4600 ಕೆಎಸ್ಸಾರ್ಟಿಸಿ ಹುದ್ದೆ ನೇಮಕಾತಿ ನೆನೆಗುದಿಗೆ
* 2 ವರ್ಷದ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿತ್ತು
* ನೇಮಕಾತಿ ಆಗದ್ದರಿಂದ ಬಸ್ ಕಾರ್ಯಾಚರಣೆಗೆ ತೊಡಕು
* ನಿವೃತ್ತ ಚಾಲಕರ ಗುತ್ತಿಗೆ
ಬೆಂಗಳೂರು(ಜೂ.05): ಕಳೆದ ಎರಡು ವರ್ಷಗಳಿಂದ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ಸಹಾಯಕರ ನೇಮಕ ನಡೆಯದ ಪರಿಣಾಮ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬೇಡಿಕೆಗೆ ತಕ್ಕಂತೆ ಬಸ್‌ಗಳ ಕಾರ್ಯಚರಣೆ ಮಾಡಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ.
ಕೊರೋನಾ ಸೋಂಕು ಆರಂಭಕ್ಕೂ ಮುನ್ನ ಚಾಲಕರು, ನಿರ್ವಾಹಕರು ಮತ್ತು ತಾಂತ್ರಿಕ ವರ್ಗದ ಸಿಬ್ಬಂದಿ ಸೇರಿ ಒಟ್ಟು 4,600 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ನೇಮಕ ಪ್ರಕ್ರಿಯೆ ಪ್ರಾರಂಭಿಸುತ್ತಿದ್ದಂತೆ ಕೊರೋನಾ ಸೋಂಕು ಹೆಚ್ಚಾದ ಪರಿಣಾಮ ಬಸ್‌ಗಳ ಕಾರ್ಯಾಚರಣೆ ಕಡಿಮೆಯಾಯಿತು. ನೇಮಕಾತಿ ಪ್ರಕ್ರಿಯೆಗಳಿಗೆ ತಡೆ ಹಿಡಿಯುವಂತೆ ಸರ್ಕಾರ ಸೂಚಿಸಿತ್ತು. ಆದರೆ, ಎರಡು ವರ್ಷ ಕಳೆದರೂ ನೇಮಕಾತಿ ಪ್ರಕ್ರಿಯೆ ಪುನರಾರಂಭಿಸಲು ಸರ್ಕಾರ ಅನುಮತಿ ನೀಡಿಲ್ಲ. ಈ ಮಧ್ಯೆ ಕಳೆದ ಎರಡು ವರ್ಷಗಳಲ್ಲಿ 1500ಕ್ಕೂ ಹೆಚ್ಚು ಚಾಲಕರು ನಿವೃತ್ತಿ ಹೊಂದಿದ್ದಾರೆ. ಹಲವರು ಇತರೆ ನಿಗಮಗಳಿಗೆ ವರ್ಗಾವಣೆಯಾಗಿದ್ದಾರೆ. ಇದರಿಂದ ಬಸ್‌ಗಳ ಕಾರ್ಯಾಚರಣೆಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
IDBI Recruitment 2022; ಬರೋಬ್ಬರಿ 1,544 ಹುದ್ದೆಗಳ ಭರ್ತಿಗೆ ನೇಮಕಾತಿ
ಹಲವು ಬಾರಿ ಪತ್ರ:
ಅಗತ್ಯ ಸಿಬ್ಬಂದಿ ಇಲ್ಲದೇ ನಿಗಮದಲ್ಲಿ ಪ್ರಸ್ತುತ ಇರುವ 8200 ಮಾರ್ಗಗಳ ಕಾರ್ಯಚರಣೆಗೆ ಅಡ್ಡಿಯಾಗುತ್ತಿದೆ.ಆದ್ದರಿಂದ ನೇಮಕ ಪ್ರಕ್ರಿಯೆ ಮುಂದುವರೆಸಲು ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಹಲವು ಬಾರಿ ಬರೆದಿದ್ದೇವೆ. ಆದರೆ, ಈವರೆಗೂ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ನಿವೃತ್ತ ಚಾಲಕರ ಗುತ್ತಿಗೆ
ನೇಮಕಾತಿಗೆ ಅನುಮತಿ ನೀಡಿದರೂ ಸಿಬ್ಬಂದಿಯನ್ನು ತರಬೇತಿ ನೀಡಿ ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ 3 ತಿಂಗಳ ಅಗತ್ಯವಿದೆ. ಹೀಗಾಗಿ ಸಿಬ್ಬಂದಿ ಕೊರತೆಯಿರುವ ಮಾರ್ಗಗಳಿಗೆ ಬಸ್‌ಗಳ ಕಾರ್ಯಾಚರಣೆಗೆ ಮಾಡಲೇ ಬೇಕಾದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ನಿವೃತ್ತ ಚಾಲಕರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲಾಗುತ್ತಿದೆ. ಪ್ರತಿದಿನಕ್ಕೆ 1000 ರು.ಗಳ ಗೌರವ ಧನದೊಂದಿಗೆ ಕೆಎಸ್‌ಆರ್‌ಟಿಸಿಯ ಎಲ್ಲ ವಿಭಾಗಗಳಲ್ಲಿ 63 ವರ್ಷ ಮೀರದ ದೈಹಿಕವಾಗಿ ಸದೃಢವಾಗಿರುವವರನ್ನು ನೇಮಕ ಮಾಡಿಕೊಳ್ಳಲು ಸೂಚನೆ ನೀಡಿದ್ದು, ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ಅವರು ವಿವರಿಸಿದರು.
Bank of Baroda Recruitment 2022; ವಿವಿಧ ಹುದ್ದೆಗಳಿಗೆ ನೇಮಕಾತಿ
ನೇಮಕ ಅಧಿಸೂಚನೆ ಹೊರಡಿಸಿದ್ದ ಹುದ್ದೆಗಳು
ಚಾಲಕ ಕಂ ನಿರ್ವಾಹಕ- 3,745
ತಾಂತ್ರಿಕ ಸಹಾಯಕರು - 726
ಜಾಗೃತದಳ- 200
ಸಾರಿಗೆ ನಿಗಮಗಳ ಪುನಶ್ಚೇತಗೊಳಿಸುವ ಸಲುವಾಗಿ ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ್‌ಮೂರ್ತಿ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಸಮಿತಿ ನೀಡಿದ ವರದಿಯ ಆಧಾರದಲ್ಲಿ ಮುಂದಿನ ನೇಮಕಾತಿ ಪ್ರಕ್ರಿಯೆಗಳು ಮುಂದುವರೆಯಬಹುದು ಅಂತ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು(ಉಸ್ತುವಾರಿ) ಶಿವಯೋಗಿ ಸಿ. ಕಳಸದ್ ತಿಳಿಸಿದ್ದಾರೆ.