ಸರ್ಕಾರಿ ನೇಮಕಾತಿ: ಹೆಚ್ಚು ಅಂಕ ಇದ್ದರೆ GMನಲ್ಲೇ ಹುದ್ದೆ
ಉತ್ತಮ ಅಂಕ ಗಳಿಸಿದ ಅಭ್ಯರ್ಥಿಯನ್ನು ಮೀಸಲಾತಿ ಬದಲು ಸಾಮಾನ್ಯ ವರ್ಗದಲ್ಲೇ ಪರಿಗಣಿಸಿ: ಹೈಕೋರ್ಟ್|ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ಸಂವಿಧಾನದ ಆಶಯ| ವಿಭಾಗೀಯ ನ್ಯಾಯಪೀಠ ಅಭಿಪ್ರಾಯ|
ವೆಂಕಟೇಶ್ ಕಲಿಪಿ
ಬೆಂಗಳೂರು(ನ.23): ಸರ್ಕಾರಿ ನೇಮಕಾತಿಗಳಲ್ಲಿ ಮೀಸಲು ಅಭ್ಯರ್ಥಿಯು ಸಾಮಾನ್ಯ ಮೆರಿಟ್ ವರ್ಗದ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸುವ ಸಾಮರ್ಥ್ಯ ಹೊಂದಿದ್ದರೆ, ಅವರನ್ನು ಸಾಮಾನ್ಯ ಮೆರಿಟ್ ವರ್ಗದಡಿಯೇ ನೇಮಕ ಮಾಡಬೇಕು ಹೊರತು ಮೀಸಲು ವರ್ಗದಡಿ ಪರಿಗಣಿಸಬಾರದು ಎಂದು ಹೈಕೋರ್ಟ್ ಆದೇಶಿಸಿದೆ. ಅಬಕಾರಿ ಇಲಾಖೆಯು 2012ರಲ್ಲಿ ವಾಹನ ಚಾಲಕ ಉದ್ಯೋಗಕ್ಕೆ ನಡೆಸಿದ್ದ ನೇಮಕಾತಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸಾಮಾಜಿಕ ತಾರತಮ್ಯಕ್ಕೆ ಒಳಗಾಗಿರುವರಿಗೆ ಮೀಸಲು ಕಲ್ಪಿಸುವ ಮೂಲಕ ಅವರ ಉನ್ನತಿಗೆ ಅವಕಾಶ ನೀಡುವಂತೆ ಮೀಸಲಾತಿಯ ಮೂಲ ತತ್ವವಾಗಿದೆ. ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸುವುದು ಸಂವಿಧಾನದ ಪರಿಚ್ಛೇದ 16(1)ರ ಆಶಯ. ನಮ್ಮ ದೇಶದಲ್ಲಿ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ನಿರ್ಧರಿಸುವುದಕ್ಕೆ ಜಾತಿಯೇ ಮಾನದಂಡ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನೇರ ನೇಮಕಾತಿ ಅಥವಾ ಸ್ಪರ್ಧಾತ್ಮಕ ನೇಮಕಾತಿ ನಡೆಸುವಾಗ ಮೆರಿಟ್ ಆಧಾರದ ಮೇಲೆ ಅಭ್ಯರ್ಥಿಗಳ ಪಟ್ಟಿತಯಾರಿಸಬೇಕು. ಮೆರಿಟ್ ಪಟ್ಟಿಯಿಂದ ಮೀಸಲು ಅಭ್ಯರ್ಥಿಗಳನ್ನು ಹೊರಗಿಡಬೇಕೆಂದು ಆಲೋಚಿಸಬಾರದು. ಮೀಸಲು ವರ್ಗಕ್ಕೆ ಸೇರಿದ ಅಭ್ಯರ್ಥಿಯು ಸಾಮಾನ್ಯ ಮೆರಿಟ್ ವರ್ಗದ ಅಭ್ಯರ್ಥಿಗಿಂತ ಉತ್ತಮ ಸ್ಥಾನ ಪಡೆದಿದ್ದಾಗ, ಸಾಮಾನ್ಯ ಮೆರಿಟ್ ವರ್ಗದ ಅಭ್ಯರ್ಥಿಗೆ ಸ್ಪರ್ಧೆ ನೀಡುವ ಸಾಮರ್ಥ್ಯ ಹೊಂದಿದ್ದರೆ ಆತನನ್ನು ಸಾಮಾನ್ಯ ಮೆರಿಟ್ ವರ್ಗಕ್ಕೆ ಮೀಸಲಾಗಿದ್ದ ಉದ್ಯೋಗಕ್ಕೆ ನಿಯೋಜಿಸಬೇಕು. ಅವರನ್ನು ಮೀಸಲು ಸ್ಥಾನಕ್ಕೆ ಪರಿಗಣಿಸಬಾರದು. ಇತರೆ ಅಭ್ಯರ್ಥಿಗಳನ್ನು ನಿಗದಿತ ವರ್ಗಕ್ಕೆ ಮೀಸಲಾಗಿರುವ ಉದ್ಯೋಗಕ್ಕೆ ಆಯ್ಕೆ ಮಾಡಬೇಕು. ಮೀಸಲು ಸೌಲಭ್ಯದ ಲಾಭವು ಮೀಸಲು ವರ್ಗದ ಮತ್ತೊಬ್ಬ ಅಭ್ಯರ್ಥಿಗೆ ಸಿಗಬೇಕು ಎಂದು ನ್ಯಾಯಪೀಠ ಆದೇಶಿಸಿದೆ.
ಇಷ್ಟು ದಿನದ ಬಿಸಿಯೂಟವನ್ನು ಮಕ್ಕಳಿಗೆ ಹೇಗೆ ತಲುಪಿಸುತ್ತೀರಿ?: ಹೈಕೋರ್ಟ್
ಪ್ರಕರಣವೇನು?:
ಅಬಕಾರಿ ಇಲಾಖೆ 2012ರಲ್ಲಿ ವಾಹನ ಚಾಲಕ ಉದ್ಯೋಗಕ್ಕೆ ಅರ್ಜಿ ಆಹ್ವಾನಿಸಿತ್ತು. ಅದರಲ್ಲಿ ಒಂದು ಉದ್ಯೋಗವು ಪರಿಶಿಷ್ಟವರ್ಗ (ಪುರುಷ ಮತ್ತು ಮಹಿಳೆ) ಮತ್ತೊಂದು ಉದ್ಯೋಗ ಸಮಾನ್ಯ ವರ್ಗದ ಮಹಿಳೆಗೆ ಮೀಸಲಿಡಲಾಗಿತ್ತು. ಸಾಮಾನ್ಯ ವರ್ಗದ ಮಹಿಳೆಯ ಮೀಸಲು ಉದ್ಯೋಗಕ್ಕೆ ಅರ್ಹ ಮಹಿಳೆಯ ಲಭ್ಯವಾಗದಿದ್ದರೆ ಆ ಉದ್ಯೋಗವನ್ನು ಪುರುಷರಿಂದ ಭರ್ತಿ ಮಾಡಬಹುದು ಎಂದು ತಿಳಿಸಲಾಗಿತ್ತು. ಅರ್ಹ ಮಹಿಳೆಯು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿರಲಿಲ್ಲ.
ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನವರಾದ ಪರಿಶಿಷ್ಟ ವರ್ಗಕ್ಕೆ ಸೇರಿದ ವಿಜಯ್ ಕುಮಾರ್ ಮುತ್ತಪ್ಪ ದಿಣ್ಣಿಮಾಣಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿ ಮೊದಲನೆ ಸ್ಥಾನದಲ್ಲಿದ್ದರು. ಇದೇ ಜಿಲ್ಲೆಯ ನವನಗರದವರಾದ ಹಾಗೂ ಪರಿಶಿಷ್ಟ ವರ್ಗದವರೇ ಆದ ನಾಗಾರಾಜ್ ಎರಡನೇ ಅತಿ ಹೆಚ್ಚು ಅಂಕ ಪಡೆದಿದ್ದರು. ಸಾಮಾನ್ಯ ವರ್ಗದ ಸಂಗಪ್ಪ ಭೀಮಪ್ಪ ಹೂಗಾರ ಅವರು ಮೂರನೇ ಸ್ಥಾನದಲ್ಲಿದ್ದರು.
ಹುದ್ದೆ ನೀಡುವಾಗ ಇಲಾಖೆಯು ಅತಿ ಹೆಚ್ಚು ಅಂಕ ಗಳಿಸಿದ್ದ ವಿಜಯಕುಮಾರ್ ಅವರನ್ನು ಪರಿಶಿಷ್ಟವರ್ಗಕ್ಕೆ ಮೀಸಲಾದ ಹುದ್ದೆಗೆ ಪರಿಗಣಿಸಿತು. ಮೆರಿಟ್ ಹುದ್ದೆಗೆ ಮೂರನೇ ಸ್ಥಾನದಲ್ಲಿದ್ದ ಸಾಮಾನ್ಯ ವರ್ಗಕ್ಕೆ ಸೇರಿದ ಸಂಗಪ್ಪ ಭೀಮಪ್ಪ ಅವರನ್ನು ಪರಿಗಣಿಸಿತು. ತನ್ಮೂಲಕ ಎರಡನೇ ಸ್ಥಾನದಲ್ಲಿದ್ದ ನಾಗರಾಜ್ ಅವರಿಗೆ ಹುದ್ದೆ ದೊರಕಿರಲಿಲ್ಲ.
ನಾಗರಾಜ್ ಅವರು ಇದನ್ನು ಕೆಎಟಿಯಲ್ಲಿ ಪ್ರಶ್ನಿಸಿದಾಗ, ‘ಸಂಗಪ್ಪ ಈಗಾಗಲೇ ಪ್ರೊಬೆಷನರಿ ಅವಧಿ ಪೂರೈಸಿದ್ದಾರೆ. ಅವರಿಗೆ ಸೇವಾ ಹಿರಿತನವಿದ್ದು, ನೇಮಕಾತಿ ತೊಂದರೆ ನೀಡುವುದು ವಿವೇಕಯುತವಲ್ಲ. ಹೀಗಾಗಿ, ಒಂದು ಸೂಪರ್ ನ್ಯೂಮೆರೆರಿ ಉದ್ಯೋಗ ಸೃಷ್ಟಿಸಿ ನಾಗರಾಜ್ ಅವರನ್ನು ನೇಮಿಸುವಂತೆ’ ಅಬಕಾರಿ ಇಲಾಖೆಗೆ ನಿರ್ದೇಶಿಸಿತ್ತು. ಇದನ್ನು ಇಲಾಖೆ ಹಾಗೂ ನಾಗರಾಜ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿ ಮೇನ್ಮನವಿ ಸಲ್ಲಿಸಿದರು.
ಹೈಕೋರ್ಟ್, ಹೆಚ್ಚು ಅಂಕ ಗಳಿಸಿದ್ದ ವಿಜಯ್ ಕುಮಾರ್ ಅವರನ್ನು ಸಾಮಾನ್ಯ ಮೆರಿಟ್ ವಿಭಾಗದಲ್ಲಿ ಪರಿಗಣಿಸಿ ಉದ್ಯೋಗ ನೀಡದೆ ಪರಿಶಿಷ್ಟವರ್ಗದ ಮೀಸಲಾತಿ ಅಡಿಯಲ್ಲಿ ಉದ್ಯೋಗ ನೀಡಿರುವ ಅಬಕಾರಿ ಇಲಾಖೆ ಕ್ರಮ ತಪ್ಪು. ಅವರನ್ನು ಸಾಮಾನ್ಯ ಮೆರಿಟ್ ವರ್ಗದ ಹುದ್ದೆ ನೀಡಬೇಕು. ನಾಗರಾಜ್ ಅವರನ್ನು ಪರಿಶಿಷ್ಟವರ್ಗಕ್ಕೆ ಮೀಸಲು ಉದ್ಯೋಗಕ್ಕೆ ನೇಮಿಸಬೇಕು. ಇನ್ನೂ ಸಂಗಪ್ಪನನ್ನು ನೇಮಕ ಮಾಡಲೇಬಾರದಾಗಿತ್ತು. ಸಂಗಪ್ಪ ಸೇವಾ ಹಿರಿತನ ಮತ್ತು ನೇಮಕಾತಿಗೆ ತೊಂದರೆ ಕೊಡದೆ ಸೂಪರ್ ನ್ಯೂಮೆರೆರಿ ಹುದ್ದೆ ಸೃಷ್ಟಿಸಿ ನಾಗರಾಜ್ ಅವರನ್ನು ನೇಮಿಸಲು ಕೆಎಟಿ ಹೊರಡಿದ ಆದೇಶವೂ ಅಕ್ರಮ. ಅಂತಹ ಆದೇಶ ಹೊರಡಿಸಲು ಕೆಎಟಿಗೆ ಅಧಿಕಾರ ಇಲ್ಲ ಹಾಗೂ ಆ ಆದೇಶಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂದು ಅಭಿಪ್ರಾಯಪಟ್ಟಿತು.
ನಂತರ ವಿಜಯ್ ಕುಮಾರ್ ಅವರ ನೇಮಕಾತಿಯನ್ನು ಸಾಮಾನ್ಯ ಮೆರಿಟ್ ವರ್ಗದಡಿ ಪರಿಗಣಿಸಬೇಕು. ಪರಿಶಿಷ್ಟವರ್ಗಕ್ಕೆ ಮೀಸಲು ಉದ್ಯೋಗಕ್ಕೆ ನಾಗರಾಜ್ ಅವರನ್ನು ನೇಮಿಸಬೇಕೆಂದು ಅಬಕಾರಿ ಇಲಾಖೆಗೆ ನಿರ್ದೇಶಿಸಿದ ಹೈಕೋರ್ಟ್, ಸಂಗಪ್ಪ ಅವರ ನೇಮಕಾತಿಯನ್ನು ರದ್ದುಪಡಿಸಿತು.