Government Employees ರಾಜ್ಯ ಸರ್ಕಾರಿ ನೌಕರರ ವಾರಕ್ಕೆ 5 ದಿನ ಕೆಲಸ ಆದೇಶ ವಾಪಸ್
* ತನ್ನ ನೌಕರರಿಗೆ ಮಹತ್ವದ ಸುತ್ತೋಲೆ ಹೊರಡಿಸಿದ ಕರ್ನಾಟಕ ಸರ್ಕಾರ
* ರಾಜ್ಯ ಸರ್ಕಾರಿ ನೌಕರರ ವಾರಕ್ಕೆ 5 ದಿನ ಕೆಲಸ ಆದೇಶ ವಾಪಾಸ್
* ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆ
ಬೆಂಗಳೂರು, (ಜ.27): ಕರ್ನಾಟಕದಲ್ಲಿ ವೀಕೆಂಡ್ ಕರ್ಫ್ಯೂ ಹಿಂಪಡೆದ ಬೆನ್ನಲ್ಲೇ ರಾಜ್ಯ ಸರ್ಕಾರಿ ನೌಕರರ ವಾರಕ್ಕೆ 5 ದಿನ ಕೆಲಸ ಆದೇಶ ವಾಪಾಸ್ ಪಡೆಯಲಾಗಿದೆ.
ಕೊರೋನಾ ಸೋಂಕಿನ ( Coronavirus ) ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರದಿಂದ ವೀಕೆಂಡ್ ಕರ್ಪ್ಯೂ ( Weekend Curfew ) ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ( Government Employees ) ವಾರದಲ್ಲಿ ಐದು ದಿನ ಮಾತ್ರ ಕೆಲಸ ಮಾಡಿ, ಶನಿವಾರದಂದು ರಜೆ ( Holiday) ನೀಡಲಾಗಿತ್ತು. ಇದೀಗ ವೀಕೆಂಡ್ ಕರ್ಪ್ಯೂ ವಾಪಸ್ ಪಡೆದಿದ್ದರಿಂದ ಸರ್ಕಾರಿ ನೌಕರರ ವಾರಕ್ಕೆ 5 ದಿನ ಕೆಲಸ ಆದೇಶ ವಾಪಾಸ್ ಪಡೆದಿದೆ. ಇದರೊಂದಿಗೆ ಇನ್ಮುಂದೆ ವಾರದ 6 ದಿನ ಕಾರ್ಯ ನಿರ್ವಹಿಸುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ.
Corona Update ಕರ್ನಾಟಕದಲ್ಲಿ ಕೊರೋನಾ ಇಳಿಕೆ, ಆದ್ರೂ ಶುರುವಾಯ್ತು ಮತ್ತೊಂದು ಆತಂಕ
ರಾಜ್ಯದಲ್ಲಿ ಕೋವಿಡ್-19 ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ದಿನಾಂಕ 04-01-2022ರಂದು ಎಲ್ಲಾ ಕಚೇರಿಗಳು ವಾರದಲ್ಲಿ ಐದು ದಿನ ಅಂದ್ರೆ ಸೋಮವಾರದಿಂದ ಶುಕ್ರವಾರದ ವರೆಗೆ ಕಾರ್ಯನಿರ್ವಹಿಸುವಂತೆ ಸೂಚಿಸಲಾಗಿತ್ತು. ಈ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ. ಈ ಮೂಲಕ ವಾರದ ಆರು ದಿನ ಎಲ್ಲಾ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ವೀಕೆಂಡ್ ಕರ್ಫ್ಯೂ ವಾಪಸ್
ವ್ಯಾಪಾರಿಗಳ ಆರ್ಥಿಕ ತೊಂದರೆ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಮಿ ಅವರು ವೀಕೆಂಡ್ ಕರ್ಫ್ಯೂ ವಾಪಸ್ ಪಡೆದುಕೊಂಡಿದ್ದರು. ಕೊರೋನಾ ಹೆಚ್ಚಳ ಮಧ್ಯೆಯೂ ವೀಕೆಂಡ್ ಕರ್ಫ್ಯೂ ಹಿಂಪಡೆದಿದ್ದಕ್ಕೆ ಪರ-ವಿರೋಧದ ಚರ್ಚೆಗಳು ಆಗಿದ್ದವು.
ಇನ್ನು ಬಿಜೆಪಿ ನಾಯಕರುಗಳೇ ವೀಕೆಂಡ್ ಕರ್ಫ್ಯೂಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಪ್ರಲ್ಹಾದ್ ಜೋಷಿ, ಸಿ.ಟಿ ರವಿ, ಪ್ರತಾಪ್ ಸಿಂಹ ಸೇರಿದಂತೆ ಇತರೆ ನಾಯಕರುಗಳು ವೀಕೆಂಡ್ ಕರ್ಫ್ಯೂ ಬೇಡ ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಒಂದು ವೇಳೆ ವೀಕೆಂಡ್ ಕರ್ಫ್ಯೂ ಮುಂದುವರೆಸಿದ್ರೆ, ಹೋಟೆಲ್, ಬಾರ್, ರೆಸ್ಟೋರೆಂಟ್ ಮಾಲೀಕರು ಬೀದಿಗಳಿಯಲು ಮುಂದಾಗಿದ್ದರೂ, ವೀಕೆಂಡ್ ಕರ್ಫ್ಯೂ ಇದ್ರೂ ತಮ್ಮ ಅಂಗಡಿಗಳನ್ನ ತೆಗೆಯಲು ನಿರ್ಧರಿಸಿದ್ದರು.
ಕೊರೋನಾ ಸೋಂಕು ಇಳಿಕೆ, ಸಾವಿನ ಸಂಖ್ಯೆ ಏರಿಕೆ
ಕರ್ನಾಟಕದಲ್ಲಿ (Karnataka) ಕೊರೋನಾ ಸೊಂಕಿನ (Coronavirus) ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಆದ್ರೆ, ಸೋಂಕಿನಿಂದ ಸಾವನ್ನಪ್ಪುತ್ತಿರುವವ ಸಂಖ್ಯೆ ಹೆಚ್ಚಳವಾಗುತ್ತಿರುವು ಆತಂಕ ಮೂಡಿಸಿದೆ.
ಹೌದು...ಕಳೆದ ಒಂದು ತಿಂಗಳಿನಿಂದ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದ ಕೊರೋನಾ ವೈರಸ್ ಇದೀಗ ಇಳಿಕೆಯತ್ತ ಸಾಗಿದೆ. ಆದ್ರೆ, ಇದೀಗ ದಿಢೀರ್ ಅಂತ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಗುರುವಾರ (ಜ.27) ಒಟ್ಟು 38,754 ಮಂದಿಯಲ್ಲಿ ಕೊವಿಡ್ ಸೋಂಕು ದೃಢಪಟ್ಟಿದ್ದು, 49 ಜನರು ಸಾವನ್ನಪ್ಪಿದ್ದಾರೆ. 67,236 ಜನರು ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಈವರೆಗೆ ಒಟ್ಟು 36,92,496 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ಈ ಪೈಕಿ 33,25,001 ಜನರು ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ 32,083 ಸಕ್ರಿಯ ಪ್ರಕರಣಗಳಿದ್ದು, ಪಾಸಿಟಿವಿಟಿ ಪ್ರಮಾಣ ಶೇ 20.44 ಹಾಗೂ ಸೋಂಕಿನಿಂದ ಸಾಯುವವರ ಸರಾಸರಿ ಶೇ 0.12 ಇದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.