ಎಫ್‌ಡಿಎ ಪರೀಕ್ಷೆ: ಕನ್ನಡ ವಿಷಯವನ್ನೇ ಕೈಬಿಟ್ಟ ಕೆಪಿಎಸ್‌ಸಿ..!
* ಪರೀಕ್ಷೆ ನಡೆಸಿ, ಮೌಲ್ಯಮಾಪನ ನಡೆಸಲ್ಲ ಅಂದ ಸಂಸ್ಥೆ
* ಬಾರ್‌ಕೋಡ್‌ನಲ್ಲಿ ತಾಂತ್ರಿಕ ದೋಷ, ಮೌಲ್ಯಮಾಪನ ಇಲ್ಲ
* ಗೊಂದಲಕ್ಕೆ ಕಾರಣವಾದ ಕೆಪಿಎಸ್‌ಸಿ ನಿರ್ಧಾರ
ಬೆಂಗಳೂರು(ಜು.26): ಡಿಜಿಟಲ್ ಮೌಲ್ಯಮಾಪನದಲ್ಲಿ ಅಕ್ರಮ, ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳಿಂದಲೇ ಅಪಖ್ಯಾತಿಗೆ ಗುರಿಯಾಗಿರುವ ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್‌ಸಿ) ಇದೀಗ ತಾಂತ್ರಿಕ ದೋಷದಿಂದ 2019ನೇ ಸಾಲಿನ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ‘ಕಡ್ಡಾಯ ಕನ್ನಡ’ ವಿಷಯದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡದಿರಲು ನಿರ್ಧರಿಸಿದೆ.
ಕನ್ನಡ ವಿಷಯವನ್ನು ಪ್ರಥಮ ಭಾಷೆಯನ್ನಾಗಿ ಅಧ್ಯಯನ ಮಾಡದ ಎಲ್ಲ ಅಭ್ಯರ್ಥಿಗಳು ಎಫ್‌ಡಿಎ ಹುದ್ದೆಗಳಿಗೆ ಆಯ್ಕೆಯಾಗಲು ಕನ್ನಡ ಭಾಷೆ ಪರೀಕ್ಷೆಗೆ ಹಾಜರಾಗಿ, ಕನಿಷ್ಠ 50 ಅಂಕ ಗಳಿಸಿ ಉತ್ತೀರ್ಣರಾಗಬೇಕು ಎಂಬ ನಿಯಮವಿದೆ. ಹೀಗಿರುವಾಗ 2019ನೇ ಸಾಲಿನ ಎಫ್‌ಡಿಎ ಹುದ್ದೆಗಳ ನೇಮಕಾತಿ ಸಂಬಂಧ 2021ರ ಜನವರಿ 23ರಂದು ಕಡ್ಡಾಯ ಕನ್ನಡ ಭಾಷೆಯ ಲಿಖಿತ ಪರೀಕ್ಷೆ ನಡೆಸಲಾಗಿತ್ತು. ಆದರೆ, ಬಾರ್‌ಕೋಡ್‌ನಲ್ಲಿನ ತಾಂತ್ರಿಕ ದೋಷದಿಂದ ಎಲ್ಲ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಲು ಆಗದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.
ಮತ್ತೊಮ್ಮೆ ಪರೀಕ್ಷೆ ಇಲ್ಲ:
ರಾಜ್ಯದಲ್ಲಿ ಕೊರೋನಾ ಮೂರನೇ ಅಲೆಯ ಭೀತಿಯಲ್ಲಿ ಜನರಿದ್ದಾರೆ. ಹೀಗಾಗಿ ಕಡ್ಡಾಯ ಕನ್ನಡ ಭಾಷೆಗೆ ಅರ್ಜಿ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳಿಗೂ ಮತ್ತೊಮ್ಮೆ ಪರೀಕ್ಷೆ ಮಾಡದಿರಲು ನಿರ್ಧರಿಸಲಾಗಿದೆ. ಇದೇ ವೇಳೆ ಪರೀಕ್ಷಾ ಪ್ರಕ್ರಿಯೆ ಮುಂದುವರೆಸಲಾಗುವುದು. ಆದರೆ, ಕಡ್ಡಾಯ ಕನ್ನಡ ಭಾಷೆಯನ್ನು ಆಯ್ಕೆ ಮಾಡಿಕೊಂಡಿದ್ದೂ ಸಾಮಾನ್ಯ ಜ್ಞಾನ ಮತ್ತು ಸಾಮನ್ಯ ಕನ್ನಡ /ಇಂಗ್ಲೀಷ್ ವಿಷಯದಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳ ಮೂಲ ದಾಖಲೆಗಳನ್ನು ಪರಿಶೀಲನೆಗೆ ಅರ್ಹತಾ ಪಟ್ಟಿಪ್ರಕಟಿಸಲಾಗುವುದು. ಈ ಪಟ್ಟಿಯಲ್ಲಿನ ಅಭ್ಯರ್ಥಿಗಳಿಗೆ ಮಾತ್ರ ಮೀಸಲಾತಿ ನಿಯಮಗಳ ಪ್ರಕಾರ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ನಡೆಸಲಾಗುವುದು ಎಂದು ಕೆಪಿಎಸ್‌ಸಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
362 ಕೆಎಎಸ್ ನೇಮಕಕ್ಕೆ ಗಮನ ಹರಿಸಿ: ರಾಷ್ಟ್ರಪತಿ
ಗೊಂದಲ:
ಕಡ್ಡಾಯ ಕನ್ನಡ ಪರೀಕ್ಷೆಗಾಗಿ ಹಲವು ದಿನಗಳಿಂದ ಅಧ್ಯಯನ ನಡೆಸಲಾಗಿತ್ತು.ಆದರೆ, ಇದೀಗ ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ಅಲ್ಲದೆ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಕನ್ನಡ/ಇಂಗ್ಲಿಷ್ ವಿಷಯಗಳಲ್ಲಿ ಆಯ್ಕೆಯಾಗಿದ್ದರೆ ಮಾತ್ರ ಕಡ್ಡಾಯ ಕನ್ನಡ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಲಾಗಿದೆ. ಕೆಪಿಎಸ್‌ಸಿ ಈ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ ಎಂದು ಹಲವು ಅಭ್ಯರ್ಥಿಗಳು ಅಳಲು ತೋಡಿಕೊಂಡಿದ್ದಾರೆ.
ಕಡ್ಡಾಯ ಕನ್ನಡ ವಿಷಯದ ಉತ್ತರ ಪತ್ರಿಕೆಯ ಬಾರ್‌ಕೋಡ್‌ನಲ್ಲಿನ ತಾಂತ್ರಿಕ ದೋಷದಿಂದ ಪರೀಕ್ಷೆ ರದ್ದು ಮಾಡಲಾಗಿದೆ. ಆದರೆ, ಅರ್ಹತಾ ಪಟ್ಟಿಯಲ್ಲಿ ಕಡ್ಡಾಯ ಕನ್ನಡ ಭಾಷೆ ಆಯ್ಕೆ ಮಾಡಿಕೊಂಡಿರುವ ಅಭ್ಯರ್ಥಿಗಳಿದ್ದಲ್ಲಿ ಅಂತಹವರಿಗೆ ಮಾತ್ರ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುವುದು ಎಂದು ಕೆಪಿಎಸ್‌ಸಿ ಕಾರ್ಯದರ್ಶಿ ಜಿ.ಸತ್ಯವತಿ ತಿಳಿಸಿದ್ದಾರೆ.