುತ್ತಾರೆ ಎಂದು ವಿಚಾರಿಸಿದಾಗ ಬಸವರಾಜನ ಸಂಗತಿ ಗೊತ್ತಾಗಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಕಡುಬಡತನ ಹೊರ ಬರಲು ಹೋಗಿ ಜೈಲು ಸೇರಿದ ಪೇದೆ

ಇನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಮುಸ್ತಕ್‌, ಎರಡು ವರ್ಷಗಳಿಂದ ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿರುವ ನಗರ ಸಶಸ್ತ್ರ ಮೀಸಲು ಪಡೆಯ ಕೇಂದ್ರ ಕಚೇರಿಯಲ್ಲಿ ಕಾನ್‌ಸ್ಟೇಬಲ್‌ ಆಗಿದ್ದ. ವಾರಕ್ಕೆರಡು ಬಾರಿ ಪಾಳಿಯ ಮೇರೆಗೆ ಕೆಪಿಎಸ್‌ಸಿ ಕಚೇರಿಗೆ ಭದ್ರತೆಗೆ ಸಿಎಆರ್‌ ಪೊಲೀಸರನ್ನು ನಿಯೋಜಿಸಲಾಗುತ್ತದೆ. ಅದರಂತೆ ಮುಸ್ತಕ್‌ ಕೂಡಾ ಕೆಪಿಎಸ್‌ಸಿಯ ಹಿಂಭಾಗದ ಗೇಟ್‌ನ ಭದ್ರತೆಗೆ ಕರ್ತವ್ಯಕ್ಕೆ ನಿಗದಿತಪಡಿಸಲಾಗಿತ್ತು. ಆಗ ಆತನಿಗೆ ಸನಾ ಬೇಡಿಯ ಪರಿಚಯವಾಗಿದೆ.

ಆಯೋಗದ ಯಾವ ವಿಭಾಗದಲ್ಲಿ ಆಕೆ ಕೆಲಸ ಮಾಡುತ್ತಾಳೆ ಎಂಬುದನ್ನು ತಿಳಿದುಕೊಂಡಿದ್ದ ಮುಸ್ತಕ್‌, ತನ್ನ ಮನೆಯ ದಾರುಣ ಕತೆಯನ್ನು ಆಕೆಯ ಮುಂದೆ ಹೇಳಿಕೊಂಡು ಕಣ್ಣೀರಿಟ್ಟಿದ್ದ. ‘ಈಗ ಬರುತ್ತಿರುವ ಸಂಬಳದಿಂದ ಕುಟುಂಬವನ್ನು ಸಾಕಲು ಸಾಧ್ಯವಾಗುತ್ತಿಲ್ಲ. ನೀವು ಸಹಾಯ ಮಾಡಿದರೆ ಎಫ್‌ಡಿಎ ಪರೀಕ್ಷೆ ಬರೆಯುತ್ತೇನೆ. ನಮ್ಮ ಬದುಕಿಗೆ ದಾರಿಯಾಗುತ್ತದೆ’ ಎಂದು ಆತ ಬೇಡಿಕೊಂಡಿದ್ದ. ಈ ಭಾವುಕ ಮಾತಿಗೆ ಮರುಳಾದ ಆಕೆ, ಮುಸ್ತಕ್‌ಗೆ ಎಫ್‌ಡಿಎ ಪ್ರಶ್ನೆ ಪತ್ರಿಕೆ ಕೊಟ್ಟಿದ್ದಳು. ಪ್ರಕರಣದಲ್ಲಿ ಆಕೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ‘ಸೋರಿಕೆ’ ಗೊತ್ತಾಯಿತು. ಸನಾ ಮಾಹಿತಿ ಆಧರಿಸಿ ಆರೋಪಿಯನನ್ನು ಬಲೆಗೆ ಬೀಳಿಸಲಾಯಿತು. ಹಾವೇರಿಯಲ್ಲಿ ಮುಸ್ತಕ್‌ ಕೂಡಾ ಪರೀಕ್ಷೆ ಬರೆಯಲು ನಿರ್ಧರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಎಫ್‌ಡಿಸಿ ಪ್ರಶ್ನೆ ಸೋರಿಕೆ ಪ್ರಕರಣದಲ್ಲಿ ಇದುವರೆಗೆ ಬಂಧಿತರಾದ ಮೂವರು ಆರೋಪಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ಬಗ್ಗೆ ಇಲಾಖಾ ಮಟ್ಟದ ವಿಚಾರಣೆ ನಡೆಯಲಿದೆ ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಸತ್ಯವತಿ ತಿಳಿಸಿದ್ದಾರೆ.