ಸಚಿವ ಪ್ರಿಯಾಂಕ್ ಖರ್ಗೆ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ ಸಿಎಂ ಸಿದ್ದರಾಮಯ್ಯ: ನೂರಾರು ನೌಕರರ ವಜಾ!
ಎಐಸಿಸಿ ಅಧ್ಯಕ್ಷರ ಮಗನೆಂಬ ಮುಲಾಜನ್ನೂ ನೋಡದೇ ಸಚಿವ ಪ್ರಿಯಾಂಕ್ ಖರ್ಗೆಯವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸಿಎಂ ಸಿದ್ದರಾಮಯ್ಯ ಮೇಜರ್ ಸರ್ಜರಿ ಮಾಡಿದ್ದಾರೆ.
ಬೆಂಗಳೂರು (ಜ.23): ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಎಐಸಿಸಿ ಅಧ್ಯಕ್ಷರ ಮಗನೆಂಬ ಮುಲಾಜನ್ನೂ ನೋಡದೇ ಸಚಿವ ಪ್ರಿಯಾಂಕ್ ಖರ್ಗೆಯವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇಜರ್ ಸರ್ಜರಿಯನ್ನು ಮಾಡಿದ್ದಾರೆ.
ದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯೂ ಆಗಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಪುತ್ರನೆಂಬ ಕಾರಣಕ್ಕೆ ರಾಜ್ಯ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರನ್ನಾಗಿ ಮಾಡಲಾಗಿದೆ. ಈ ಬಗ್ಗೆ ಹಲವು ಹಿರಿಯ ಕಾಂಗ್ರೆಸ್ ಶಾಸಕರು ಭಾರಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೆ, ಇದಕ್ಕೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಯಾವುದೇ ಸೊಪ್ಪು ಹಾಕಲಿಲ್ಲ. ಆದರೆ, ರಾಜ್ಯದಲ್ಲಿ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಲ್ಲಿ ಸುಖಾಸುಮ್ಮನೆ ಅಸ್ತಿತ್ವದಲ್ಲಿದ್ದ ಹುದ್ದೆಗಳನ್ನು ಸೃಜಿಸಿ, ನಿವೃತ್ತ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು.ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಿವೃತ್ತ ಅಧಿಕಾರಿಗಳದ್ದೇ ಕಾರುಬಾರು ಆಗಿತ್ತು. ಇದರಿಂದ ಇಲಾಖೆಯ ಹಾಲಿ ಸರ್ಕಾರಿ ನೌಕರರು ಬೇಸತ್ತು ಹೋಗಿದ್ದರು. ಜೊತೆಗೆ, ಸರ್ಕಾರಕ್ಕೆ ಭಾರಿ ನಷ್ಟವಾಗುತ್ತಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿತ್ತು.
ಹಿರೇಮಗಳೂರು ಅರ್ಚಕ ಕಣ್ಣನ್‌ಗೆ ನೀಡಿದ್ದ ನೋಟಿಸ್ ವಾಪಸಾತಿಗೆ ಆದೇಶಿಸಿದ ಸಚಿವ ರಾಮಲಿಂಗಾರೆಡ್ಡಿ!
ಎಲ್ಲ ಮಾಹಿತಿಯನ್ನು ಪಡೆದು ಸರ್ಕಾರದ ಮುಖ್ಯ ಕಾರ್ಯದರ್ಶಿಯೊಂದಿಗೆ ಚರ್ಚೆ ಮಾಡಿದಾದ ಈ ಬಗ್ಗೆ ಸತ್ಯಾಸತ್ಯತೆ ತಿಳಿದುಬಂದಿದೆ. ಆದ್ದರಿಂದ ಸರ್ಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ/ ಸಚಿವಾಲಯದಲ್ಲಿ ಸರ್ಕಾರಿ ಸೇವೆಯಿಂದ ನಿವೃತ್ತಿ ಹೊಂದಿದ ಅಧಿಕಾರಿ/ನೌಕರರನ್ನು ಸಂವಿಧಾನದಲ್ಲಿರದ ಅನಗತ್ಯ ಹುದ್ದೆಗಳನ್ನು ಸೃಜಿಸಿ ಸಮಾಲೋಚಕರು/ ವಿಶೇಷ ಸಂಪನ್ಮೂಲ ವ್ಯಕ್ತಿಯೆಂದು ಗ್ರೂಪ್-ಎ ಹಾಗೂ ಇತರೆ ಹುದ್ದೆಗಳಿಗೆ ಗುತ್ತಿಗೆ/ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗಿದೆ. ನಿವೃತ್ತ ನೌಕರರಿಗೆ ಹೆಚ್ಚು ವೇತನ, ವಾಹನ ಸೇರಿ ಇತರೆ ಸೌಲಭ್ಯ ನೀಡುತ್ತಿದ್ದು, ಸರ್ಕಾರಕ್ಕೆ ಭಾರಿ ಪ್ರಮಾಣದ ಆರ್ಥಿಕ ನಷ್ಟ ಉಂಟಾಗುತ್ತಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಆಕ್ರೋಶಗೊಂಡಿದ್ದಾರೆ.
ನಿವೃತ್ತ ನೌಕರರಿಂದ ಸರ್ಕಾರಕ್ಕೆ ಆರ್ಥಿಕ ನಷ್ಟ ಜೊತೆಗೆ ಕಾರ್ಯಕ್ಷಮತೆ ಗುಣಮಟ್ಟ ಹಾಗೂ ಉತ್ತರದಾಯಿತ್ವದ ಕೊರತೆಯೂ ಎದ್ದು ಕಾಣುತ್ತಿದೆ. ಆದ್ದರಿಂದ ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಲ್ಲಿನ ಅನಗತ್ಯ ಹುದ್ದೆಗಳನ್ನು ತೆರವುಗೊಳಿಸಿ ಹಾಲಿ ಸರ್ಕಾರಿ ನೌಕರರನ್ನು ನಿಯೋಜನೆ ಮಾಡಬೇಕು. ಜೊತೆಗೆ, ಹಾಲಿ ಗುತ್ತಿಗೆ/ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ/ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆ ಮಾಡಬೇಕು ಎಂದು ಆದೇಶ ಹೊರಡಿಸಿದ್ದಾರೆ.
ಬಿಯರ್ ರೇಟ್ ಮತ್ತೆ ಹೆಚ್ಚಿಸಲಿದೆ ಸರ್ಕಾರ: ವರ್ಷಕ್ಕೆ ಎಷ್ಟುಬಾರಿ ಬೆಲೆ ಏರಿಸ್ತೀರಾ?
ಆದ್ದರಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ/ ಸಚಿವಾಲಯ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಾಲಿ ಗುತ್ತಿಗೆ/ಹೊರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ನಿವೃತ್ತ ಸರ್ಕಾರಿ ಅಧಿಕಾರಿ/ನೌಕರರನ್ನು ಕೂಡಲೇ ಸೇವೆಯಿಂದ ಬಿಡುಗಡೆಗೊಳಿಸಲಾಗುತ್ತದೆ. ಜೊತೆಗೆ, ಆಯಾ ಸ್ಥಾನಗಳಿಗೆ ಹಾಲಿ ನೌಕರರನ್ನು ನಿಯೋಜನೆ ಮಾಡಿ ಅಗತ್ಯ ಕ್ರಮಗಳನ್ನು ಕೈಗೊಂಡು, ಕ್ರಮದ ವರದಿಯನ್ನು ಕೂಡಲೇ ಮುಖ್ಯ ಕಾರ್ಯದರ್ಶಿ ಕಚೇರಿಗೆ ಕಳುಹಿಸುವಂತೆ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್ ಅವರು ಆದೇಶ ಹೊರಡಿಸಿದ್ದಾರೆ.