ಬ್ಲೂಟೂತ್‌ ಬಳಕೆ, ಒಎಂಆರ್‌ ಶೀಟ್‌ ತಿದ್ದುಪಡಿ ಬಗ್ಗೆ ಖಚಿತ ಸುಳಿವು ಪಿಎಸ್‌ಐ ಅಕ್ರಮ ತನಿಖೆ ವೇಳೆ ಪತ್ತೆ ವಿವರ ಸಂಗ್ರಹಕ್ಕೆ ಇಳಿದ ಸಿಐಡಿ

ಆನಂದ್‌ ಎಂ.ಸೌದಿ

 ಯಾದಗಿರಿ (ಜು.11): ಪಿಎಸ್‌ಐ ಅಕ್ರಮದ ತನಿಖೆ ನಡೆಸುತ್ತಿರುವ ಸಿಐಡಿ ತಂಡಕ್ಕೆ ಕಳೆದ ವರ್ಷ ಫೆ.28ರಂದು ನಡೆದಿದ್ದ 1147 ಹುದ್ದೆಗಳ ಎಫ್‌ಡಿಎ (ಪ್ರಥಮ ದರ್ಜೆ ಸಹಾಯಕ) ಪರೀಕ್ಷೆಯಲ್ಲೂ ಬ್ಲೂಟೂತ್‌ ಬಳಕೆ ಹಾಗೂ ಒಎಂಆರ್‌ ಶೀಟ್‌ ತಿದ್ದಿ ಅಕ್ರಮ ನಡೆಸಿರುವ ಕುರಿತು ಖಚಿತ ಸುಳಿವುಗಳು ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಈ ಅಕ್ರಮದ ತನಿಖೆಯನ್ನೂ ಸಿಐಡಿ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.

ಪಿಎಸ್‌ಐ ಅಕ್ರಮದ ತನಿಖೆಯ ವಿಚಾರಣೆಯ ಕೆಲ ಸಂದರ್ಭಗಳಲ್ಲಿ ಎಫ್‌ಡಿಎ ಪರೀಕ್ಷೆಯಲ್ಲೂ ಬ್ಲೂಟೂತ್‌ ಅಕ್ರಮದ ವಾಸನೆ ಮೂಡಿದ್ದರಿಂದ, ಸಿಐಡಿ ಅಧಿಕಾರಿಗಳ ತಂಡ ಸದ್ದಿಲ್ಲದೆ ಎಫ್‌ಡಿಎ ಅಕ್ರಮವನ್ನೂ ಬಯಲು ಮಾಡುವ ಕಾರ್ಯಕ್ಕಿಳಿದಿದೆ. ಪಿಎಸ್‌ಐ ತನಿಖೆಯ ಆಳಕ್ಕಿಳಿದಾಗ, ಎಫ್‌ಡಿಎ ಪರೀಕ್ಷೆಯಲ್ಲೂ ಬ್ಲೂಟೂತ್‌ ದುರ್ಬಳಕೆ ಆಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೆಸರೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

PSI Scam: ನಾನು ತಪ್ಪು ಮಾಡಿಲ್ಲವೆಂದೇ ಅಮೃತ್‌ ಪಾಲ್‌ ವಾದ, ಸ್ನೇಹಿತನ ಮನೆಗೆ ಸಿಐಡಿ ದಾಳಿ

ಶಿಕ್ಷಣ ಇಲಾಖೆ ಮೂಲಗಳಿಂದ ‘ಕನ್ನಡಪ್ರಭ’ಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ಫೆ.28ರಂದು ನಡೆದ ಎಫ್‌ಡಿಎ/ಎಸ್‌ಡಿಎ ಪರೀಕ್ಷಾ ಕೇಂದ್ರಗಳ ವಿವರ ನೀಡುವಂತೆ ಪತ್ರ ಬರೆದಿರುವ ಕಲಬುರಗಿಯ ಸಿಐಡಿ ಡಿವೈಎಸ್ಪಿ ಶಂಕರಗೌಡ ಪಾಟೀಲ್‌, ನಾಲ್ಕು ಅಂಶಗಳ ವಿವರಗಳನ್ನು ಕೋರಿದ್ದಾರೆ. ಪರೀಕ್ಷಾ ಕೇಂದ್ರಗಳನ್ನು ಯಾರು ಆಯ್ಕೆ ಮಾಡಿದ್ದಾರೆ, ಅವುಗಳ ವಿವರ, ಕೇಂದ್ರದಲ್ಲಿನ ಕೊಠಡಿಗಳ ಸಂಖ್ಯೆ, ರೋಲ್‌ ನಂಬರ್‌ಗಳು ಹಾಗೂ ಪರೀಕ್ಷಾ ಕೇಂದ್ರಗಳ ಕೊಠಡಿಗಳ ಪರಿವೀಕ್ಷಕರ ಮಾಹಿತಿ ಕೇಳಿದ್ದಾರೆ.

ಮುಂದೂಡಲಾಗಿತ್ತು ಪರೀಕ್ಷೆ: ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಎಫ್‌ಡಿಎ/ಎಸ್‌ಡಿಎ ಪರೀಕ್ಷೆ ಮೊದಲು ನಿಗದಿಯಾಗಿದ್ದು ಜ.24 ರಂದು. ಆದರೆ, ಪರೀಕ್ಷೆಯ ಒಂದು ದಿನ ಮೊದಲೇ ಬೆಂಗಳೂರಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರಿಂದ, ಫೆ.28ಕ್ಕೆ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಪ್ರಶ್ನೆಪತ್ರಿಕೆ ಸೋರಿಕೆ ಸಂಬಂಧ ಆಯೋಗದ ಸಿಬ್ಬಂದಿ ಸೇರಿ 18 ಜನರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದರು.

ಅಚ್ಚರಿ ಎಂದರೆ, ಫೆ.28ರಂದು ನಡೆದ ಪರೀಕ್ಷೆಯಲ್ಲೂ ವಿಜಯಪುರದ ಕೇಂದ್ರವೊಂದರಲ್ಲಿ ಅಭ್ಯರ್ಥಿಯೊಬ್ಬನ ಕೈಗೆ ಸಿಬ್ಬಂದಿ ನೀಡಿದ್ದ ನಕಲು ಚೀಟಿ ವಿವಾದ ಸೃಷ್ಟಿಸಿತ್ತು. ನಕಲು ಚೀಟಿ ಪಡೆದ ಅಭ್ಯರ್ಥಿಯನ್ನು ಪರೀಕ್ಷೆ ನಂತರ ಸುತ್ತುವರೆದ ಇನ್ನುಳಿದ ಅಭ್ಯರ್ಥಿಗಳು ‘ಕೀ ಆನ್ಸರ್‌’ ಬರೆದಿದ್ದ ಚೀಟಿ ಕಸಿದುಕೊಂಡು, 2ನೇ ಬಾರಿಯೂ ಪ್ರಶ್ನೆಪತ್ರಿಕೆ ಸೋರಿಕೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದರು. ಇದಕ್ಕೆ ಪುಷ್ಟಿನೀಡುವಂತೆ, ಪರೀಕ್ಷೆ ನಂತರ ಆಯೋಗ ಪ್ರಕಟಿಸಿದ ‘ಕೀ ಆನ್ಸರ್‌’ ಹಾಗೂ ಅಭ್ಯರ್ಥಿ ಕೈಗೆ ಸಿಕ್ಕಿದ್ದ ‘ಕೀ ಆನ್ಸರ್‌’ ಚೀಟಿ ಒಂದೇ ತೆರನಾಗಿತ್ತು. ಈ ಕುರಿತ ಸಾಕ್ಷ್ಯ ಕೂಡ ತನಿಖಾಧಿಕಾರಿಗಳಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.

PSI Scam: ಎಡಿಜಿಪಿ ಮನೆಯಿಂದ ಬರಿಗೈಲಿ ವಾಪಸ್‌ ಬಂದ ಸಿಐಡಿ ತಂಡ

ಸ್ಪಷ್ಟನೆ ನೀಡಿದ್ದ ಕೆಪಿಎಸ್ಸಿ: 2021ರ ಮಾ.18ರಂದು ತಾತ್ಕಾಲಿಕ ಆಯ್ಕೆ ಪಟ್ಟಿಪ್ರಕಟಗೊಂಡಾಗ ಅಕ್ರಮದ ಆರೋಪಗಳು ದಟ್ಟವಾಗಿದ್ದವು. ಅಫಜಲ್ಪುರದವರೇ ಹೆಚ್ಚು ಆಯ್ಕೆಯಾಗಿದ್ದಾರೆ ಎಂದು ಮಾತುಗಳು ಕೇಳಿಬಂದಿದ್ದವು. ಆಗ ಇದಕ್ಕೆ ಸ್ಪಷ್ಟನೆ ನೀಡಿದ್ದ ಕೆಪಿಎಸ್ಸಿ, ವಿಜಯಪುರದ ಪರೀಕ್ಷಾ ಕೇಂದ್ರವನ್ನು ಕಪ್ಪುಪಟ್ಟಿಗೆ ಸೇರಿಸಿ, ತಪ್ಪಿತಸ್ಥ ಅಭ್ಯರ್ಥಿಗಳನ್ನು ಶಾಶ್ವತವಾಗಿ ಡಿಬಾರ್‌ ಮಾಡಿರುವುದಾಗಿ ತಿಳಿಸಿತ್ತು. ಜತೆಗೆ, ಅಫಜಲ್ಪುರದ 200ಕ್ಕೂ ಹೆಚ್ಚು ಜನ ಆಯ್ಕೆಯಾಗಿರುವ ವಿಚಾರ ಸತ್ಯಕ್ಕೆ ದೂರ ಎಂದಿತ್ತು.