ಪಿಎಸ್‌ಐ ನೇಮಕಾತಿ ಮರುಪರೀಕ್ಷೆಗೆ ಹೈಕೋರ್ಟ್‌ ಅಸ್ತು..!

ರಾಜ್ಯ ಸರ್ಕಾರವು ಸ್ವತಂತ್ರ ಸಂಸ್ಥೆಯಿಂದ ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಹೊಸದಾಗಿ ಪರೀಕ್ಷೆ ನಡೆಸಬಹುದು. ಈ ವೇಳೆ ಅಭ್ಯರ್ಥಿಗಳಿಗೆ ಯಾವುದೇ ಹೊಸ ಶುಲ್ಕ ವಿಧಿಸಬಾರದು. ನ್ಯಾಯಸಮ್ಮತವಾಗಿ ಮರು ಪರೀಕ್ಷೆ ನಡೆಯುವುದನ್ನು ಸರ್ಕಾರ ಖಾತರಿಪಡಿಸಬೇಕು ಎಂದು ಸರ್ಕಾರಕ್ಕೆ ತಿಳಿಸಿದ ನ್ಯಾಯಾಲಯ 
 

High Court of Karnataka Orders Reexamination of PSI Recruitment grg

ಬೆಂಗಳೂರು(ನ.11):  ನೇಮಕಾತಿ ಅಕ್ರಮ ಹಿನ್ನೆಲೆಯಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ಹುದ್ದೆಗೆ ನಡೆಸಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಅಲ್ಲದೆ, ರಾಜ್ಯ ಸರ್ಕಾರವು ಸ್ವತಂತ್ರ ಸಂಸ್ಥೆಯಿಂದ ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಹೊಸದಾಗಿ ಪರೀಕ್ಷೆ ನಡೆಸಬಹುದು. ಈ ವೇಳೆ ಅಭ್ಯರ್ಥಿಗಳಿಗೆ ಯಾವುದೇ ಹೊಸ ಶುಲ್ಕ ವಿಧಿಸಬಾರದು. ನ್ಯಾಯಸಮ್ಮತವಾಗಿ ಮರು ಪರೀಕ್ಷೆ ನಡೆಯುವುದನ್ನು ಸರ್ಕಾರ ಖಾತರಿಪಡಿಸಬೇಕು ಎಂದು ಸರ್ಕಾರಕ್ಕೆ ನ್ಯಾಯಾಲಯ ತಿಳಿಸಿದೆ.

ಪರೀಕ್ಷೆ ರದ್ದುಪಡಿಸುವ ಸರ್ಕಾರದ ಆದೇಶ ಹಿಂಪಡೆಯುವಂತೆ ಸೂಚಿಸಲು ಕೋರಿ ಎನ್.ವಿ. ಚಂದನ್ ಸೇರಿದಂತೆ ಆಯ್ಕೆಪಟ್ಟಿಯಲ್ಲಿ ಹೆಸರಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ತಕರಾರು ಅರ್ಜಿಗಳನ್ನು ವಜಾಗೊಳಿಸಿದ ಹಿರಿಯ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠ ಶುಕ್ರವಾರ ಈ ಆದೇಶ ಮಾಡಿದೆ.

ಪಿಎಸ್‌ಐ, ಡಿಸಿಸಿಬಿ ಹಗರಣಗಳಲ್ಲಿ ವಿಜಯೇಂದ್ರ, ರಾಘವೇಂದ್ರ ಕೈವಾಡ: ಬೇಳೂರು ಗೋಪಾಲಕೃಷ್ಣ

ಅರ್ಜಿದಾರರ ವಾದವೇನಿತ್ತು?:

ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಗೆ 54,103 ಮಂದಿ ಹಾಜರಾಗಿದ್ದರು. ಅದರಲ್ಲಿ 545 ಮಂದಿ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಯ್ಕೆಯಾಗಿದ್ದರು. ಆ ಪೈಕಿ 53 ಮಂದಿಯ ವಿರುದ್ಧ ತನಿಖಾಧಿಕಾರಿಗಳು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಇವರಲ್ಲಿ 52 ಮಂದಿಗೆ 2022ರ ಏ.6ರಂದು ಶೋಕಾಸ್ ನೋಟಿಸ್ ನೀಡಿ, 2023 ಜೂನ್ 20ರಂದು ಅವರನ್ನು ಡಿಬಾರ್ ಮಾಡಲಾಗಿದೆ. 53 ಮಂದಿ ಆರೋಪಿಗಳನ್ನು ಹೊರತುಪಡಿಸಿ ಉಳಿದವರ ವಿರುದ್ಧ ಯಾವುದೇ ಆರೋಪಗಳು ಇಲ್ಲ ಎಂದು ವಾದ ಮಂಡಿಸಿದ್ದರು.

ಅಲ್ಲದೆ, ಲಿಖಿತ ಪರೀಕ್ಷೆ ರದ್ದುಪಡಿಸುವ ವೇಳೆಗೆ ಕಳಂಕರಹಿತ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿತ್ತು. 171 ಮಂದಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ವಿತರಿಸಲು ಬಾಕಿಯಿತ್ತು. ಈ ನಡುವೆ ವಿವೇಚನಾರಹಿತವಾಗಿ, ಅಕ್ರಮವಾಗಿ, ಅಸಾಂವಿಧಾನಿಕವಾಗಿ ಮತ್ತು ಅತಾರ್ಕಿಕವಾಗಿ ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಲು ಸರ್ಕಾರ ಆದೇಶಿಸಿದೆ. ಕಳಂಕರಹಿತರನ್ನು ರಕ್ಷಿಸಲು ಲಿಖಿತ ಪರೀಕ್ಷೆ ರದ್ದುಪಡಿಸಿದ್ದ ಕ್ರಮ ಅನೂರ್ಜಿತಗೊಳಿಸಬೇಕು. ಅರ್ಜಿದಾರರಿಗೆ ನೇಮಕಾತಿ ಪತ್ರ ನೀಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿದ್ದರು.

ಸರ್ಕಾರದ ಪರ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ್‌ ಶೆಟ್ಟಿ ವಾದಿಸಿ, ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಲಿಖಿತ ಪರೀಕ್ಷೆಯನ್ನು ರದ್ದುಪಡಿಸಿ, ಹೊಸದಾಗಿ ನಡೆಸಲು ನಿರ್ಧರಿಸಲಾಗಿದೆ. ಇದರಲ್ಲಿ ಯಾವುದೇ ಲೋಪದೋಷವಿಲ್ಲ. ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅಭ್ಯರ್ಥಿಗಳ ಪೈಕಿ ಆರೋಪ ಎದುರಿಸುತ್ತಿರುವವರನ್ನು ಹೊರತುಪಡಿಸಿ ಉಳಿದವರಿಗೆ ಮಾತ್ರ ಪರೀಕ್ಷೆ ನಡೆಸಲಾಗದು ಎಂದು ಸ್ಪಷ್ಟಪಡಿಸಿದ್ದರು.

ಪ್ರಕರಣವೇನು?:

ಸಿವಿಲ್‌ ಪಿಎಸ್‌ಐ ಹುದ್ದೆಗಳ ಭರ್ತಿಗೆ 2021ರ ಜ.21ರಂದು ರಾಜ್ಯ ಪೊಲೀಸ್‌ ಇಲಾಖೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿತ್ತು. ದೈಹಿಕ ಪರಿಕ್ಷೆಯಲ್ಲಿ ಅರ್ಹತೆ ಪಡೆದವರಿಗೆ ರಾಜ್ಯದಾದ್ಯಂತ 92 ಕೇಂದ್ರಗಳಲ್ಲಿ 2021ರ ಅ.3ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. 2022ರ ಜ.19ರಂದು ಸಂಭಾವ್ಯ ಆಯ್ಕೆ ಪಟ್ಟಿ ಪ್ರಕಟಿಸಲಾಗಿತ್ತು. ಆಯ್ಕೆ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ದಾಖಲೆ ಪರಿಶೀಲನೆಗೆ ಹಾಗೂ ವೈದ್ಯಕೀಯ ಪರೀಕ್ಷಗೆ ಕರೆಯಲಾಗಿತ್ತು. ಈ ಮಧ್ಯೆ ಲಿಖಿತ ಪರಿಕ್ಷೆಯಲ್ಲಿ ಉತ್ತರ ಪತ್ರಿಕೆ ತಿದ್ದುಪಡಿ ಮಾಡಿರುವುದು ಸೇರಿದಂತೆ ಹಲವು ಅಕ್ರಮಗಳು ನಡೆದಿರುವುದು ಬಯಲಾಗಿತ್ತು.

ಇದರಿಂದ ಪಿಎಸ್‌ಐ ನೇಮಕಾತಿಗೆ ನಡೆಸಲಾಗಿದ್ದ ಲಿಖಿತ ಪರೀಕ್ಷೆ ರದ್ದುಪಡಿಸಿ, ಮರು ಪರೀಕ್ಷೆ ನಡೆಸುವುದಾಗಿ 2022ರ ಏ.29ರಂದು ಅಂದಿನ ಬಿಜೆಪಿ ಸರ್ಕಾರ ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಆಯ್ಕೆಯಾಗಿದ್ದ ಕೆಲ ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಗೆ (ಕೆಎಟಿ) ಅರ್ಜಿ ಸಲ್ಲಿಸಿದ್ದರು. ಅದನ್ನು 2022ರ ಜು.19ರಂದು ಕೆಎಟಿ ವಜಾಗೊಳಿಸಿತ್ತು. ಇದರಿಂದ ಅಭ್ಯರ್ಥಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಹೊಸದಾಗಿ ಲಿಖಿತ ಪರಿಕ್ಷೆ ನಡೆಸುವ ಸರ್ಕಾರದ ಆದೇಶಕ್ಕೆ 2022ರ ಸೆ.27ರಂದು ಮಧ್ಯಂತರ ತಡೆಯಾಜ್ಞೆ ನೀಡಿತ್ತು. ಆ ತಡೆಯಾಜ್ಞೆ ವಿಸ್ತರಣೆಯಾಗುತ್ತಾ ಬಂದಿದೆ. ಇದೀಗ ಅರ್ಜಿಗಳನ್ನು ವಜಾಗೊಳಿಸಿರುವ ಹೈಕೋರ್ಟ್‌, ಮರು ಪರೀಕ್ಷೆ ನಡೆಸಲು ಅನುಮತಿ ನೀಡಿದೆ.

ಪಿಎಸ್‌ಐ ಅಕ್ರಮ ನೇಮಕಾತಿ: ಎಡಿಜಿಪಿ ಅಮೃತ್‌ ಪೌಲ್‌ಗೆ ಬೇಲ್‌

ಏನಿದು ಪ್ರಕರಣ?

545 ಪಿಎಸ್‌ಐ ಹುದ್ದೆಗಳ ಭರ್ತಿಗೆ ಪೊಲೀಸ್‌ ಇಲಾಖೆ 2021ರ ಅ.3ರಂದು ಲಿಖಿತ ಪರೀಕ್ಷೆ ನಡೆದಿತ್ತು. ಸಂಭಾವ್ಯ ಆಯ್ಕೆಪಟ್ಟಿ ಕೂಡ ಪ್ರಕಟಗೊಂಡಿತ್ತು. ಆದರೆ ಈ ಪರೀಕ್ಷೆಯಲ್ಲಿ ಬೃಹತ್‌ ಪ್ರಮಾಣದಲ್ಲಿ ಅಕ್ರಮವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಲಿಖಿತ ಪರೀಕ್ಷೆ ರದ್ದುಗೊಳಿಸಿ, ಮರುಪರೀಕ್ಷೆಗೆ 2022ರ ಏ.29ರಂದು ಆದೇಶಿಸಿತ್ತು. ಇದರ ವಿರುದ್ಧ ಅಭ್ಯರ್ಥಿಗಳು ಕಾನೂನು ಸಮರ ಆರಂಭಿಸಿದ್ದರು.

ಕೋರ್ಟ್‌ ಹೇಳಿದ್ದೇನು?

- ಹೊಸದಾಗಿ ಪರೀಕ್ಷೆ ನಡೆಸುವ ಸರ್ಕಾರದ ಆದೇಶ ಪ್ರಶ್ನಿಸಿದ್ದ ಅರ್ಜಿಗಳು ವಜಾ
- ಸ್ವತಂತ್ರ ಸಂಸ್ಥೆಯಿಂದ ಸರ್ಕಾರ ಹೊಸದಾಗಿ ಪಿಎಸ್‌ಐ ಪರೀಕ್ಷೆ ನಡೆಸಬಹುದು
- ಈ ಪರೀಕ್ಷೆ ಸಂಬಂಧ ಅಭ್ಯರ್ಥಿಗಳಿಗೆ ಯಾವುದೇ ಹೊಸ ಶುಲ್ಕ ವಿಧಿಸಬಾರದು
- ನ್ಯಾಯಸಮ್ಮತವಾಗಿ ಮರುಪರೀಕ್ಷೆ ನಡೆಸುವುದನ್ನು ಸರ್ಕಾರ ಖಾತರಿಪಡಿಸಬೇಕು

Latest Videos
Follow Us:
Download App:
  • android
  • ios