Asianet Suvarna News Asianet Suvarna News

362 ಕೆಎಎಸ್‌ ನೇಮಕಕ್ಕೆ ಗಮನ ಹರಿಸಿ: ರಾಷ್ಟ್ರಪತಿ

* ಸಾಂವಿಧಾನಿಕ ಅಂಶ ಪರಿಗಣಿಸಿ ನೇಮಕ
* ಶಾಸಕರು ಬರೆದ ಪತ್ರಕ್ಕೆ ಕೋವಿಂದ್‌ ಸ್ಪಂದನೆ
* 10 ವರ್ಷ ಕಳೆದರೂ ನಡೆಯದ ನೇಮಕಾತಿ
 

President Ram Nath Kovind Instructs to Look into the Appointment of KAS grg
Author
Bengaluru, First Published Jul 19, 2021, 10:00 AM IST

ಬೆಂಗಳೂರು(ಜು.19): ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) 2011ನೇ ಸಾಲಿನ 362 ಗೆಜಿಟೆಡ್‌ ಪ್ರೊಬೇಷನರಿ ಹುದ್ದೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ಅಂಶಗಳನ್ನು ಪರಿಗಣಿಸಿ ಅಭ್ಯರ್ಥಿಗಳಿಗೆ ನೇಮಕಾತಿ ನೀಡಬೇಕು ಎಂದು ಹಲವು ಶಾಸಕರು ಬರೆದಿದ್ದ ಪತ್ರಕ್ಕೆ ಪ್ರತಿಕ್ರಿಯಿಸಿರುವ ರಾಷ್ಟ್ರಪತಿ ಭವನ, ಈ ಬಗ್ಗೆ ಸೂಕ್ತ ಗಮನಹರಿಸಲು ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. 

ಶಾಸಕರಾದ ಪಿ.ಆರ್‌.ರಮೇಶ್‌, ಈಶ್ವರ ಖಂಡ್ರೆ, ಮೋಹನ್‌ಕುಮಾರ್‌ ಕೊಂಡಜ್ಜಿ, ಆಯನೂರು ಮಂಜುನಾಥ್‌, ಆರಗ ಜ್ಞಾನೇಂದ್ರ, ಎ.ಟಿ.ರಾಮಸ್ವಾಮಿ ಸೇರಿದಂತೆ ಹಲವು ಶಾಸಕರು ಇತ್ತೀಚೆಗೆ ರಾಷ್ಟ್ರಪತಿಗಳಿಗೆ ಪತ್ರ ಬರೆದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರನ್ನು ಕೋರಿದ್ದರು. ಇದಕ್ಕೆ ರಾಷ್ಟ್ರಪತಿ ಭವನ ಸ್ಪಂದಿಸಿದೆ.

ಏನಿದು ವಿವಾದ?:

2011 ರಲ್ಲಿ ಕೆಪಿಎಸ್ಸಿಯು 362 ಗೆಜಿಟೆಡ್‌ ಪ್ರೊಬೇಷನರಿ ಹುದ್ದೆಗೆ ಅಧಿಸೂಚನೆ ಹೊರಡಿಸಿತ್ತು. ನಂತರ 2014ರ ಮಾರ್ಚ್‌ 21ರಂದು ಅಂತಿಮ ಆಯ್ಕೆ ಪಟ್ಟಿಪ್ರಕಟಿಸಿತ್ತು. ಜಾತಿ, ಹಣ ಮತ್ತಿತರ ಅಂಶಗಳು ಆಯ್ಕೆಯಲ್ಲಿ ಕೆಲಸ ಮಾಡಿವೆ. ಸದಸ್ಯರು ಅವ್ಯವಹಾರ ನಡೆಸಿದ್ದಾರೆ ಎಂಬ ಆರೋಪ ಆಗ ಕೇಳಿಬಂದಿತ್ತು. ಕೆಲ ಆಡಿಯೋಗಳೂ ಬಿಡುಗಡೆಯಾಗಿದ್ದವು. ಸಿಐಡಿ ತನಿಖೆ ನಡೆಸಿದಾಗ 40ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ 2014ರ ಆ.14ರಂದು ನೇಮಕಾತಿ ಪ್ರಕ್ರಿಯೆಯನ್ನೇ ರದ್ದುಗೊಳಿಸಿತ್ತು.

ಕರ್ನಾಟಕ ಲೋಕಸೇವಾ ಆಯೋಗಕ್ಕೆ (KPSC)ಇಬ್ಬರು ಸದಸ್ಯರುಗಳ ನೇಮಕ

ಇದನ್ನು ಪ್ರಶ್ನಿಸಿ ಆಯ್ಕೆಯಾಗಿದ್ದ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ(ಕೆಎಟಿ) ಪ್ರಶ್ನೆ ಮಾಡಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಕೆಎಟಿ ಅರ್ಜಿಯನ್ನು ಪರಿಗಣಿಸಿ 2016ರ ಅ. 19ರಂದು ಸರ್ಕಾರದ ಆದೇಶ ವಜಾಗೊಳಿಸಿತ್ತು. ಅಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡುವಂತೆ ನಿರ್ದೇಶಿಸಿತ್ತು.

ಕೆಎಟಿ ಆದೇಶವನ್ನು ಉದ್ಯೋಗ ವಂಚಿತ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ವಿಚಾರಣೆ ನಡೆಸಿದ್ದ ಹೈಕೋರ್ಟ್‌, 2017 ಮಾಚ್‌ರ್‍ 9ರಂದು ಸರ್ಕಾರದ ಕ್ರಮ ಎತ್ತಿ ಹಿಡಿದು ನೇಮಕಾತಿಯನ್ನು ರದ್ದುಪಡಿಸಿತ್ತು. ಈ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಕೆಲ ಅಭ್ಯರ್ಥಿಗಳು ಪ್ರಶ್ನಿಸಿದ್ದರು. ಆದರೆ, ಹೈಕೋರ್ಟ್‌ ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌, ಲಿಖಿತ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ ಎಂಬ ಬಗ್ಗೆ ಪರಿಶೀಲಿಸಿ ತೀರ್ಪು ನೀಡುವಂತೆ ಆದೇಶಿಸಿತ್ತು. ಲಿಖಿತ ಪರೀಕ್ಷೆಯ ಉತ್ತರ ಪತ್ರಿಕೆಗಳ ಮರು ಮೌಲ್ಯಮಾಪನ ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದ ಹೈಕೋರ್ಟ್‌ ಈ ಸಂಬಂಧ ಸಲ್ಲಿಕೆಯಾಗಿದ್ದ ಎಲ್ಲ ಮಧ್ಯಂತರ ಅರ್ಜಿಗಳನ್ನು 2019ರ ಜುಲೈ 13ರಂದು ವಜಾಗೊಳಿಸಿತ್ತು. ನಂತರ ಈ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿದ್ದ ವಿಶೇಷ ಮೇಲ್ಮನವಿನ್ನು 2019ರ ಆಗಸ್ಟ್‌ 9ರಂದು ಸುಪ್ರೀಂಕೋರ್ಟ್‌ ವಜಾಗೊಳಿಸಿತ್ತು.

ತಮ್ಮದಲ್ಲದ ತಪ್ಪಿಗೆ ಹಲವು ಅಭ್ಯರ್ಥಿಗಳಿಗೆ ಅನ್ಯಾಯವಾದುದನ್ನು ಮನಗಂಡ ಶಾಸಕರು, ಸಂವಿಧಾನಾತ್ಮಕವಾಗಿ ಹೇಗೆ ಕ್ರಮ ಕೈಗೊಳ್ಳಬಹುದು ಎಂಬ ಬಗ್ಗೆ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದು ಆಯ್ಕೆ ಪ್ರಕ್ರಿಯೆಗೆ ಅನುವು ಮಾಡಿಕೊಡುವಂತೆ ಮನವಿ ಮಾಡಿದ್ದರು.
 

Follow Us:
Download App:
  • android
  • ios