ಬೆಂಗಳೂರು(ನ.20): ಲಾಕ್‌ಡೌನ್‌ ವೇಳೆ ರಾಜ್ಯದಲ್ಲಿ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ಬಿಸಿಯೂಟ ಸ್ಥಗಿತ ಮಾಡಲಾದ ಇಷ್ಟು ದಿನಗಳ ಆಹಾರವನ್ನು ಒಟ್ಟಿಗೆ ಮಕ್ಕಳಿಗೆ ಹೇಗೆ ತಲುಪಿಸುತ್ತೀರಿ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನಿಸಿದೆ. ಲಾಕ್‌ಡೌನ್‌ ವೇಳೆ ಜನ ಸಾಮಾನ್ಯರಿಗೆ ಎದುರಾದ ಸಮಸ್ಯೆಗಳ ಪರಿಹರಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎ.ಎಸ್‌ ಓಕ ನೇತೃತ್ವದ ವಿಭಾಗೀಯ ಪೀಠ ಬುಧವಾರ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರಿ ವಕೀಲರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಅರ್ಹ ಮಕ್ಕಳಿಗೆ ಆಹಾರ ಪದಾರ್ಥ ತಲುಪಿಸುವ ಸೂಕ್ತ ಯೋಜನೆ ರೂಪಿಸಲಾಗುತ್ತದೆ ಎಂದು ಪ್ರಮಾಣಪತ್ರ ಸಲ್ಲಿಸಿದರು. ಇದಕ್ಕೆ ಸರ್ಕಾರದ ಯೋಜನೆ ಏನೆಂಬುದು ಪ್ರಮಾಣ ಪತ್ರದಲ್ಲಿ ಸಮರ್ಪಕವಾಗಿ ತಿಳಿಸಲಾಗಿಲ್ಲ. ಇಷ್ಟು ದಿನ ನೀಡದ ಆಹಾರ ಪದಾರ್ಥಗಳನ್ನು ಒಟ್ಟಿಗೆ ಮಕ್ಕಳಿಗೆ ಹೇಗೆ ತಲುಪಿಸುತ್ತೀರಿ? ಆಹಾರ ತಲುಪಿಸುವ ವಿಚಾರ ಮಕ್ಕಳು ಹಾಗೂ ಪೋಷಕರಿಗೆ ಹೇಗೆ ತಿಳಿಯುತ್ತದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಬಿಸಿಯೂಟ ಸ್ಥಗಿತಕ್ಕೆ ಹೈಕೋರ್ಟ್‌ ಗರಂ: ಸರ್ಕಾರದ ನಡೆಗೆ ನ್ಯಾಯಪೀಠ ಅಸಮಾಧಾನ

ಶಾಲೆಗಳು ಹಾಗೂ ಅಂಗನವಾಡಿಯಲ್ಲಿ ಹಾಲು-ಮೊಟ್ಟೆ ಪೂರೈಸುವ ವಿಚಾರದಲ್ಲಿ ಸರಿಯಾದ ಮಾಹಿತಿಯನ್ನು ಪ್ರಮಾಣ ಪತ್ರದಲ್ಲಿ ತಿಳಿಸಿಲ್ಲ ಎಂದು ನುಡಿಯಿತು. ಅಲ್ಲದೆ, ಆಹಾರ ಪದಾರ್ಥ ಹಂಚಿಕೆಯಲ್ಲಿ ಜಿಲ್ಲೆಗಳ ಮಧ್ಯೆ ಯಾವುದೇ ತಾರತಮ್ಯ ಮಾಡಬಾರದು. ಎಲ್ಲ ಜಿಲ್ಲೆಗಳಲ್ಲಿಯೂ ಅರ್ಹರಿಗೂ ಸಮಾನವಾಗಿ ಆಹಾರ ಪದಾರ್ಥವನ್ನು ಹಂಚಿಕೆ ಮಾಡಬೇಕು. ಈ ಎಲ್ಲ ವಿಚಾರಗಳ ಕುರಿತು ಸ್ಪಷ್ಟ ಮಾಹಿತಿಯೊಂದಿಗೆ ಹೊಸದಾಗಿ ಪ್ರಮಾಣಪತ್ರ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿದ ನ್ಯಾಯಪೀಠ, ವಿಚಾರಣೆಯನ್ನು ನ.23ಕ್ಕೆ ಮುಂದೂಡಿತು.