Asianet Suvarna News Asianet Suvarna News

ಕೆಲಸ ಹುಡುಕ್ತಾ ಇರೋರಿಗೆ ಗುಡ್‌ ನ್ಯೂಸ್‌, ರಾಜ್ಯದಲ್ಲಿ ಖಾಲಿ ಇರುವ 34,863 ಹುದ್ದೆ ಭರ್ತಿಗೆ ಸಿಎಂ ಸೂಚನೆ!

ರಾಜ್ಯದಲ್ಲಿ ಖಾಲಿ ಇರುವ 34,863 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ನೇಮಕಾತಿ ಪ್ರಕ್ರಿಯೆಯಲ್ಲಿ ಸಮಗ್ರ ಸುಧಾರಣೆಗೆ ಮತ್ತು ಕೆಇಎ ಮೂಲಕ ಗ್ರೂಪ್ ಸಿ ಹುದ್ದೆಯ ನೇಮಕಾತಿ ನಡೆಸಲು ಸಿಎಂ ಚಿಂತನೆ ನಡೆಸಿದ್ದಾರೆ.

CM Siddaramaiah Order to fill 34863 vacant posts in the state san
Author
First Published Oct 7, 2024, 6:53 PM IST | Last Updated Oct 7, 2024, 6:53 PM IST

ಬೆಂಗಳೂರು (ಅ.7): ರಾಜ್ಯದಲ್ಲಿ ಈಗಾಗಲೇ ಹಲವು ನೇಮಕಾತಿ ಪರೀಕ್ಷೆ ನಡೆದಿದ್ದು, ಈ ಪೈಕಿ ಕೆಲವು ಪರೀಕ್ಷೆಗಳ ಪ್ರಶ್ನೆಪತ್ರಿಕೆ ಲೀಕ್‌, ಅವ್ಯವಹಾರ ಆರೋಪದ ಮೇಲೆ ರದ್ದು ಮಾಡಲಾಗಿದೆ. ಕೆಲವು ಪರೀಕ್ಷೆಗಳು ನಡೆದಿದ್ದರೂ ಈವರೆಗೂ ಫಲಿತಾಂಶ ಕೂಡ ಪ್ರಕಟವಾಗಿಲ್ಲ. ಇದರ ನಡುವೆ ಸಿಎಂ ಸಿದ್ದರಾಮಯ್ಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 34, 863 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವಂತೆ ಸೂಚನೆ ನೀಡಿದ್ದಾರೆ. ಸರ್ಕಾರಿ ನೇಮಕಾತಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಈ ಸೂಚನೆ ನೀಡಿದ್ದಾರೆ. ಕಾಲಮಿತಿಯಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿಸಬೇಕು ಎಂದೂ ಸೂಚನೆಗಳನ್ನು ನೀಡಲಾಗಿದೆ. ಅದರೊಂದಿಗೆ  ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆಗೆ ಸಿಎಂ ಸಿದ್ಧರಾಮಯ್ಯ ನಿರ್ದೇಶನ ನೀಡಿದ್ದಾರೆ. ಕೆಇಎ ಮೂಲಕ ಗ್ರೂಪ್ ಸಿ ಹುದ್ದೆಯ ನೇಮಕಾತಿ ನಡೆಸಲು ಸಿಎಂ ಸಿದ್ದರಾಮಯ್ಯ ಚಿಂತನೆ ಮಾಡಿದ್ದಾರೆ. ನೇಮಕಾತಿಗಾಗಿ ಏಕರೂಪ ಕ್ಯಾಲೆಂಡರ್ ಸಿದ್ಧಪಡಿಸಲು ಸಿದ್ಧರಾಮಯ್ಯ ಸೂಚನೆ ನೀಡಿದ್ದಾರೆ. ನೇಮಕಾತಿಗೆ ತೊಂದರೆಯಾಗಿರುವ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಗೆ ಸೂಚನೆ ನೀಡಿದ್ದಾರೆ.

ವಿವಿಧ ಇಲಾಖೆಗಳಲ್ಲಿ ಖಾಲಿಯಿರುವ 34,863 ಹುದ್ದೆಗಳನ್ನು ತುಂಬಲು ಕಾಲ ಮಿತಿಯನ್ನು ನಿಗದಿಪಡಿಸಿಕೊಂಡು ನೇಮಕಾತಿ ಪ್ರಕ್ರಿಯೆ ನಡೆಸಬೇಕು. ಅಗತ್ಯ ಸೇವೆಗಳ ಇಲಾಖೆಗಳಲ್ಲಿ ನೇಮಕಾತಿಗೆ ಆದ್ಯತೆ ನೀಡಬೇಕು. 371ಜೆ ಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವ ಕುರಿತು 2023ರಲ್ಲಿ ಹೊರಡಿಸಿರುವ ಸುತ್ತೋಲೆಯನ್ನು ಅನುಸರಿಸುವ ಕುರಿತು ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ನೇಮಕಾತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ ತಂದು ಯುಪಿಎಸ್‌ಸಿ ಮಾದರಿಯಲ್ಲಿ ಏಕರೀತಿಯ ನೇಮಕಾತಿ ವ್ಯವಸ್ಥೆಯನ್ನು ಜಾರಿಗೊಳಿಸುವ ಕುರಿತು  ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.

ನೇಮಕಾತಿ ಪ್ರಕ್ರಿಯೆಯಲ್ಲಿ ಸುಧಾರಣೆ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ಕಳೆದ ವಾರ ಎಲ್ಲಾ ನೇಮಕಾತಿ ಪ್ರಾಧಿಕಾರಗಳ ಸಭೆಯನ್ನು ನಡೆಸಲಾಗಿದೆ. ಸಭೆಯಲ್ಲಿ ಕೈಗೊಂಡಿರುವ ಶಿಫಾರಸುಗಳನ್ನು ಪರಿಶೀಲಿಸಿ ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಬೇಕು. ಯುಪಿಎಸ್‌ಸಿಯಲ್ಲಿ ಕೇವಲ ಗ್ರೂಪ್‌ ಎ ಮತ್ತು ಗ್ರೂಪ್‌ ಬಿ ಹುದ್ದೆಗಳನ್ನು ಮಾಡಲು ನೇಮಕಾತಿ ಮಾಡಲಾಗುತ್ತಿದೆ. ಇದೇ ರೀತಿ ಕೆಪಿಎಸ್‌ಸಿ ಕೇವಲ ಗ್ರೂಪ್‌ ಎ ಮತ್ತು ಬಿ ಮಾತ್ರ ನೇಮಕಾತಿ ಪ್ರಕ್ರಿಯೆ ನಡೆಸಿ, ಗ್ರೂಪ್‌ ಸಿ ಯಂತಹ ಬೇರೆ ನೇಮಕಾತಿಗಳನ್ನು ಕೆಇಎ ಮೂಲಕ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ.  ಕೇರಳ ಮಾದರಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸುವ ಕುರಿತು ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ.

ನೇಮಕಾತಿ ಕುರಿತಾಗಿ ವಾರ್ಷಿಕ ಕ್ಯಾಲೆಂಡರ್‌ ಸಿದ್ಧಪಡಿಸಲು ಇರುವ ತೊಡಕುಗಳನ್ನು ನಿವಾರಿಸಬೇಕು. ಆರ್ಥಿಕ ವರ್ಷದ ಆರಂಭದಲ್ಲಿ ಆಯಾ ಇಲಾಖೆಗಳು ನೇಮಕಾತಿಗೆ ಖಾಲಿಯಿರುವ ಹುದ್ದೆಗಳ ಕುರಿತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಕಳುಹಿಸಬೇಕು. ಕಾಲಮಿತಿಯೊಳಗಾಗಿ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಂಡು ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತಾಗಿ ಏಕರೀತಿಯ ಕ್ಯಾಲೆಂಡರ್‌ ಸಿದ್ಧಪಡಿಸಬೇಕು. ಪಿಎಸ್‌ಐ ನೇಮಕಾತಿಯಲ್ಲಿ ದೈಹಿಕ ಪರೀಕ್ಷೆಯನ್ನು ಮೊದಲು ನಡೆಸಲಾಗುತ್ತಿದ್ದು, ಅಬಕಾರಿ ಇಲಾಖೆ ನೇಮಕಾತಿಯಲ್ಲಿ ಲಿಖಿತ ಪರೀಕ್ಷೆಯನ್ನು ಮೊದಲು ಮಾಡಲಾಗುತ್ತದೆ. ಅಬಕಾರಿ ಇಲಾಖೆ ಮಾದರಿಯನ್ನು ಪಿಎಸ್‌ಐ ನೇಮಕಾತಿಯಲ್ಲೂ ಅನುಸರಿಸುವ ಕುರಿತು ಪರಿಶೀಲನೆ ನಡೆಸಬೇಕು. ರಾಜ್ಯದಲ್ಲಿ 41 ಇಲಾಖೆಗಳ ವೃಂದ ಮತ್ತು ನೇಮಕಾತಿ ನಿಯಮ ತಿದ್ದುಪಡಿಯಾಗದ ಕಾರಣ ನೇಮಕಾತಿ ವಿಳಂಬವಾಗುತ್ತಿದೆ. ಕೆಲವು ಇಲಾಖೆಗಳಲ್ಲಿ ಹಲವು ದಶಕಗಳಿಂದ ಸಿ ಅಂಡ್‌ ಆರ್‌ ತಿದ್ದುಪಡಿಯಾಗಲಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳಿಗೆ ಅನುಕೂಲವಾಗುವಂತೆ ಮಾದರಿ ಸಿ ಅಂಡ್‌ ಆರ್‌ ಸಿದ್ಧಪಡಿಸಬೇಕು ಎಂದು ಸೂಚನೆ ನೀಡಿದ್ದಾರೆ.

ದೀಪಾವಳಿ ಧಮಾಕಾ: ಕೇಂದ್ರ ಸರ್ಕಾರಿ ನೌಕರರಿಗೆ ಡಿಎ ಹೆಚ್ಚಳ?

ಕಿದ್ವಾಯಿ ಆರ್ಥಿಕ ಸಲಹೆಗಾರ ರಘು ಅಮಾನತು: ಕೋವಿಡ್ ಅವಧಿಯಲ್ಲಿ ಅಕ್ರಮ ಎಸಗಿದ ಆರೋಪದಲ್ಲಿ ಕಿದ್ವಾಯಿ ಸಂಸ್ಥೆ ಆರ್ಥಿಕ ಸಲಹೆಗಾರ ಜಿ.ಪಿ. ರಘು ಅವರನ್ನು ಸರ್ಕಾರ ಅಮಾನತು ಮಾಡಿದೆ. ಸರ್ಕಾರದ ಅನುಮೋದನೆ ಇಲ್ಲದೇ ಪಿಪಿಇ ಕಿಟ್ ಖರೀದಿ ಮಾಡಿದ ಆರೋಪ ಅವರ ಮೇಲೆ ಹೊರಿಸಲಾಗಿದೆ. ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆ ನೀಡಲಾಗಿದೆ. ಜಿ.ಪಿ.ರಘು ಅಮಾನತು ಮಾಡಿ ಸರ್ಕಾರ ಆದೇಶ ಕೂಡ ಹೊರಡಿಸಿದೆ.

ISRO ನಲ್ಲಿ ಕೆಲಸ ಪಡೆಯುವ ಸುವರ್ಣಾವಕಾಶ, 2ಲಕ್ಷದವರೆಗೆ ವೇತನ!

Latest Videos
Follow Us:
Download App:
  • android
  • ios